ದಿ| ಡಿ.ದೇವರಾಜ ಅರಸು 98ನೇ ಜನ್ಮದಿನಾಚರಣೆ

ಕುಂದಾಪುರ: ಕೌಟಿಲ್ಯನ ಅರ್ಥಶಾಸ್ತ್ರವನ್ನು ಓದಿ, ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡು ಯಶಸ್ವಿಯಾದ ಏಕಾಮಾತ್ರ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು. ತನ್ನ ಪ್ರಯೋಗಶೀಲತೆ, ರಾಜಕೀಯ ಇಚ್ಛಾಶಕ್ತಿ, ಶೋಷಿತ ವರ್ಗಗಳ ಕಷ್ಟ ಕಾರ್ಪಣ್ಯ ಎದುರಿಸುತ್ತಿರುವ ನಿರ್ಗತಿ ಮಹಿಳೆಯರ ಬವಣೆಗಳನ್ನು ಹತ್ತಿರದಿಂದ ಕಂಡು, ತನ್ನ ಆಡಳಿತ ಸುಧಾರಣೆಗಳನ್ನು ತಂದ ಮುತ್ಸದ್ಧಿ ಅರಸುರವರನ್ನು, ರಾಜಕೀಯ, ಜಾತಿ, ಪಂಗಡಕ್ಕೆ ಸೇರಿಸಿಕೊಳ್ಳದೇ ಲೋಕಾರ್ಪಣೆ ಮಾಡಬೇಕಾದ ಅಗತ್ಯವಿದೆ’ ಎಂದು ಉಡುಪಿಯ ಎಂ.ಜಿ.ಎಂ ಕಾಲೇಜಿನ ರಾಜ್ಯ ಶಾಸ್ತ್ರ ಪ್ರಾಧ್ಯಾಪಕ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯ ಪಟ್ಟರು.
ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅ.20ರಂದು ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ದಿ|ಡಿ.ದೇವರಾಜ ಅರಸುರವರ 98ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅರಸುರವರ ಬದುಕು-ಸಾಧನೆ-ಚಿಂತನೆಗಳ ಬಗ್ಗೆ ಉಪನ್ಯಾಸ ನೀಡಿದರು.
‘ಅಕರ್ಷಕ ವ್ಯಕ್ತಿತ್ವವನ್ನು ಹೊಂದಿದ ಅರಸು, ಬಡತನ, ಸವಾಲುಗಳನ್ನು ಸಮರ್ಥ ಎದುರಿಸಿ ಬೆಳೆದ ಅಕರ್ಷಕ ವ್ಯಕ್ತಿತ್ವದ ಛಲದಂಕ ಮಲ್ಲ. ಅರಸು ವಂಶದಲ್ಲಿ ಹುಟ್ಟಿದರೂ ಚಿನ್ನದ ಚಮಚವನ್ನು ಹಿಡಿದುಕೊಂಡು ಹುಟ್ಟಿದವರಲ್ಲ. ತನ್ನ ನಾಯಕತ್ವ ಗುಣ, ತತ್ವ, ಸಿದ್ದಾಂತಗಳಿಂದ ಜನಮನದಲ್ಲಿ ಮರೆಯಲಾಗದ ಜನಪರ ಯೋಜನೆಗಳನ್ನು ಕೊಟ್ಟರು. ಸರ್ಕಾರಿ ಮಾನ್ಯತೆಯೊಂದಿಗೆ ಯಾವುದೇ ಮುಖ್ಯಮಂತ್ರಿಯ ಜನ್ಮದಿನಾಚರಣೆಯನ್ನು ಆಚರಿಸಿದ ಉದಾಹರಣೆಗಳಿಲ್ಲ. ಇವತ್ತು ಅರಸುರವರ ಹುಟ್ಟುಹಬ್ಬ ಅವರ ವ್ಯಕ್ತಿತ್ವ, ಸಾಧನೆ, ಚಿಂತನೆಗಳಿಗೆ ಹಿಡಿದ ಕನ್ನಡಿಯಾಗಿದೆ’ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಮಮತಾ ಆರ್.ಶೆಟ್ಟಿ ಮಾತನಾಡಿ, ‘ಭೂ ಮಸೂದೆಯನ್ನು ಕರ್ನಾಟಕದಲ್ಲಿ ಯಶಸ್ವಿಯಾಗಿ ಅನುಷ್ಠಾನಿಸಿದ ಧೀಮಂತ ನಾಯಕ ಅರಸುರವರು. ಇಂದಿನ ಜನಪ್ರತಿನಿಧಿಗಳಿಗೆ ಅರಸು ಆದರ್ಶ. ಹಣ ಖರ್ಚು ಮಾಡದೇ ಚುನಾಯಿತರಾಗಬೇಕು, ಪ್ರಾಮಾಣಿಕವಾಗಿ ಜನಸೇವೆ ಮಾಡಬೇಕು ಎನ್ನುವ ಅರಸು ಬದುಕಿನ ರೀತಿಯನ್ನು ಜನಪ್ರತಿನಿಧಿಗಳು ಅಳವಡಿಸಿಕೊಳ್ಳಬೇಕಾಗಿದೆ. ಹಿಂದುಳಿದವರ ಏಳ್ಗೆ ಬಗ್ಗೆ ಅರಸು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದರೂ ಕೂಡಾ ಇಂದು, ಹಿಂದುಳಿದ ವರ್ಗಗ¼sÀ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಆಗಬೇಕಾಗಿದೆ’ ಎಂದರು.
ತಾ.ಪಂ ಅಧ್ಯಕ್ಷೆ ದೀಪಿಕಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಆರೋಗ್ಯ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಟಿ.ಶ್ರೀಯಾನ್, ತಾ.ಪಂ.ಉಪಾಧ್ಯಕ್ಷೆ ಹೇಮಾವತಿ ಪೂಜಾರಿ, ಆಚರಣೆ ಸಮಿತಿ ಅಧ್ಯಕ್ಷೆ, ತಾಲೂಕು ದಂಡಾಧಿಕಾರಿ ಗಾಯತ್ರಿ ನಾಯಕ್, ಪುರಸಭೆ ಮುಖ್ಯಾಧಿಕಾರಿ ಸದಾನಂದ, ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯರಾದ ಸಮೃದ್ಧಿ, ಸಂಪ್ರದಾ, ಮಮತಾ ಪ್ರಾರ್ಥಿಸಿದರು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಗೋಪಾಲ ಶೆಟ್ಟಿ ಸ್ವಾಗತಿಸಿದರು. ನಾವುಂದದ ಬಿ.ಸಿಎಂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ನರಸಿಂಹ ಪೂಜಾರಿ ಕಾರ್ಯಕ್ರಮ ನಿರ್ವಹಿಸಿ, ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಹೆಚ್.ಎಂ.ಬಾಲಸುಬ್ರಹ್ಮಣ್ಯ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com