ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ, ಹಲವೆಡೆ ನೆರೆ ಭೀತಿ

ಕುಂದಾಪುರ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಆರ್ದ್ರಾ ಮಳೆ ಎಡೆಬಿಡದೆ ಸುರಿಯುತ್ತಿದ್ದು ತಗ್ಗುಪ್ರದೇಶಗಳು ಜಲಾವೃತಗೊಂಡು ಹಲವೆಡೆ ನೆರೆ ಭೀತಿ ಆವರಿಸಿದೆ. 
      ಹಂಗಳೂರು ಗ್ರಾ.ಪಂ. ವ್ಯಾಪ್ತಿಯ ನೇರಂಬಳ್ಳಿ, ಚೋಕೋಡಿ ಬೆಟ್ಟು ಪ್ರದೇಶ, ಮಾರಣಕಟ್ಟೆ, ನಾವುಂದ ಗ್ರಾಮದ ಸಾಲ್ಬುಡ, ಆನಗಳ್ಳಿ, ಹೇರಿಕುದ್ರು, ಹೆಮ್ಮಾಡಿ ಹೊಸ್ಕಳಿ, ಜಾಲಾಡಿ, ಮೂವತ್ತುಮುಡಿ, ಬಳ್ಕೂರು ಗ್ರಾಮದಲ್ಲಿ ನೆರೆ ಭೀತಿ ಎದುರಾಗಿದೆ. 
     ಬೀಜಾಡಿ ಸರಕಾರಿ ಪ್ರೌಢಶಾಲೆ ಆವರಣಕ್ಕೆ ನೆರೆ ನೀರು ನುಗ್ಗಿ, ಹೊಸತೊಪ್ಲು ನಲ್ಲಿ ತೋಡು ಒಡೆದು ದಲಿತ ಕಾಲೋನಿಗೆ ನೆರೆ ನೀರು ನುಗ್ಗಿದೆ. ನೂರಾರು ಎಕರೆ ಕಷಿಭೂಮಿ ಸಂಪೂರ್ಣ ಜಲಾವತಗೊಂಡಿದೆ. ಬಸ್ರೂರು-ಕುಂದಾಪುರ ನಡುವಿನ ಹುಣ್ಸೆಕಟ್ಟೆ ಸೇತುವೆ ಪರಿಸರ ನೀರಿನಲ್ಲಿ ಮುಳುಗಿದೆ. ಕೋಡಿಯಲ್ಲಿ ತೆಂಗಿನ ತೋಪುಗಳು, ಮನೆಗಳು ಜಲಾವತಗೊಂಡಿವೆ. ಬೀಜಾಡಿ ಚಾತ್ರಬೆಟ್ಟು ಪ್ರದೇಶದ ಬಡಾಗಡಿ ನಾಗಬೊಬ್ಬರ್ಯ ದೆವಸ್ಥಾನ ವಠಾರಕ್ಕೆ ನೆರೆ ನೀರು ನುಗ್ಗಿದ್ದು ನಿವಾಸಿಗಳು ಸಂಕಷ್ಟಕ್ಕೀಡಾಗಿದ್ದಾರೆ. 

20 ಮನೆ ಜಲಾವೃತ: ಹೊಸತೊಪ್ಲು ದಲಿತ ಕಾಲೋನಿಯ 20 ಮನೆಗಳು ಸಂಪೂರ್ಣ ಜಲಾವತಗೊಂಡಿವೆ. ಎಂಟು ಮನೆಗಳಿಗೆ ಈಗಾಗಲೆ ನೀರು ನುಗ್ಗಿದ್ದು ಅವರು ಮನೆ ತೊರೆದಿದ್ದಾರೆ. ಕಾಲೊನಿಗೆ ಸಂಪರ್ಕ ಕಲ್ಪಿಸುವ ಕಾಲುಸಂಕ ಮುಳುಗುವ ಸನ್ನಾಹದಲ್ಲಿದೆ. ಕೋಟೇಶ್ವರ, ಕಾಳಾವರ, ಜನ್ನಾಡಿ, ಬಸ್ರೂರು ಪೇಟೆಗಳಿಂದ ಹರಿದು ಬರುವ ನೀರಿನ ದೊಡ್ಡ ಹಳ್ಳಕ್ಕೆ ಕಟ್ಟಲಾದ ಕಾಲುಸಂಕ ದುರ್ಬಲವಾಗಿದ್ದು ಈಗಲೊ ನಾಳೆಯೊ ಎಂಬಂತಿದೆ. ನೀರಿನ ಹರಿವಿನ ಅಬ್ಬರಕ್ಕೆ ಕೊಚ್ಚಿ ಹೋದಲ್ಲಿ ದಲಿತ ಕಾಲೋನಿಯ ನೂರಾರು ಮಂದಿ ಅಡಕತ್ತರಿಗೆ ಸಿಲುಕಲಿದ್ದಾರೆ. ಇಲ್ಲಿನ ಜನರಿಗೆ ಜೀವನಾಧಾರವಾಗಿರುವ ಗೇರು ಬೀಜ ಕಾರ್ಖಾನೆಗೂ ನೀರು ನುಗ್ಗಿದ್ದು, ಜನ ಇದರಿಂದಲೂ ಆತಂಕಿತರಾಗಿದ್ದಾರೆ. 

 ಮಾರಣಕಟ್ಟೆ ದೇವಳ ಜಲಾವೃತ: ಮಂಗಳವಾರದ ಅಬ್ಬರದ ಮಳೆಗೆ ಮಾರಣಕಟ್ಟೆ ದೇವಳ ಸಮೀಪದ ನದಿ ಉಕ್ಕಿ ಹರಿದ ಪರಿಣಾಮ ದೇವಸ್ಥಾನ ಹಾಗೂ ಭೋಜ ಶಾಲೆ ಜಲಾವೃತಗೊಂಡಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com