ಎಂಬತ್ತರ ದಶಕದಲ್ಲೇ ಉದಾರೀಕರಣ ಸುಳುಹು: ಪ್ರೊ. ವೆಲೆರಿಯನ್ ರೋಡ್ರಿಗಸ್

ಕುಂದಾಪುರ: ಭಾರತದಂತಹ ದೇಶಗಳಲ್ಲಿ ಉದಾರೀಕರಣ ಪ್ರಕ್ರಿಯೆ ತೊಂಬತ್ತರ ದಶಕದಲ್ಲಿ ಅಧಿಕೃತವಾಗಿ ಜಾರಿಗೆ ಬಂದರೂ ಎಂಬತ್ತರ ದಶಕದಲ್ಲಿ ಅದರ ಸುಳುಹುಗಳನ್ನು ಔದ್ಯಮಿಕ ವಲಯದಲ್ಲಿ ಕಂಡುಕೊಳ್ಳಲು ಸಾಧ್ಯ ಎಂದು ಹಿರಿಯ ರಾಜಕೀಯ ಚಿಂತಕ, ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ವೆಲೆರಿಯನ್ ರೋಡ್ರಿಗಸ್ ಅಭಿಪ್ರಾಯಪಟ್ಟಿದ್ದಾರೆ.
     ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಶುಕ್ರವಾರ ನಡೆದ 'ಉದಾರೀಕರಣೋತ್ತರ ಭಾರತ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ' ಎಂಬ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಪಲ್ಲಟಗಳ ಸೃಷ್ಟಿ: ಕಳೆದ ಎರಡು ದಶಕಗಳ ಅವಧಿಯಲ್ಲಿ ಉದಾರೀಕರಣ ಉತ್ಪಾದಿತ ಮೌಲ್ಯಗಳು, ಚಟುವಟಿಕೆಗಳು ಮತ್ತು ಕ್ರಿಯಾಚರಣೆಗಳು ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ತೀವ್ರ ಸ್ವರೂಪದ ಪಲ್ಲಟಗಳನ್ನು ಸೃಷ್ಟಿಸಿದೆ. ಅಂತೆಯೇ ಅದು ಪ್ರಜಾಸತ್ತಾತ್ಮಕ, ಜಾತ್ಯತೀತ ಭಾರತಕ್ಕೆ ವಿಭಿನ್ನ ನೆಲೆಗಳಲ್ಲಿ ಮಹತ್ವದ ಸವಾಲುಗಳನ್ನು ಒಡ್ಡಿದೆ. ಹೀಗೆ ಉದಾರೀಕರಣ ಒಡ್ಡಿದ ಸವಾಲುಗಳನ್ನು ಸ್ವೀಕರಿಸಿ, ಅನುಷ್ಠಾನಗೊಳಿಸುವ ಹಂತದಲ್ಲಿ ಮುಖಾಮುಖಿಯಾದ ಸಂಗತಿಗಳನ್ನು ಪರಾಮರ್ಶಿಸುವ ಕಾಲ ಇದಾಗಿದೆ ಎಂದು ತಿಳಿಸಿದರು.
ಪ್ರಗತಿಪರ ರೂಪ: ರಾಷ್ಟ್ರೀಯವಾದ ಮತ್ತು ವಸಾಹತು ವಿರೋಧಿ ಆಲೋಚನೆಗಳು ಈ ಯುಗದಲ್ಲಿ ಹೊಸ ಮತ್ತು ಪ್ರಗತಿಪರ ರೂಪ ಪಡೆದುಕೊಂಡಿವೆ. ಮಾರುಕಟ್ಟೆ ಜಗತ್ತಿನಲ್ಲಿ ಪಳಗಿದ ಕೌಶಲ್ಯಪೂರ್ಣ ಮತ್ತು ಪ್ರತಿಭಾನ್ವಿತ ವ್ಯಕ್ತಿಗಳಿಗೆ ಖಾಸಗಿ ರಂಗದಲ್ಲಿ ತೆರೆದ ಔದ್ಯೋಗಿಕ ಮತ್ತು ತೊಡಗಿಕೊಳ್ಳುವ ಅವಕಾಶಗಳು ದೊರೆತಿವೆ. ಮುಖ್ಯವಾಗಿ ದಲಿತರು ಮತ್ತು ಅಂಚಿನ ಸಮುದಾಯಗಳು ಒಂದು ಹಂತದವರೆಗೆ ಸಮಾಜದ ಪ್ರಧಾನ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಆ ನಡುವೆಯೂ ಇನ್ನೊಂದೆಡೆಯಲ್ಲಿ ಅನೇಕ ಅಂಚಿನ ಸಮುದಾಯಗಳು ಖಾಸಗಿ ಮತ್ತು ಸಾರ್ವಜನಿಕ ರಂಗದಲ್ಲಿ ಮಹತ್ವದ ಅವಕಾಶಗಳಿಂದ ವಂಚಿತವಾಗಿವೆ ಎಂದು ಹೇಳಿದರು.
ಕೃತಿ ಅನಾವರಣ: ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ. ದಿನೇಶ್ ಹೆಗ್ಡೆ ಅವರ ಬ್ಯಾಕ್ವರ್ಡ್ ಕ್ಲಾಸ್ ಮೂವ್‌ಮೆಂಟ್ ಇನ್ ಇಂಡಿಯಾ  ಕೃತಿಯನ್ನು ಪ್ರೊ. ವೆಲೇರಿಯನ್ ರೋಡ್ರಿಗಸ್ ಅನಾವರಣಗೊಳಿಸಿದರು.
      ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಬಿ. ಅಪ್ಪಣ್ಣ ಹೆಗ್ಡೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಪ್ರೊ. ಎಂ. ಚಂದ್ರಪ್ರಭಾ ಆರ್ ಹೆಗ್ಡೆ ಸ್ವಾಗತಿಸಿದರು. ವಿಚಾರ ಸಂಕಿರಣದ ಸಂಚಾಲಕ ಡಾ. ಎಂ ದಿನೇಶ್ ಹೆಗ್ಡೆ ಪ್ರಸ್ತಾವಿಕ ಮಾತನಾಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಚ್. ಜಗದೀಶ್ ವಂದಿಸಿದರು. ಪ್ರಾಧ್ಯಾಪಕ ಪ್ರೊ. ಕೆ. ರಾಧಾಕೃಷ್ಣ ಶೆಟ್ಟಿ ನಿರ್ವಹಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com