ಮಾಧ್ಯಮಗಳು ಮೂಲ ಉದ್ದೇಶದಿಂದ ವಿಮುಖವಾಗುತ್ತಿವೆ: ಜಿ.ಎನ್.ಮೋಹನ್

ಉಡುಪಿ: ಹರ್ಮನ್ ಎಫ್.ಮೊಗ್ಲಿಂಗ್ 1843ರ ಜು.1ರಂದು 'ಮಂಗಳೂರು ಸಮಾಚಾರ' ಆರಂಭಿಸಿದಾಗಿನ ಪತ್ರಿಕೋದ್ಯಮಕ್ಕೂ, 170 ವರ್ಷಗಳ ಬಳಿಕದ ಈಗಿನ ಪತ್ರಿಕೋದ್ಯಮಕ್ಕೂ ಹೋಲಿಕೆಗಳೇ ಇಲ್ಲ. ಈ ಅವಧಿಯಲ್ಲಿ ಪತ್ರಿಕೋದ್ಯಮದಲ್ಲಿ ಅಸಾಧಾರಣ ಬದಲಾವಣೆಗಳಾಗಿವೆ. ಈಗಿನದ್ದು ನಿಜವಾದ ಪತ್ರಿಕೋದ್ಯಮವೇ ಎಂಬ ಚಡಪಡಿಕೆಯೂ ಆರಂಭಗೊಂಡಿದೆ. ಉದ್ಯಮವಾಗಿ ಬದಲಾಗಿರುವ ಇಂದಿನ ಪತ್ರಿಕೋದ್ಯಮಕ್ಕೆ ಇರುವುದು ಓದುಗರಲ್ಲ, ಗ್ರಾಹಕರು ಮಾತ್ರ ಎಂಬ ಆತಂಕವೂ ಇದೆ ಎಂದು ಕನ್ನಡದ ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ ಜಿ.ಎನ್. ಮೋಹನ್ ಅಭಿಪ್ರಾಯಪಟ್ಟಿದ್ದಾರೆ.
   ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹೊಟೇಲ್ ಕಿದಿಯೂರಿನಲ್ಲಿ ಸೋಮವಾರ ಆಯೋಜಿಸಲಾದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
       ಇಂದಿನ ಪತ್ರಿಕೆಗಳು ಹಾಗೂ ಪ್ರಸಾರ ಮಾಧ್ಯಮಗಳು ಪತ್ರಿಕೋದ್ಯಮದ ಮೂಲ ಉದ್ದೇಶದಿಂದ ವಿಮುಖಗೊಂಡಿವೆ. ಸರಕಾರ ಮತ್ತು ಸಮಾಜದ ನಡುವೆ ಸೇತುವೆಯಾಗಬೇಕಿದ್ದ, ಸಮಾಜದ ಬೆಳವಣಿಗೆ ಹಾಗೂ ಬದಲಾವಣೆಗೆ ಕಾರಣವಾಗಬೇಕಿದ್ದ ಪತ್ರಿಕೆಗಳು ಇಂದು ಶ್ರೀಮಂತರ ಅಭಿರುಚಿಗೆ ತಕ್ಕಂತೆ ವ್ಯಾಪಾರೀಕರಣಗೊಂಡಿವೆ ಎಂದು ಕಳವಳ ವ್ಯಕ್ತಪಡಿಸಿದರು.
      ಇಂದಿನ ಪತ್ರಿಕೋದ್ಯಮ ಅನೋಸ್ಮಿಯಾ (ಮೂಗು ವಾಸನೆ ಹಿಡಿಯಲಾರದ) ಹಾಗೂ ಗ್ಲಟೋಮಿ ಜೀನ್ (ಹೊಟ್ಟೆ ಮತ್ತು ಮಿದುಳಿನ ಸಂಪರ್ಕ ತುಂಡಾದ) ರೋಗಗಳಿಂದ ನರಳುತ್ತಿದ್ದು, ಇದರಿಂದ ಪತ್ರಕರ್ತರು ತಮ್ಮ ವಿವೇಚನಾ ಶಕ್ತಿಯನ್ನೇ ಕಳೆದು ಕೊಳ್ಳುತ್ತಿದ್ದಾರೆ ಎಂದು ಎಚ್ಚರಿಸಿದರು.
ಇದರ ತಪ್ಪುಗಳು ಪತ್ರಿಕೋದ್ಯಮದ ತರಗತಿಗಳಿಂದಲೇ ಆರಂಭಗೊಳ್ಳುತ್ತಿವೆ ಎಂದು ಅಭಿಪ್ರಾಯ ಪಟ್ಟ, ಈಗ 'ಅವಧಿ' ಅಂತರ್ಜಾಲ ಪತ್ರಿಕೆಯ ಪ್ರಧಾನ ಸಂಪಾದಕರಾದ ಮೋಹನ್, ನಾವು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸಮಾಜದ ಕಡೆಗೆ ನೋಡುವುದನ್ನು ಕಲಿಸಿಕೊಡುವುದೇ ಇಲ್ಲ. ಟಿ‌ಆರ್‌ಪಿ, ಪ್ರಸಾರ ಸಂಖ್ಯೆಯೊಂದಿಗೆ ಮಾರುಕಟ್ಟೆಯೊಂದೇ ನಮಗೆ ಪ್ರಧಾನ ಆದ್ಯತೆಯಾಗಿದೆ ಎಂದರು.
     ಪತ್ರಿಕೆಗಳು ಮನಸ್ಸು ಮಾಡಿದರೆ ಒಂದೆರಡು ವರದಿಗಳಿಂದಲೇ ಸಮಾಜವನ್ನು, ಒಂದು ಊರನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಧ್ಯವಿದೆ. ಆದರೆ ಎಲ್ಲದರಲ್ಲೂ ಅಮೆರಿಕಕರಣಕ್ಕೆ ಒಳಗಾಗುತ್ತಿರುವ ನಾವು ನಮ್ಮತನವನ್ನು ಬಿಟ್ಟುಕೊಟ್ಟಿದ್ದೇವೆ. ಜಾಗತೀಕರಣದಿಂದಾಗಿ ಪತ್ರಿಕೋದ್ಯಮ, ಮಾಧ್ಯಮ ರಂಗಗಳಿಗೆ ಬಂಡವಾಳಶಾಹಿಗಳ ಪ್ರವೇಶವಾಗಿ ಇಡೀ ಕ್ಷೇತ್ರದ ಸ್ವರೂಪವೇ ಬದಲಾಗಿ ಹೋಗಿದೆ ಎಂದು ಮೋಹನ್ ಅಭಿಪ್ರಾಯವ್ಯಕ್ತ ಪಡಿಸಿದರು.     
      ಇಂದಿನ ಮಾಧ್ಯಮಗಳು ಮೂರು 'ಸಿ' ಮೇಲೆ (ಕ್ರಿಕೆಟ್, ಸಿನಿಮಾ ಹಾಗೂ ಕ್ರೈಮ್)ಗಳ ಮೇಲೆ ನಿಂತಿವೆ. ಮಾಧ್ಯಮಗಳ ಸಂಖ್ಯೆ ಹೆಚ್ಚಾದಂತೆ ಗುಣಮಟ್ಟ ಇಳಿದು, ಟಿ‌ಆರ್‌ಪಿ, ಪ್ರಸಾರಕ್ಕಾಗಿ ಶಾರ್ಟ್‌ಕಟ್‌ಗಳನ್ನು ಹುಡುಕಲಾಗುತ್ತದೆ. ಹೀಗಾಗಿ ಸುದ್ದಿಗಳು ರಂಜನೀಯ ಗುಣವನ್ನು ಪಡೆಯುತ್ತಿವೆ ಎಂದರು.
ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಕುಂದಾಪುರದ ಹಿರಿಯ ಪತ್ರಕರ್ತ ಜಿ.ಎಸ್.ಶೆಣೈ ಅವರನ್ನು ಪತ್ರಿಕಾ ದಿನಾಚರಣೆಯ ಅಂಗವಾಗಿ ಮೋಹನ್ ಶಾಲು ಹೊದಿಸಿ, ಸನ್ಮಾನಪತ್ರ ನೀಡಿ ಗೌರವಿಸಿದರು. ಮಣಿಪಾಲದ ಮಾಧವ ಪೈ ಸ್ಮಾರಕ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ ಪ್ರೇಮಾ ಅವರಿಗೆ ಆರ್ಥಿಕ ನೆರವನ್ನು ನೀಡಲಾಯಿತು.
        ಸಂಘದ ಅಧ್ಯಕ್ಷ ಕಿರಣ್ ಮಂಜನಬೈಲು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಯಕರ ಸುವರ್ಣ ಸ್ವಾಗತಿಸಿ, ದೀಪಕ್ ಜೈನ್ ಅತಿಥಿಗಳನ್ನು ಪರಿಚಯಿಸಿದರು. ಗಣೇಶ್ ಪ್ರಸಾದ್ ಪಾಂಡೇಲು ಕಾರ್ಯಕ್ರಮ ನಿರ್ವಹಿಸಿ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com