ತಾಲೂಕು ರಚನೆಯಲ್ಲಿ ಗ್ರಾ.ಪಂ ನಿರ್ಣಯಕ್ಕೆ ಮನ್ನಣೆ-ಕೆ.ಗೋಪಾಲ ಪೂಜಾರಿ

ಕುಂದಾಪುರ: ‘ವಂಡ್ಸೆ ಹೋಬಳಿಗೆ  ವಿಶೇಷ ತಹಶೀಲ್ದಾರ್ ನೇಮಕ ಮಾಡುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.  ಹೊಸ ತಾಲೂಕುಗಳ ರಚನೆ ಆಗುವಾಗ  ಗ್ರಾಮ ಪಂಚಾಯತ್ ನಿರ್ಣಯಗಳಿಗೆ ಮನ್ನಣೆ ನೀಡಲು ಸಂಬಂಧಪಟ್ಟವರಿಗೆ ಸೂಚಿಸುತ್ತೇನೆ’ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
  ವಂಡ್ಸೆ ಗ್ರಾಮ ಪಂಚಾಯತ್‍ಗೆ ಭೇಟಿ ನೀಡಿ, ಗ್ರಾಮಸ್ಥರ ಸಮಸ್ಯೆಗೆಗಳನ್ನು ಆಲಿಸಿದ ನಂತರ ಅವರು  ಸಭೆಯನ್ನುದ್ದೇಶಿಸಿ ಮಾತನಾಡಿದರು. ‘ವಂಡ್ಸೆ ಕಳಿವಿನಬಾಗಿಲು-ಬಗ್ವಾಡಿ ದೇವಸ್ಥಾನದ ತನಕ ಸಂಪರ್ಕ ರಸ್ತೆ ನಿರ್ಮಾಣಕ್ಕೆ ತೊಡಕ್ಕಾಗಿರುವ ಜಮೀನು ವಿವಾದ ಬಗೆಹರಿದರೆ ರಸ್ತೆ ನಿರ್ಮಿಸಿಕೊಡುವುದು ನನ್ನ ಜವಾಬ್ದಾರಿ’ ಎಂದು ತಿಳಿಸಿದ ಅವರು, ‘ಈಗಾಗಲೇ ಕ್ಷೇತ್ರಾದ್ಯಂತ ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ಆಗಿದೆ. ಜನರ ಭಾವನೆಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಡಿತರ ಚೀಟಿ ಗೊಂದಲದಿಂದ ಬಡವರಿಗಾದ ತೊಂದರೆ ನನ್ನ ಗಮನದಲ್ಲಿದೆ. ಈಗಾಗಲೇ ಆಹಾರ ಸಚಿವರನ್ನು ಭೇಟಿ ಮಾಡಿದ್ದೇನೆ. ನಿಜವಾದ ಅರ್ಹರಿದ್ದರೆ ಅವರಿಗೆ ಪಡಿತರ ಚೀಟಿ ನೀಡಲು ನಾನು ಬದ್ಧನಿದ್ದೇನೆ’ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ವಂಡ್ಸೆ ಹೋಬಳಿ ಕೇಂದ್ರವಾದರೂ ಸುವರ್ಣ ಗ್ರಾಮ ಯೋಜನೆ ಬಂದಿಲ್ಲ, ಸಮುದಾಯ ಭವನದ ಕೊರತೆ ಗ್ರಾಮದಲ್ಲಿದೆ. ತೆಂಕೊಡಿಗೆ-ಕಳಿ ರಸ್ತೆ,  ಆತ್ರಾಡಿ ರಸ್ತೆ ಡಾಮರಿಕರಣ ಆಗಬೇಕಿದೆ. ಗ್ರಾಮದ ಎಲ್ಲಾ ಸರ್ಕಾರಿ ಕಛೇರಿಗಳು ಬಾಡಿಗೆ ಕಟ್ಟಡದಲ್ಲಿದೆ. ಒಂದೇ ಸಂಕೀರ್ಣದಲ್ಲಿ ಎಲ್ಲಾ ಕಛೇರಿಯನ್ನು ತರುವುದು, ನಿವೇಶನ ಹಂಚಿಕೆಗೆ 6.90 ಸೆಂಟ್ಸ್ ಸ್ಥಳ ಗುರುತಿಸಿದ್ದು ಅದನ್ನು ಗ್ರಾ.ಪಂ.ಗೆ ಮಂಜೂರು ಮಾಡುವುದು, ಪ್ರಸ್ತಾವಿತ ಬೈಂದೂರು ತಾಲೂಕಿಗೆ ವಂಡ್ಸೆ ಹೋಬಳಿಯನ್ನು ಸೇರಿಸದೇ ಇರುವುದು ಇತ್ಯಾದಿ ಬೇಡಿಕೆಗಳನ್ನು ಶಾಸಕರ ಮುಂದಿಟ್ಟರು.
ಈ ಸಂದರ್ಭದಲ್ಲಿ  ಶಾಸಕರಾದ ನಂತರ ಪ್ರಥಮ ಬಾರಿಗೆ ಗ್ರಾ.ಪಂ.ಗೆ ಭೇಟಿ ನೀಡುತ್ತಿರುವ ಶಾಸಕರನ್ನು ಸನ್ಮಾನಿಸಲಾಯಿತು. ಜಿ.ಪಂ ಮಾಜಿ ಅಧ್ಯಕ್ಷ ರಾಜು ದೇವಾಡಿಗ, ತಾ.ಪಂ ಸದಸ್ಯ ಹರ್ಕೂರು ಮಂಜಯ್ಯ ಶೆಟ್ಟಿ, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಪಿಗೇಡಿ ಸಂಜೀವ ಶೆಟ್ಟಿ, ಗ್ರಾ.ಪಂ ಮಾಜಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಸಂಜೀವ ಪೂಜಾರಿ, ಗ್ರಾ.ಪಂ ಸದಸ್ಯರಾದ ಲಕ್ಷ್ಮೀ ಆತ್ರಾಡಿ, ಗಿರಿಜಾ, ಮಲ್ಲಿಕಾ, ಗಿರಿಜಾ ಬಾಳೆಗುಡ್ಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತರಿಸಿದರು. ಶಶಿಧರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನಾರಾಯಣ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಶಂಕರ ಆಚಾರ್ಯ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com