ತೆಕ್ಕಟ್ಟೆ: ಹಡಿಲುಭೂಮಿ ಕಾರ್ಯಕ್ರಮ ಉದ್ಘಾಟನೆ

ಕುಂದಾಪುರ: ‘ಭತ್ತದ ಬೇಸಾಯ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಅದಕ್ಕೆ ಸಿಗುವ ಪ್ರೋತ್ಸಾಹವೂ ಕಡಿಮೆಯಾಗಿದೆ. ಇವತ್ತು ಭೂಮಿಯನ್ನು ಸಾಗುವಳಿ ಮಾಡದೆ, ಹಡಿಲು ಬಿಡುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕಾನೂನು ಪ್ರಕಾರ ಭೂಮಿಯನ್ನು ಸಾಗುವಳಿ ಮಾಡದೆ ಹಾಗೆಯೇ ಬಿಟ್ಟು ಬಿಟ್ಟರೆ ಅದಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತಹ ಕಾನೂನುಗಳು ಇವೆ’ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
        ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಕುಂದಾಪುರ ತಾಲೂಕು ಹಾಗೂ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕೋಟೇಶ್ವರ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ತೆಕ್ಕಟ್ಟೆಯ ದುರ್ಗಾಪರಮೇಶ್ವರಿ ಸಭಾ ಭವನದಲ್ಲಿ ನಡೆದ ಹಡಿಲು ಭೂಮಿ ಕಾರ್ಯಕ್ರಮದ ಉದ್ಘಾಟನೆ, ಅನುದಾನ ವಿತರಣೆ ಹಾಗೂ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ‘ಯಾವ ಭೂಮಿಯಲ್ಲಿ ಯಾವ ಕೃಷಿ ಮಾಡಬೇಕು ಎನ್ನುವ ಅರಿವವನ್ನು ಕೃಷಿಕರಲ್ಲಿ ಮೂಡಿಸಬೇಕು. ನಮ್ಮ ಕರಾವಳಿ ಭಾಗದಲ್ಲಿ ಬಿಟ್ಟರೆ ಭತ್ತ ಬೇಸಾಯ ಗಣನೀಯವಾಗಿ ಇಳಿದಿದೆ. ಬೇರೆ ಬೇರೆ ಭಾಗಗಳಲ್ಲಿ ಎಕರೆಗೆ 28 ಕ್ವಿಂಟಲ್ ಭತ್ತದ ಇಳುವರಿ ಪಡೆದರೆ ನಮ್ಮಲ್ಲಿ 6-8ಕ್ವಿಂಟಲ್ ಅಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಈ ನೆಲೆಯಲ್ಲಿ ಕೃಷಿಕರು ಕೂಡಾ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ’ ಎಂದರು.
     ಫಲಾನುಭವಿಗಳಿಗೆ ವಿವಿಧ ಅನುದಾನವನ್ನು ವಿತರಿಸಿ ಮಾತನಾಡಿದ ಧ.ಗ್ರಾ.ಯೋಜನೆಯ ಕರಾವಳಿ ಪ್ರಾದೇಶಿಕ ಕಛೇರಿಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ‘ಖಾಲಿ ಭೂಮಿಯನ್ನು ಬಿಟ್ಟು ಬಿಡದೇ ಫಲವತ್ತಾಗಿ ಮಾಡಿಕೊಂಡರೆ ಜೀವನ ನಿರ್ವಹಣೆ ಸಾಧ್ಯ. ಸಮಾಜವಿಂದು ವೇಗವಾಗಿ ಸಾಗುತಿದೆ. ನಾವು ಕೂಡಾ ಅಷ್ಟೇ ವೇಗವಾಗಿ ಸ್ಪರ್ಧಾತ್ಮಕ ಜೀವನಕ್ಕೆ ಹೊಂದಿಕೊಳ್ಳಲು, ಕೃಷಿಯನ್ನು ಅವಲಂಬಿಸಲೇಬೇಕು’ ಎಂದರು.
ಕುಂದಾಪುರ ಮಹಿಳಾ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಸುಜಾತ ಸಾಲ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭಾ ಭವನದ ಮಾಲೀಕರಾದ ನಿತ್ಯಾನಂದ ಗಾಣಿಗರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಧ.ಗ್ರಾ.ಯೋಜನೆಯ ನಿರ್ದೇಶಕರಾದ ದುಗ್ಗೆ ಗೌಡ, ಕೇಂದ್ರ ಒಕ್ಕೂಟದ ಅಧ್ಯಕ್ಷ ಸತೀಶ ಹೆಗ್ಡೆ, ಕೋಟೇಶ್ವರ ವಲಯ ಒಕ್ಕೂಟದ ಅಧ್ಯಕ್ಷ ಸತ್ಯನಾರಾಯಣ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ್ ಹೆಮ್ಮಾಡಿ ವಹಿಸಿದ್ದರು. ತಾ.ಯೋಜನಾಧಿಕಾರಿ ಹೇಮಲತಾ ಹೆಗ್ಡೆ ಸ್ವಾಗತಿಸಿ,  ವಲಯ ಮೇಲ್ವಿಚಾರಕ ಕಲ್ಮೇಶ್ ಕಾರ್ಯಕ್ರಮ ನಿರ್ವಹಿಸಿದರು. ಕೃಷಿ ಅಧಿಕಾರಿ ವಿಷ್ಣು ಮಲ್ಲಿಕ್ ವಂದಿಸಿದರು.

ತಾಲೂಕಿನಲ್ಲಿ 225 ಕುಟುಂಬಗಳ ಹಡಿಲು ಭೂಮಿ ಅಭಿವೃದ್ಧಿಗೆ ಅಳವಡಿಕೆ

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com