ಯಕ್ಷಗಾನಕ್ಕೆ ಪ್ರೋತ್ಸಾಹ ಅಗತ್ಯ

ಕೊಲ್ಲೂರು: ಯಕ್ಷಗಾನಕ್ಕೆ ಶ್ರೀಮಂತಿಕೆಯ ಇತಿಹಾಸವಿದೆ. ಯಕ್ಷಗಾನಕ್ಕೆ ಹವ್ಯಾಸಿಗಳ ಕೊಡುಗೆಯೂ ಅನನ್ಯವಾದುದು. ಯಕ್ಷಗಾನ ಇತಿಹಾಸದಲ್ಲಿಯೇ ಹವ್ಯಾಸಿ ಸಂಘಕ್ಕೆ ಇಷ್ಟೊಂದು ದೊಡ್ಡ ಪ್ರಮಾಣದ ವೇಷಭೂಷಣ, ಪರಿಕರ ಒದಗಿಸಿರುವುದು ಇದೇ ಮೊದಲು ಎಂದು ಯಕ್ಷಗಾನದ ಹಿರಿಯ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಹೇಳಿದರು. 
      ಕೊಲ್ಲೂರು ಶ್ರೀಮೂಕಾಂಬಿಕಾ ದೇವಳದ ವಠಾರದಲ್ಲಿ ಕೊಲ್ಲೂರು ಮೂಕಾಂಬಿಕಾ ಯಕ್ಷಗಾನ ಸಂಘಕ್ಕೆ ದಾನಿಗಳು, ಊರವರು ಹಾಗೂ ಯಕ್ಷಗಾನ ಅಭಿಮಾನಿಗಳು ಕೊಡುಗೆಯಾಗಿ ನೀಡಿರುವ ಯಕ್ಷಗಾನ ಪರಿಕರ, ವೇಷಭೂಷಣ ಸಮರ್ಪಣೆ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. 
     ಯಕ್ಷಗಾನದ ಉಳಿವು ದೇವಾಲಯಗಳ ಮೂಲಕ ಆಗಿದೆ. ಮೂಕಾಂಬಿಕಾ ಯಕ್ಷಗಾನ ಸಂಘವು ಉತ್ತರೋತ್ತರ ಪ್ರಗತಿ ಹೊಂದಿ, ಯಕ್ಷಗಾನದ ಶ್ರೇಷ್ಠತೆ ಎತ್ತಿ ಹಿಡಿಯಬೇಕು. ಯಕ್ಷಗಾನಕ್ಕೆ ನಿರಂತರ ಪ್ರೋತ್ಸಾಹ ಅಗತ್ಯ ಎಂದರು. 
        ಕೊಲ್ಲೂರು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ ಅಧ್ಯಕ್ಷತೆ ವಹಿಸಿದ್ದರು. ಯಕ್ಷರಂಗ ಪತ್ರಿಕೆ ಸಂಪಾದಕ ಕಡತೋಕ ಗೋಪಾಲಕೃಷ್ಣ ಭಾಗವತ, ದೇವಳದ ಸಹಾಯಕ ಕಾರ್ಯನಿರ್ವ ಹಣಾಧಿಕಾರಿ ಕೃಷ್ಣಮೂರ್ತಿ, ಸಂಘದ ಗೌರವಾಧ್ಯಕ್ಷ ನರಸಿಂಹ ಭಟ್, ಅಧ್ಯಕ್ಷ ರಾಮಕೃಷ್ಣ ಅಡಿಗ ಉಪಸ್ಥಿತರಿದ್ದರು. 
       ಇದೇ ಸಂದರ್ಭ ಯಕ್ಷಗಾನ ಪರಿಕರ ತಯಾರಕ ಗಣೇಶ ಬಳೆಗಾರ ಜನ್ನಾಡಿ, ಸಿಂಹಾಸನ ತಯಾರಕ ಮಾರಣಕಟ್ಟೆ ನಾಗಪ್ಪಯ್ಯ ಆಚಾರ್ಯ, ಹಿರಿಯ ಕಲಾವಿದ ಮಳಲಿ ಶೀನಯ್ಯ ಮತ್ತು ಸಂತೆಗುಳಿ ನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು. ಅಶಕ್ತ ಹಿರಿಯ ಕಲಾವಿದ ಕೊಗ್ಗ ಆಚಾರ್ ಅವರಿಗೆ ನಿಧಿ ಸಲ್ಲಿಸಲಾಯಿತು. ಡಾ. ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಗಣೇಶ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com