ಮಾಸ್ಕೋ ವಿಶ್ವ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ಗೆ ಅಶ್ವಿ‌ನಿ ಅಕ್ಕುಂಜೆ ಆಯ್ಕೆ

ಸುದ್ದಿಲೋಕ: ಕರ್ನಾಟಕದ ಅಶ್ವಿ‌ನಿ ಅಕ್ಕುಂಜೆ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಎರಡು ವರ್ಷದ ಶಿಕ್ಷೆ ಪೂರೈಸಿದ ಬೆನ್ನಲ್ಲೇ ಭಾರತ ತಂಡಕ್ಕೆ ಮರಳಿದ್ದು ಪದಕದ ಬೇಟೆ ಆರಂಭಿಸಲಿದ್ದಾರೆ.
      ಮುಂದಿನ ತಿಂಗಳು 10ರಿಂದ 18ರವರೆಗೆ ಮಾಸ್ಕೋದಲ್ಲಿ ನಡೆಯಲಿರುವ ವಿಶ್ವ ಆ್ಯತ್ಲೆಟಿಕ್‌ ಚಾಂಪಿಯನ್‌ಶಿಪ್‌ಗೆ ಶನಿವಾರ ಭಾರತೀಯ ಆ್ಯತ್ಲೆಟಿಕ್ಸ್‌ ಒಕ್ಕೂಟ ಪ್ರಕಟಿಸಿದ 15 ಆ್ಯತ್ಲೀಟ್‌ಗಳ ತಂಡದಲ್ಲಿ ಅಶ್ವಿ‌ನಿ ಸ್ಥಾನ ಪಡೆದಿದ್ದಾರೆ. ಇದರೊಂದಿಗೆ ರಾಷ್ಟ್ರೀಯ ತಂಡದಲ್ಲಿ ಕರ್ನಾಟಕ ಸ್ಪರ್ಧಿಗಳ ಸಂಖ್ಯೆ ಮೂರಕ್ಕೇರಿದೆ. ಈಗಾಗಲೇ ಎಂ.ಆರ್‌. ಪೂವಮ್ಮ ಮತ್ತು ವಿಕಾಸ್‌ ಗೌಡ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದ್ದರು.
      ವನಿತೆಯರ 4*400ಮೀ. ರಿಲೆಯಲ್ಲಿ ಅಶ್ವಿ‌ನಿ ಮತ್ತೆ ಭಾರತ ತಂಡವನ್ನು ಪ್ರತಿನಿಧಿಸಲಿದ್ದು, ಅವರೊಂದಿಗೆ ಕರ್ನಾಟಕದ ಮತ್ತೂಬ್ಬ ತಾರೆ ಎಂ.ಆರ್‌. ಪೂವಮ್ಮ, ಟಿಂಟು ಲೂಕಾ, ಅನು ಮರಿಯಾಮ್‌ ಜೋಸ್‌, ನಿರ್ಮಲಾ ಮತ್ತು ಅನಿಲ್ಡಾ ಥಾಮಸ್‌ ಸ್ಥಾನ ಪಡೆದಿದ್ದಾರೆ.
          2011 ಜುಲೈ 3ರಂದು ಪಟಿಯಾಲದಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಉದ್ದೀಪನ ಮದ್ದು ಪ್ರಕರಣದಲ್ಲಿ ಅಶ್ವಿ‌ನಿ ಸೇರಿದಂತೆ ದೇಶದ ಅಗ್ರಮಾನ್ಯ 6 ವನಿತಾ ಆ್ಯತ್ಲೀಟ್‌ಗಳು ಸಿಕ್ಕಿಬಿದ್ದಿದ್ದರು. ಏಶ್ಯನ್‌ ಗೇಮ್ಸ್‌ನ ಡಬಲ್‌ ಚಿನ್ನದ ಪದಕ ವಿಜೇತೆ ಅಶ್ವಿ‌ನಿ ಶುಕ್ರವಾರ ನಡೆದ ಟ್ರಯಲ್ಸ್‌ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ವಿಶ್ವ ಆ್ಯತ್ಲೆಟಿಕ್ಸ್‌ಗೆ ಅರ್ಹತೆ ಪಡೆದಿದ್ದರು.
        ನಡಿಗೆ ಸ್ಪರ್ಧೆಗೆ 6 ಆ್ಯತ್ಲೀಟ್‌ಗಳನ್ನು ಆಯ್ಕೆ ಮಾಡಲಾಗಿದ್ದು, ಪುರುಷರ 20 ಕಿ.ಮೀ. ನಡಿಗೆಯಲ್ಲಿ ಕೆ.ಟಿ. ಇರ್ಫಾನ್‌, ಗುರ್ಮಿತ್‌ ಸಿಂಗ್‌ ಮತ್ತು ಚಂದನ್‌ ಸಿಂಗ್‌ ಸ್ಥಾನ ಪಡೆದಿದ್ದು, ಇವರು 'ಎ' ದರ್ಜೆಯಲ್ಲಿ ಅರ್ಹತೆ ಪಡೆದಿದ್ದರು. ಪುರುಷರ 50 ಕಿ.ಮೀ. ನಡಿಗೆಯಲ್ಲಿ ಬಸಂತ್‌ ಬಹದ್ದೂರ್‌ ರಾಣಾ ಮತ್ತು ಸಂದೀಪ್‌ ಕುಮಾರ್‌ ಮತ್ತು ವನಿತೆಯರ 20ಕಿ. ಮೀ.ನಡಿಗೆ ಅಮೃತಸರದ ಖುಷಿºàರ್‌ ಕೌರ್‌ ಸ್ಥಾನ ಗಳಿಸಿದ್ದಾರೆ.
        ಪುರುಷರ ಡಿಸ್ಕಸ್‌ ಎಸೆತ ಸ್ಪರ್ಧೆಯಲ್ಲಿ ಕರ್ನಾಟಕದ ವಿಕಾಸ್‌ ಗೌಡ, ವನಿತೆಯರ 3000ಮೀ. ಸ್ಟಿಪಲ್‌ ಚೇಸ್‌ನಲ್ಲಿ ಸುಧಾ ಸಿಂಗ್‌, ಪುರುಷರ ಟ್ರಿಪಲ್‌ ಜಂಪ್‌ನಲ್ಲಿ ರಂಜಿತ್‌ ಮಹೇಶ್ವರಿ ಸ್ಥಾನ ಗಳಿಸಿದ್ದಾರೆ. ಆಗಸ್ಟ್‌ 6ರಂದು ಭಾರತ ತಂಡ ಮಾಸ್ಕೋಗೆ ಪ್ರಯಾಣ ಬೆಳೆಸಲಿದ್ದು, ವಿಕಾಸ್‌ ಗೌಡ ಮಾಸ್ಕೊದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com