ಅಲ್ಕೋಮೀಟರ್ ಮೂಲಕ ಪಾನಮತ್ತ ಚಾಲಕರ ಪತ್ತೆ: ಚುರುಕುಗೊಂಡ ಪೊಲೀಸ್ ಕಾರ್ಯಾಚರಣೆ

ಕುಂದಾಪುರ: ಜಿಲ್ಲೆಯಲ್ಲಿ ಮದ್ಯಪಾನ ಸೇವನೆಯಿಂದ ಅಪಘಾತ ಹೆಚ್ಚಳ ಆಗುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬೋರಲಿಂಗಯ್ಯ ನಿರ್ದೇಶನದಲ್ಲಿ ತಾಲೂಕಿನಾದ್ಯಂತ ಪೊಲೀಸ್ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಅತ್ಯಾಧುನಿಕ ಬ್ರೀದ್ ಅನಲೆಸರ್ ಆಲ್ಕೋಮೀಟರ್ ಬಳಸಿಕೊಂಡು ವಾಹನದಲ್ಲಿ ಸಾಗುವ ವರನ್ನು ಪರೀಕ್ಷಿಸಲಾಗುತ್ತಿದೆ. ಕುಂದಾಪುರ ಉಪ ವಿಭಾಗೀಯ ಠಾಣೆ ವ್ಯಾಪ್ತಿಯ ಎಲ್ಲೆಡೆ ರಾತ್ರಿ ಹಗಲೆನ್ನದೆ ಪೊಲೀಸರು ಕಾರ್ಯಾಚರಣೆ ನಿರತರಾಗಿದ್ದಾರೆ. ಕಾರ್ಯಾಚರಣೆಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕಳೆದ ಎರಡು ತಿಂಗಳುಗಳಿಂದ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾನಮತ್ತ ಚಾಲನೆಯಿಂದ ಅಪಘಾತ ಪ್ರಮಾಣ ಹೆಚ್ಚಿದೆ ಎನ್ನಲಾಗಿದ್ದು, ಹಲವರು ಜೀವ ಕಳೆದುಕೊಂಡಿದ್ದರೆ ಇನ್ನೂ ಕೆಲವರು ಕೈಕಾಲು ಮುರಿದುಕೊಂಡು ಆಸ್ಪತ್ರೆಯ ಹಾದಿ ಹಿಡಿದಿದ್ದಾರೆ. 

ಪಾನಮತ್ತ ಚಾಲನೆ ನಿಯಂತ್ರಿಸುವ ನಿಟ್ಟಿನಲ್ಲಿ ಕುಂಭಾಶಿ ಬಸ್ ನಿಲ್ದಾಣ, ಕೋಟೇಶ್ವರ ಬೈಪಾಸ್, ಸರ್ಜನ್ ಆಸ್ಪತ್ರೆ, ಬಸ್ರೂರು ಮೂರಕೈ, ಶಾಸ್ತ್ರೀ ಪಾರ್ಕ್, ಸೇರಿದಂತೆ ಸಂಗಮ್ ಸರ್ಕಲ್, ತಲ್ಲೂರು ಜಂಕ್ಷನ್, ಹೆಮ್ಮಾಡಿ ಪೇಟೆಗಳಲ್ಲಿ ಈಗಾಗಲೇ ಕುಂದಾಪುರ ಡಿವೈಎಸ್ಪಿ ನೇತೃತ್ವದಲ್ಲಿ ಕಾರ್ಯಾ ಚರಣೆ ಚುರುಕುಗೊಳಿಸಲಾಗಿದೆ. 

ಅತ್ಯಾಧುನಿಕ ಯಂತ್ರ: ಪಾನಮತ್ತ ಚಾಲನೆ ಪರೀಕ್ಷೆಗಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಆಲ್ಕೊಮೀಟರ್ (ಬ್ರೀದ್ ಅನಾಲೈಸರ್) ಯಂತ್ರದ ಮೂಲಕ ಒಬ್ಬ ವ್ಯಕ್ತಿ ಏಷ್ಟು ಪ್ರಮಾಣದ ಮದ್ಯಪಾನ ಸೇವಿಸಿ ದ್ದಾರೆ ಎಂಬುದನ್ನು ಖಚಿತವಾಗಿ ಅಂಕಿ ಅಂಶಗಳ ಸಮೇತ ಮಾಹಿತಿ ಪಡೆಯಬಹುದಾಗಿದೆ. ಮೀಟರ್‌ನ ಪೈಪ್ ಬಾಯಿಗೆ ಹಿಡಿದು ಶ್ವಾಸ ಹಿಂದೆ ಮುಂದೆ ಮಾಡುವಂತೆ ತಿಳಿಸಿದಾಗ ಕಂಪ್ಯೂಟರ್ ಪರದೆಯ ಮೇಲೆ ಇಂತಿಷ್ಟೇ ಮದ್ಯ ಸೇವಿಸಿದ್ದಾನೆ ಎಂಬುದನ್ನು ತೋರಿಸುತ್ತದೆ. ಇದರಿಂದ ಮದ್ಯಪಾನಿಗಳು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. 

*ಅತಿ ವೇಗ ಮತ್ತು ಪಾನಮತ್ತ ಚಾಲನೆಗೆ ಕಡಿವಾಣ ಹಾಕುವುದು ಇದ ರ ಉದ್ದೇಶ. ಸಾರ್ವಜನಿಕರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮದ್ಯಪಾನ ಸೇವನೆಯಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಇದನ್ನು ತಡೆಗಟ್ಟುವುದು ಅಗತ್ಯ. ಪಾನಮತ್ತನಾಗಿ ವಾಹನ ಚಲಾಯಿಸುವವರಿಗೆ ದಂಡ ವಿಧಿಸಿ ಪ್ರಕರಣ ದಾಖಲಿಸಲಾಗು ವುದು. ಈ ಕಾರ್ಯಚರಣೆಯಡಿ ಸುರಕ್ಷತೆಯ ಹಿತದೃಷ್ಟಿಯಿಂದ ಮದ್ಯ ಪಾನ ಮಾಡದವರನ್ನು ಕೂಡ ಪರೀಕ್ಷಿಸಬೇಕಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕು.                                                                                                        -ಯಶೋದಾ ಎಸ್.ಒಂಟಗೋಡಿ, ಡಿವೈಎಸ್ಪಿ 
* ಈ ಕಾರ್ಯಾಚರಣೆಯಡಿ ಸಾರ್ವಜನಿಕ ಹಿತರಕ್ಷಣೆ ಹೊಂದಿದೆ ಹೊರತು ಬೇರೇನೂ ಇಲ್ಲ. ಈ ಬಗ್ಗೆ ಕೆಲವೆಡೆ ಕಂಡುಬರುವ ಅಪಸ್ವರಗಳಿ ಗೆ ತಲೆಕೆಡಿಸಿಕೊಳ್ಳಲಾಗದು. ಕುಡಿದು ವಾಹನ ಚಲಾಯಿಸುವುದರಿಂದ ಉಂಟಾಗುವ ಅನಾಹುತ ಏನು ಎಂಬುವುದು ಸಾರ್ವಜನಿಕರಿಗೆ ತಿಳಿದೇ ಇದೆ. ಪೊಲೀಸ್ ಕರ್ತವ್ಯದಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ.
                                                                                               -ಇಮ್ರಾನ್ ಸಂಚಾರಿ ಠಾಣಾಧಿಕಾರಿ
 *ಪೊಲೀಸ್ ಕಾರ್ಯಾಚರಣೆಗೆ ವಿರೋಧವಿಲ್ಲ. ಆದರೆ ಅದಕ್ಕೊಂದು ಸಮಯ ನಿಗದಿಗೊಳಿಸುವುದು ಉತ್ತಮ. ಗೊತ್ತು ಗುರಿ ಇಲ್ಲದೆ ನಡೆಯುತ್ತಿರುವ ಕಾರ್ಯಾಚರಣೆಯಿಂದ ಮದ್ಯಪಾನಿಗಳಿಗೆ ಅಷ್ಟೇ ಅಲ್ಲ ಸಾರ್ವಜನಿಕರಿಗೂ ತೊಂದರೆಯಾಗುತ್ತದೆ. ರಾತ್ರಿ 10 ಗಂಟೆ ನಂತರ ಈ ಕಾರ್ಯಾಚರಣೆ ಸೂಕ್ತ.
                                                                              -ಶಿವಕುಮಾರ್ ಮೆಂಡನ್, ಸಾಮಾಜಿಕ ಕಾರ್ಯಕರ್ತ
 *ಪೊಲೀಸರ ಕಾರ್ಯಾಚರಣೆ ಶ್ಲಾಘನೀಯ. ಆದರೆ ಸರಕಾರ ಮದ್ಯ ಆದಷ್ಟು ಖಾಲಿ ಮಾಡುವಂತೆ ಒಂದೆಡೆ ಹೇಳುತ್ತಿದೆ. ಇನ್ನೊಂದೆಡೆ ಮದ್ಯ ಪಾನಿಗಳಿಗೆ ಕಡಿವಾಣ ಇಕ್ಕುವಂತೆ ಆದೇಶಿಸುತ್ತದೆ. ಈ ದಂದ್ವ ನಿಲುವು ಸರಿಯಲ್ಲ. ಮದ್ಯಪಾನದಿಂದ ಉಂಟಾಗುವ ಅವಘಡ ತಪ್ಪಿಸಲು ಪೊಲೀಸರು ನಡೆಸುತ್ತಿರುವ ಕಾರ್ಯಕ್ರಮ ಸಾಧು ಆದದ್ದೇ. ಆದರೆ ಇದರಿಂದ ಯಾರಿಗೂ ತೊಂದರೆ ಆಗಕೂಡದು.
                                                                                                       -ಸಂತೋಷ ಕೋಣಿ, ನಾಗರಿಕ


ವರದಿ ಕೃಪೆ: ಜಾನ್‌ಡಿಸೋಜ ಕುಂದಾಪುರ, ವಿಕ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com