153 ಬಾರಿ ಚುನಾವಣೆಯಲ್ಲಿ ಸೋತ ಡಾ.ಕೆ.ಪದ್ಮರಾಜನ್‌. ಚುನಾವಣೆ ಸ್ಪರ್ಧೆಯಲ್ಲಿ ಲಿಮ್ಕಾ ದಾಖಲೆ

ಬೆಂಗಳೂರು: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ವಿರುದ್ಧ ಸ್ಪರ್ಧಿಸಿ ಸೋತಿದ್ದಲ್ಲದೇ ರಾಷ್ಟ್ರದ ಘಟಾನುಘಟಿ ರಾಜಕಾರಣಿಗಳಾದ ವಾಜಪೇಯಿ, ಪ್ರಣಬ್‌ ಮುಖರ್ಜಿ, ಬಂಗಾರಪ್ಪ, ಯಡಿಯೂರಪ್ಪ, ಜಯಲಲಿತಾ ಸ್ಪರ್ಧಿಸಿ ಸೋತಿದ್ದ ತಮಿಳುನಾಡಿನ ಪದ್ಮರಾಜನ್‌ ಈಗ ಬೆಂಗಳೂರು ಗ್ರಾಮಾಂತರ ಲೋಕ ಸಭಾ ಕಣಕ್ಕಿಳಿದಿದ್ದಾರೆ.
ತಮಿಳುನಾಡಿನ ಮೆಟ್ಟೂರು ನಿವಾಸಿ ಡಾ.ಕೆ.ಪದ್ಮರಾಜನ್‌ ಶನಿವಾರ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿಂದೆ 153 ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲು ಕಂಡು ಲಿಮ್ಕಾ ದಾಖಲೆಗೂ ಸೇರಿದ ಈ 'ಚುನಾವಣಾ ಕಿಂಗ್‌' ಈಗ ಗ್ರಾಮಾಂತರದಿಂದ 154ನೇ ಬಾರಿಗೆ ಕಣಕ್ಕೆ ಇಳಿದಿದ್ದಾರೆ.
2004ರಲ್ಲಿ ಎಚ್‌.ಡಿ.ಕುಮಾರಸ್ವಾಮಿಯವರ ವಿರುದ್ಧವೂ ಸ್ಪರ್ಧಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಮಾಜಿ ಸಿಎಂ ಶೆಟ್ಟರ್‌ ವಿರುದ್ಧವೂ ಸ್ಪರ್ಧಿಸಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಎಂ.ಕೃಷ್ಣ, ಬಂಗಾರಪ್ಪ, ಯಡಿಯೂರಪ್ಪ, ರಾಷ್ಟ್ರಪತಿ ಚುನಾವಣೆಯಲ್ಲಿ ಮಾಜಿ ರಾಷ್ಟ್ರಪತಿಗಳಾದ ಅಬ್ದುಲ್‌ ಕಲಾಂ, ಪ್ರತಿಭಾ ಪಾಟೀಲ್‌, ಹಾಲಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ಕೆ.ಆರ್‌.ನಾರಾಯಣ್‌ ಮುಂತಾದವರ ವಿರುದ್ಧವೂ ಸ್ಪರ್ಧಿಸಿದ್ದರು. ಮಾಜಿ ಪ್ರಧಾನಿಗಳಾದ ವಾಜಪೇಯಿ, ಪಿ.ವಿ.ನರಸಿಂಹರಾವ್‌ ವಿರುದ್ಧವೂ ಸ್ಪರ್ಧಿಸಿದ್ದ ಇವರು ತಮಿಳು ನಾಡಿನ ಮುಖ್ಯಮಂತ್ರಿ ಜಯಲಲಿತಾ, ಮಾಜಿ ಮುಖ್ಯಮಂತ್ರಿ ಕರುಣಾನಿಧಿ, ಕೇರಳ ಸಿಎಂ ಆಗಿದ್ದ ಎ.ಕೆ.ಆಂಟನಿ, ಕೆ.ಕರುಣಾಕರನ್‌ ವಿರುದ್ಧ ವೂ ಸ್ಪರ್ಧಿಸಿ ಸೋಲುಂಡಿದ್ದರು. ಸಾರ್ವತ್ರಿಕ ಚುನಾವಣೆಗಳಲ್ಲಿ ಅತಿ ಹೆಚ್ಚು ಬಾರಿಗೆ ಸೋಲುಂಡ ವ್ಯಕ್ತಿ ಎಂದು ಲಿಮ್ಕಾ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ಇವರು ಸ್ಥಾನಗಿಟ್ಟಿಸಿದ್ದಾರೆ.

ಸೋಲಿನ ಹಾದಿ....
ಲೋಕಸಭೆ-24
ರಾಜ್ಯಸಭೆ-28
ರಾಷ್ಟ್ರಪತಿ- 4
ಉಪ ರಾಷ್ಟ್ರಪತಿ- 4
ವಿಧಾನ ಸಭೆ-47
ವಿಧಾನ ಪರಿಷತ್‌ 2
ಮೇಯರ್‌- 2
ನಿಗಮ ಮಂಡಳಿ ಅಧ್ಯಕ್ಷ-3
ಕೌನ್ಸಿಲರ್‌-11
ವಾರ್ಡ್‌-3
ಇತರೆ- 25
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com