ಸತ್ತನೆಂದು ಸಂಸ್ಕಾರ ಮಾಡಿದ ಬಳಿಕ ಪ್ರತ್ಯಕ್ಷನಾದ!

ಉಡುಪಿ: ಉಡುಪಿಯಲ್ಲಿ ಜು. 14ರಂದು ಬಸ್ಸಿನ ಚಕ್ರದಡಿ ಸಿಲುಕಿ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಮನೆಮಂದಿ ತಮ್ಮೂರು ಬಾಗಲಕೋಟೆಯ ಸೂಳಿಭಾವಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಿದ್ದರು. ಆದರೆ ಜು. 21ರಂದು ಮನೆಮಂದಿಗೆ ಆಶ್ಚರ್ಯ ಕಾದಿತ್ತು. ಅಂತ್ಯಸಂಸ್ಕಾರಕ್ಕೆ ಒಳಗಾಗಿದ್ದ ಆತ ಮನೆಮುಂದೆ ಪ್ರತ್ಯಕ್ಷನಾಗಿದ್ದ.!

ಘಟನೆಯ ಹಿನ್ನೆಲೆ
      ಅಂದು ಜು. 14ರ ರಾತ್ರಿ. ನಗರದ ಸಿಟಿ ಬಸ್ಸು ನಿಲ್ದಾಣದ ಸಮೀಪ ಸಿಟಿ ಬಸ್ಸಿನ ಚಕ್ರದಡಿ ಸಿಲುಕಿ ಕೂಲಿ ಕಾರ್ಮಿಕರೊಬ್ಬರು ಸ್ಥಳದಲ್ಲಿಯೇ ಮೃತಪಡುತ್ತಾರೆ. ಮುಖ ಸಂಪೂರ್ಣ ಜಜ್ಜಿ ಹೋಗಿರುತ್ತದೆ. ಇತರ ಚಹರೆ ಗುರುತಿನಂತೆ ಪ್ರಾಥಮಿಕವಾಗಿ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಸೂಳಿಭಾವಿ ನಿವಾಸಿ ಎಂದು ತಿಳಿಯುವ ಪೊಲೀಸರು ಮನೆಮಂದಿಗೆ ಸುದ್ದಿ ಮುಟ್ಟಿಸುತ್ತಾರೆ.

ಚಹರೆಯಿಂದ ಆಯ್ತು ಎಡವಟ್ಟು.!
      ಮೃತಪಟ್ಟ ವ್ಯಕ್ತಿಯ ಎಡಗೈಯಲ್ಲಿ 'ಪರಶಪ್ಪ' ಎನ್ನುವ ಹಚ್ಚೆ ಹಾಗೂ ಬಲಗೈಯಲ್ಲಿ 'ಆಂಜನೇಯ' ದೇವರ ಚಿತ್ರವಿರುವ ಹಚ್ಚೆ, ಕೊರಳಲ್ಲಿ ಗ್ರಾಮದೇವತೆಯ ದಾರ ಇರುವುದು ಪೊಲೀಸರಿಗೆ ಪತ್ತೆಯಾಗುತ್ತದೆ. ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾಗ ಬಾಗಲಕೋಟೆ ಸೂಳಿಭಾವಿಯಿಂದ ಪರಶುರಾಮ ಎನ್ನುವಾತ ಉಡುಪಿಗೆ ಬಂದಿರುವುದು ತಿಳಿದುಬರುತ್ತದೆ. ಆ ವ್ಯಕ್ತಿಯೂ ಉಡುಪಿಯಲ್ಲಿ ಕಂಡುಬಂದಿರಲಿಲ್ಲ. ಹಾಗಾಗಿ ಆತನೇ ಇರಬಹುದು ಎಂದು ಸಂಶಯ ವ್ಯಕ್ತಪಡಿಸುವ ಪೊಲೀಸರು ಆತನ ಮನೆಮಂದಿಗೆ ವಿಷಯ ತಿಳಿಸುತ್ತಾರೆ. ಅದರಂತೆ ಪರಶುರಾಮನ ಇಬ್ಬರು ಅಣ್ಣಂದಿರು ಉಡುಪಿಗೆ ಬರುತ್ತಾರೆ. ಮುಖ ಸಂಪೂರ್ಣ ಜಜ್ಜಿ ಹೋಗಿದ್ದ ಪರಿಣಾಮ ಸತ್ತ ವ್ಯಕ್ತಿಯ ಇತರೆ ಚಹರೆಯನ್ನು ಗುರುತಿಸಿ ಇದು ನಮ್ಮ ತಮ್ಮ ಪರಶುರಾಮ ನಾಗಪ್ಪ ಹುಲ್ಯಾಳ (34) ಹೌದೆಂದು ದೃಢಪಡಿಸಿಕೊಂಡು ಊರಿಗೆ ಮೃತದೇಹ ಒಯ್ಯುತ್ತಾರೆ. ಅಂತ್ಯಸಂಸ್ಕಾರವನ್ನೂ ಮುಗಿಸುತ್ತಾರೆ. ಜು. 21ರಂದು ಸ್ವತಃ ಪರಶುರಾಮ ಮನೆಗೆ ಬಂದಾಗ ಎಲ್ಲರಿಗೂ ಕುತೂಹಲ ಆಶ್ಚರ್ಯ. ಜೊತೆಗೆ ಖುಷಿ.

ಇಷ್ಟೆಲ್ಲಾ ಆಗುವಾಗ 'ಪರಶುರಾಮ' ಎಲ್ಲಿದ್ದ?
      ಊರಿನಿಂದ 9 ತಿಂಗಳ ಹಿಂದೆ ಉಡುಪಿಗೆ ಕೆಲಸ ಅರಸಿ ಬಂದಿದ್ದ ಪರಶುರಾಮ ವಿವಿಧ ಕಡೆಗಳಲ್ಲಿ ಕೂಲಿ ಕೆಲಸಗಳನ್ನೆ ಮಾಡುತ್ತಿದ್ದರು. ಮನೆಮಂದಿಗೆ ಅಪರೂಪಕ್ಕೊಮ್ಮೆ ಕರೆ ಮಾಡುತ್ತಿದ್ದರಷ್ಟೆ. ಜು. 14ರಂದು ನಗರದಲ್ಲಿ ಕೂಲಿ ಕಾರ್ಮಿಕನೊಬ್ಬ ಮೃತಪಟ್ಟಾಗ ಸೂಳಿಭಾವಿಯ ಪರಶುರಾಮ ಉಡುಪಿಯಲ್ಲಿ ಇರಲಿಲ್ಲ. ಈ ವೇಳೆ ಮನೆಮಂದಿ ಆತನ ಮಿತ್ರರಿಗೆ ಫೋನ್‌ ಮಾಡಿದರೂ ಪರಶುರಾಮನ ಪತ್ತೆಯಾಗಿರಲಿಲ್ಲ. ಹಾಗಾಗಿ ಆತನೇ ಮೃತಪಟ್ಟಿರಬಹುದೆಂದು ಸಂಶಯಿಸುತ್ತಾರೆ. ಆ ಸಂದರ್ಭದಲ್ಲಿ ಪರಶುರಾಮ ಉಡುಪಿ ಬಿಟ್ಟು ಬೇರೆಡೆಯಲ್ಲಿ ಕೆಲಸ ಮಾಡುತ್ತಿದ್ದ. ಮೊಬೈಲ್‌ ಕೂಡ ಆತನಲ್ಲಿ ಇರಲಿಲ್ಲ. ಜು. 20ರಂದು ಪರಶುರಾಮ ಉಡುಪಿಗೆ ಬರುತ್ತಾನೆ. ಆಗ ಆತನ ಮಿತ್ರರಿಗೆ ಆಶ್ಚರ್ಯವಾಗುತ್ತದೆ. ಸತ್ತವ ಮತ್ತೆ ಬಂದನಲ್ಲಾ ಎಂದು. ಆತನಲ್ಲಿ ವಿಷಯ ತಿಳಿಸುತ್ತಾರೆ. ಆಗ ಸತ್ತ ವ್ಯಕ್ತಿ ಈತನಲ್ಲ ಎನ್ನುವ ಸಂಗತಿ ತಿಳಿದುಬರುತ್ತದೆ. ಆ ಕೂಡಲೇ ಪರಶುರಾಮ ತಾಯಿಗೆ ಫೋನ್‌ ಮಾಡಿ ತಾನು ಬದುಕಿರುವ ಸಂಗತಿ ತಿಳಿಸುತ್ತಾನೆ. ಆದರೆ ಮನೆಮಂದಿ ಯಾರೂ ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಅದಕ್ಕಾಗಿ ಅಂದೇ ಉಡುಪಿಯಿಂದ ಹೊರಟು ಜು. 21ರಂದು ತನ್ನೂರಿಗೆ ತೆರಳಿ ವಿಷಯ ತಿಳಿಸುತ್ತಾನೆ. ಒಂದು ವಾರ ಕಾಲ ಚಿಂತೆಯಲ್ಲಿದ್ದ ಮನೆಮಂದಿ ಸಂತೋಷಪಡುತ್ತಾರೆ. ಎಡವಟ್ಟು ಎಲ್ಲಾಯಿತೋ? ತಿಳಿಯದು. ನಮ್ಮಗ ಬಂದನಲ್ಲಾ... ಎಂದು ಸಂತಸಪಟ್ಟರು.

ಹಾಗಾದರೆ ಸತ್ಯ ವ್ಯಕ್ತಿ ಯಾರು.?
       ಹೌದು. ಇಷ್ಟೆಲ್ಲಾ ಎಡವಟ್ಟಾಯ್ತು. ಸೂಳಿಭಾವಿಯ ಪರಶುರಾಮನ ಕುಟುಂಬಕ್ಕೆ ಒಂದು ಕಡೆ ಸಂತಸ. ಮತ್ತೂಂದು ಕಡೆ ಸತ್ತವನಾರು? ಯಾರಧ್ದೋ ದೇಹವನ್ನು ನಾವು ತಂದು ಎಲ್ಲ ಸಂಸ್ಕಾರಗಳನ್ನೂ ಮುಗಿಸಿಬಿಟ್ಟೆವಲ್ಲಾ ಎನ್ನುವ ಚಿಂತೆ ಕಾಡುತ್ತಲೇ ಇದೆ. ಈ ಪ್ರಕರಣದಲ್ಲಿ ಪೊಲೀಸರಿಗೂ ತಲೆನೋವಾಗಿದೆ. ಸತ್ತ ವ್ಯಕ್ತಿಯ ಗುರುತು ಪತ್ತೆಗೆ ಎಲ್ಲ ಚಹರೆಗಳ ಫೋಟೋ ಇನ್ನಿತರ ಪೂರಕ ಮಾಹಿತಿಗಳನ್ನು ಇಟ್ಟುಕೊಂಡು ಉಡುಪಿ ನಗರ ಟ್ರಾಫಿಕ್‌ ಪೊಲೀಸರ ಒಂದು ತಂಡ ಜು. 22ರಂದು ಬಾಗಲಕೋಟೆ ಜಿಲ್ಲೆಗೆ ಪಯಣ ಬೆಳೆಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com