ಪಂಚಾಯತ್‌ರಾಜ್‌ ಕಾಯಿದೆ ತಿದ್ದುಪಡಿಗೆ ವಿರೋಧ, ಬಿಜೆಪಿ ಪ್ರತಿಭಟನೆ

ಕುಂದಾಪುರ: ರಾಜ್ಯ ಸರಕಾರ ಪಂಚಾಯಿತಿರಾಜ್ ತಿದ್ದುಪಡಿ ವಿಧೇಯಕ ಜಾರಿಗೆ ತಂದಲ್ಲಿ ರಾಜ್ಯದ 93000 ಗ್ರಾ.ಪಂ. ಜನಪ್ರತಿನಿಧಿಗಳ ಪಾಲಿಗೆ ಕರಾಳವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹೇಳಿದರು. 
       ಪಂಚಾಯಿತಿರಾಜ್ ತಿದ್ದುಪಡಿ ವಿಧೇಯಕ ವಿರುದ್ಧ ರಾಜ್ಯದೆಲ್ಲೆಡೆ ಬಿಜೆಪಿ ಹಮ್ಮಿಕೊಂಡಿರುವ ಹೋರಾಟಕ್ಕೆ ಕುಂದಾಪುರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದ 224 ವಿಧಾನ ಕ್ಷೇತ್ರಗಳಲ್ಲಿ, 175 ತಾಲೂಕು ಮತ್ತು 30 ಜಿಲ್ಲೆಗಳಲ್ಲಿ ಹೋರಾಟ ಮುಂದುವರಿಯಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಡಿ.ವಿ. ಸದಾನಂದ ಗೌಡ ಹೇಳಿದರು. 
      ರಾಜ್ಯ ಸರಕಾರ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಗೆ ತಿಲಾಂಜಲಿಯನ್ನಿ ತ್ತಿದೆ. ವಿಧಾನಸಭೆಯಲ್ಲಿ ವಿಧೇಯಕ ಅಂಗೀಕರಿಸುವ ಮೂಲಕ ಗ್ರಾ.ಪಂ. ಸದಸ್ಯರ ಮೂಲಭೂತ ಹಕ್ಕು ಕಸಿದಿದೆ. ಮೇಲ್ಮನೆಯಲ್ಲಿ ಯಾವುದೇ ಕಾರಣಕ್ಕೂ ವಿಧೇಯಕ ಅಂಗೀಕಾರಕ್ಕೆ ಬಿಡೋದಿಲ್ಲ. ಪ್ರತಿಯೊಬ್ಬ ಗ್ರಾ.ಪಂ. ಸದಸ್ಯನ ಆಶೀರ್ವಾದ ಬಲದಿಂದ ಶಾಸಕ ಗೆದ್ದುಬರುತ್ತಾನೆ. ರಾಜ್ಯದ ಶಾಸಕರು ಹೋರಾಟವನ್ನು ಬೆಂಬಲಿಸಬೇಕು. ಗ್ರಾಮೀಣ ಜನರ ಕಟ್ಟಕಡೆಯ ಆಶಾಕಿರಣವಾಗಿರುವ ಗ್ರಾ.ಪಂ. ಪ್ರತಿನಿಧಿಗಳ ಸಾಂವಿಧಾನಿಕ ಹಕ್ಕು ಕಸಿಯುವ ಇಂತಹ ವಿಧೇಯಕ ಯಾವುದೇ ಕಾರಣಕ್ಕೂ ಜಾರಿಯಾಗಕೂಡದು ಎಂದರು. 
      ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯ ಸರಕಾರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದೆ. ವಿಧೇಯಕ ಜಾರಿಯಾದಲ್ಲಿ ತ್ರಿಸ್ತರ ಪಂಚಾಯಿತಿರಾಜ್ ವ್ಯವಸ್ಥೆಗೆ ಬಹುದೊಡ್ಡ ಹೊಡೆತ ಬೀಳಲಿದೆ ಎಂದರು. 
      ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಉದಯಕುಮಾರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ಕಿಶೋರ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಕಾವೇರಿ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶಂಕರ ಅಂಕದಕಟ್ಟೆ, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಅಬ್ದುಲ್ ಸಿಯಾಲ್, ಪುರಸಭೆ ಸದಸ್ಯರಾದ ಮೋಹನದಾಸ ಶೆಣೈ, ಸತೀಶ್ ಶೆಟ್ಟಿ, ಮಾಜಿ ಮಂಡಲ ಪ್ರಧಾನ ಬಿ. ಸದಾನಂದ ಶೆಣೈ, ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ ರವೀಂದ್ರ ದೊಡ್ಮನೆ, ಗೋಪಾಲ ಕಳಂಜಿ, ಗಣೇಶ ಭಟ್ ಪಾಲ್ಗೊಂಡಿದ್ದರು. ಬಳಿಕ ತಹಸೀಲ್ದಾರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com