ಇಂದು ಬಸ್‌ ಬಂದ್‌ ಇಲ್ಲ

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಖಾಸಗಿ ಸಿಟಿ, ಸರ್ವಿಸ್‌ ಮತ್ತು ಎಕ್ಸ್‌ಪ್ರೆಸ್‌ ಬಸ್‌ಗಳ ಕಾರ್ಮಿಕರ ನೇತೃತ್ವದಲ್ಲಿ ಜು. 17ರಂದು ನಡೆಸಲು ಉದ್ದೇಶಿಸಿದ್ದ ಬಸ್‌ಬಂದ್‌ ಪ್ರತಿಭಟನೆಯನ್ನು ದ.ಕ. ಜಿಲ್ಲಾ ಕಾರ್ಮಿಕ ಪರಿಷತ್‌ ಹಿಂದೆಗೆದುಕೊಂಡಿದೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಂಜೆ ನಡೆದ ತುರ್ತು ಸಭೆಯಲ್ಲಿ ಜಿಲ್ಲಾಧಿಕಾರಿ ಎನ್‌. ಪ್ರಕಾಶ್‌ ಅವರು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಬಸ್‌ ಬಂದ್‌ ಕರೆಯನ್ನು ಹಿಂಪಡೆಯಲಾಗಿದೆ ಎಂದು ಕಾರ್ಮಿಕ ಪರಿಷತ್‌ ಅಧ್ಯಕ್ಷ ಐವನ್‌ ಡಿ'ಸೋಜಾ ತಿಳಿಸಿದ್ದಾರೆ.

ರಾಜ್ಯ ಸರಕಾರ ಸಮರ್ಪಕ ಕಾನೂನುಗಳನ್ನು ರಚನೆ ಮಾಡಬೇಕು ಮತ್ತು ಕಾರ್ಮಿಕರಿಗೆ ವಂಚಿಸುತ್ತಿರುವ ಮಾಲಕರ ವಿರುದ್ಧ ಕಾರ್ಮಿಕರ ಆಯುಕ್ತರು ಕೇಸು ದಾಖಲಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಸರಕಾರಿ ಬಸ್‌ಗಳನ್ನು ಹಾಕಲು ಕ್ರಮ ಕೈಗೊಳ್ಳಬೇಕು ಎಂಬುದೂ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ದ.ಕ. ಜಿಲ್ಲಾ ಕಾರ್ಮಿಕ ಪರಿಷತ್‌ ಬಸ್‌ ನೌಕರರ ಸಂಘ ಜು. 17ರಂದು ಬಸ್‌ ಬಂದ್‌ಗೆ ಕರೆ ನೀಡಿತ್ತು. ಆದರೆ, ಬಸ್‌ ಮಾಲಕರು ಇದಕ್ಕೆ ಬೆಂಬಲ ಸೂಚಿಸಿರಲಿಲ್ಲ.

9 ಜನರ ಸಮಿತಿ:
        ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಜೆ 6 ಗಂಟೆಗೆ ಆರಂಭವಾದ ಸಭೆಯು ರಾತ್ರಿ 8.30ತನಕ ನಡೆದಿದ್ದು, ಕಾರ್ಮಿಕರ ಎಲ್ಲ ಸಮಸ್ಯೆ ಹಾಗೂ ಬೇಡಿಕೆಗಳಿಗೆ ಸೂಕ್ತವಾಗಿ ಪರಿಹಾರ ನೀಡುವ ಕುರಿತಂತೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. 9 ಜನರ ಸಮಿತಿಯನ್ನು ನೇಮಕ ಮಾಡಿದ್ದು, ಈ ಸಮಿತಿಯ ಮೂಲಕ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ ಎಂದು ಐವನ್‌ ಡಿ'ಸೋಜಾ ತಿಳಿಸಿದ್ದಾರೆ.

ಸಮಿತಿಯು ಜಿಲ್ಲಾಧಿಕಾರಿ ಎನ್‌ ಪ್ರಕಾಶ್‌, ಕಾರ್ಮಿಕ ಪರಿಷತ್‌ನ ಪರವಾಗಿ ಐವನ್‌ ಡಿ'ಸೋಜಾ, ಸುರೇಶ್‌, ಕೃಷ್ಣ ಅಂಚನ್‌ ಹಾಗೂ ಬಸ್‌ ಮಾಲಕರ ಪರವಾಗಿ ರಾಜವರ್ಮ ಬಲ್ಲಾಳ್‌, ಸದಾನಂದ ಚಾತ್ರ, ಜಯರಾಮ ಶೇಖ, ಆರ್‌ಟಿಓ ಸಿ. ಮಲ್ಲಿಕಾರ್ಜುನ ಹಾಗೂ ಡಿಸಿಪಿ ಧರ್ಮಯ್ಯ ಅವರನ್ನು ಒಳಗೊಂಡಿದೆ.

ಬುಧವಾರ 11.30ಕ್ಕೆ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಸ್‌ ಕಾರ್ಮಿಕರ ಒಟ್ಟು ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com