ಬಿ.ಪಿ.ಎಲ್‌ ಕಾರ್ಡುದಾರರಿಗೆ ಕ್ಯಾನ್ಸರ್‌ ಚಿಕಿತ್ಸಾ ಸೌಲಭ್ಯ

ಕುಂದಾಪುರ: ಭಾರತ ಸರಕಾರವು 21 ರಾಜ್ಯದ 100 ಜಿಲ್ಲೆಗಳಲ್ಲಿ ರಾಷ್ಟ್ರೀಯ ಕ್ಯಾನ್ಸರ್‌, ಮಧುಮೇಹ, ಹೃದಯ ಸಂಬಂಧಿ ಕಾಯಿಲೆ ಮತ್ತು ಸ್ಟ್ರೋಕ್‌ ಇದರ ನಿಯಂತ್ರಣ ಹಾಗೂ ತಡೆಗಟ್ಟುವ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ.
      ಕರ್ನಾಟಕದ 5 ಜಿಲ್ಲೆಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಉಡುಪಿ ಜಿಲ್ಲೆಯೂ ಒಂದಾಗಿದ್ದು, ಈ ಕಾರ್ಯಕ್ರಮವು ಈ ಜಿಲ್ಲೆಯಲ್ಲಿ 2011-12ನೇ ಸಾಲಿನಲ್ಲಿ ಪ್ರಾರಂಭಗೊಂಡಿರುತ್ತದೆ. ಈ ಕಾರ್ಯಕ್ರಮದಲ್ಲಿ ಕ್ಯಾನ್ಸರ್‌ ವಿಭಾಗದಲ್ಲಿ ರಾಜ್ಯ ಹೆಲ್ತ್‌ ಸೊಸೈಟಿಯೊಂದಿಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯು ಉಡುಪಿ ಜಿಲ್ಲೆಯ ಫ‌ಲಾನುಭವಿಗಳಿಗೆ 4-2-2013ರಿಂದ ಒಂದು ವರ್ಷದ ಅವಧಿಗೆ ಒಡಂಬಡಿಕೆ ಮಾಡಿಕೊಂಡಿದೆ.
       ಉಡುಪಿ ಜಿಲ್ಲೆಯ ಎಲ್ಲ ವಯಸ್ಸಿನ ಬಿ.ಪಿ.ಎಲ್‌. ಕುಟುಂಬದವರು ಈ ಕಾರ್ಯಕ್ರಮದ ಫ‌ಲಾನುಭವಿಗಳಾಗಿರುತ್ತಾರೆ. (ಹೊರ ಜಿಲ್ಲೆಯವರು ಪ್ರಯೋಜನವನ್ನು ಪಡೆಯುವಂತಿಲ್ಲ). ಫ‌ಲಾನುಭವಿಗಳು ವಾರ್ಷಿಕ 100 ಮಾತ್ರ ಆಗಿದ್ದು ಪ್ರಥಮ 100 ಜನರಿಗೆ ಮಾತ್ರ ಈ ಕಾರ್ಯಕ್ರಮದ ಸದುಪಯೋಗವಾಗಲಿದೆ.
    ಕಾರ್ಯಕ್ರಮದಲ್ಲಿ ಕ್ಯಾಂಪ್‌ ಮೂಲಕ ಅಥವಾ ಜಿಲ್ಲಾ ಸರ್ಜನ್ನರ ಮುಖಾಂತರ ಮಾತ್ರ ರೋಗಿಯನ್ನು ರೆಫ‌ರ್‌ ಮಾಡಬೇಕಾಗಿದೆ. ತಾಲೂಕು ಮಟ್ಟದಲ್ಲಿ ಜಿಲ್ಲೆಯಲ್ಲಿ ತಿಂಗಳಿಗೊಂದರಂತೆ 12 ತಿಂಗಳು ಕ್ಯಾನ್ಸರ್‌ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಕುಂದಾಪುರ ತಾಲೂಕಿನಲ್ಲಿ 2, ಕಾರ್ಕಳದಲ್ಲಿ 2 ಮತ್ತು ಉಡುಪಿಯಲ್ಲಿ 1 ಶಿಬಿರವನ್ನು ಆಯೋಜಿಸಲಾಗಿದೆ. ಅದರಲ್ಲಿ 196 ಶಿಬಿರಾರ್ಥಿಗಳು ಹಾಜರಾಗಿದ್ದು 35 ಜನರನ್ನು ಕಸ್ತುರ್ಬಾ ಆಸ್ಪತ್ರೆಗೆ ರೆಫ‌ರ್‌ ಮಾಡಲಾಗಿದೆ.
     ಕೆಲವೊಂದು ಬಾರಿ ಫ‌ಲಾನುಭವಿಗಳು ಸಂಶಯವಿದ್ದಲ್ಲಿ ಅಥವಾ ಮುಂದಿನ ಚಿಕಿತ್ಸೆಗಾಗಿ ಜಿಲ್ಲಾ ಸರ್ಜನ್ನರ ರೆಫ‌ರಲ್‌ ಕಾರ್ಡ್‌ನೊಂದಿಗೆ ಸಹ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಪ್ರಯೋಜನವನ್ನು ಪಡೆಯಬಹುದು.
      ಜಿಲ್ಲೆಯಲ್ಲಿ ಇದುವರೆವಿಗೂ 37 ರೋಗಿಗಳು ಈಗಾಗಲೇ ಚಿಕಿತ್ಸಾ ಸೌಲಭ್ಯವನ್ನು ಪಡೆದುಕೊಂಡಿರುತ್ತಾರೆ.
     ಕ್ಯಾಂಪ್‌ ಅಥವಾ ಜಿಲ್ಲಾ ಸರ್ಜನ್ನರಿಂದ ರೆಫ‌ರ್‌ ಮಾಡಿದ ದಿನಾಂಕದಿಂದ ಚಿಕಿತ್ಸೆ ಒಳಗಾಗುವವರಿಗೆ ಮಾತ್ರ ವೆಚ್ಚವನ್ನು ಭರಿಸಬಹುದಾಗಿದ್ದು ಈಗಾಗಲೇ ಚಿಕಿತ್ಸೆ ಪಡೆದವರಿಗೆ ಹಿಂದಿನ ವೆಚ್ಚವನ್ನು ಈ ಕಾರ್ಯಕ್ರಮದಲ್ಲಿ ಭರಿಸಲಾಗುವುದಿಲ್ಲ.

ಸಾರ್ವಜನಿಕರು ಈ ಕೆಳಗೆ ನಮೂದಿಸಿದ ಕ್ಯಾನ್ಸರಿನ ಮುನ್ಸೂಚನೆಯನ್ನು ಗಮನಿಸಿ ಸಂಬಂಧಪಟ್ಟ ಆರೋಗ್ಯ ಸಂಸ್ಥೆ/ಕಾರ್ಯಕರ್ತರ ಸಹಕಾರದೊಂದಿಗೆ ಕಾರ್ಯಕ್ರಮದ ಸಂಪೂರ್ಣ ಲಾಭವನ್ನು ಪಡೆಯುವಂತೆಯೂ ಹಾಗೂ ಸಾಕಷ್ಟು ಮುಂಚಿತವಾಗಿ ಕ್ಯಾನ್ಸರನ್ನು ಪತ್ತೆ ಹಚ್ಚಿ ರೋಗಿಯು ಹೆಚ್ಚಿನ ಸಂಖ್ಯೆಯಲ್ಲಿ ಸಂಪೂರ್ಣವಾಗಿ ಗುಣಮುಖರಾಗುವಂತೆ ವಿನಂತಿಯನ್ನು ಮಾಡಿಕೊಳ್ಳಲಾಗಿದೆ.

ಕ್ಯಾನ್ಸರಿನ ಮುನ್ಸೂಚನೆಗಳು

ಮಲವಿಸರ್ಜನೆಯಲ್ಲಿ ಅಥವಾ ಮೂತ್ರ ವಿಸರ್ಜನೆಯಲ್ಲಿ ಏರುಪೇರು, ವಾಸಿಯಾಗದ ಗಾಯ, ಅಸಹಜವಾದ ರಕ್ತಸ್ರಾವ ಅಥವಾ ಸೋರಿಕೆ, ಎದೆಯಲ್ಲೋ ಅಥವಾ ಮತ್ತೆಲ್ಲೊ ಗಡ್ಡೆ ಕಟ್ಟಿರುವುದು, ಅಜೀರ್ಣ ಅಥವಾ ಆಹಾರ ನುಂಗಲಿಕ್ಕೆ ಅಥವಾ ನೀರು ಕುಡಿಯಲಿಕ್ಕೆ ಆಗದಿರುವುದು ಕಷ್ಟವಾಗುವುದು, ಮಚ್ಚೆಗಳಲ್ಲಿ ಬದಲಾವಣೆ ಆಗಿರುವುದು, ಒಂದೇ ಸಮನಾಗಿ ಒತ್ತಿ ಒತ್ತಿ ಕೆಮ್ಮ ಬರುವುದು ಅಥವಾ ಗಂಟಲು ಕಟ್ಟುವುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನೋಡಲ್‌ ಅಧಿಕಾರಿ ಎನ್‌ಸಿಡಿ ಘಟಕ/ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಯವರನ್ನು ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿರುತ್ತಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com