ಮಂಜುನಾಥ್ ಲತಾರಿಗೆ ಡಾ.ಎಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ

ಕುಂದಾಪುರ: ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಕುಂದಾಪುರದ ಭಂಡಾರ್ಕಾಸ್ ಕಾಲೇಜಿನಲ್ಲಿ ಡಾ|ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ನಡೆಯಿತು. ಸಾಹಿತಿ, ವಿಜಯವಾಣಿ ದಿನಪತ್ರಿಕೆಯ ಮೈಸೂರು ವಿಭಾಗದ ಹಿರಿಯ ಉಪಸಂಪಾದಕ ಮಂಜುನಾಥ್ ಲತಾ ಅವರ ‘ಕತೆ ಎಂಬ ಇರಿವ ಈ ಅಲಗು’ ಕಥಾ ಸಂಕಲನಕ್ಕೆ ಪ್ರಶಸ್ತಿ ಲಭಿಸಿದ್ದು, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಆಡಳಿತಾಧಿಕಾರಿ ಡಾ|ಹೆಚ್.ಶಾಂತಾರಾಮ್ ಪ್ರಶಸ್ತಿ ಪ್ರದಾನ ಮಾಡಿದರು. 
ಪ್ರಶಸ್ತಿಗೆ ಪಾತ್ರವಾದ ಕೃತಿಯ ಪರಿಚಯಿಸಿದ ಲೇಖಕಿ ಡಾ| ಹೆಚ್.ಎಸ್. ಅನುಪಮ, ‘ಸಾಹಿತಿಯಲ್ಲಿ ಅನುಭವದಷ್ಟೇ ಅನುಭೂತಿಯು ಮುಖ್ಯ. ಸೌಂದರ್ಯದ ಜೊತೆಯಲ್ಲಿ ಸತ್ಯವನ್ನು ಹುಡುಕಬೇಕು. ಅಂತಹ   ಸ್ಪಂದನಶೀಲತೆ, ಅನುಭೂತಿಯ ಸೆಲೆ ಮಂಜುನಾಥಲತಾ ಅವರ  ಕಥೆಗಳಲ್ಲಿ ನಿಚ್ಫಳವಾಗಿದೆ. ಕಥಾಸಂಕಲನದ 11 ಕಥೆಗಳಲ್ಲಿ ಸ್ತ್ರಿ ಪಾತ್ರಗಳನ್ನು ಸಶಕ್ತವಾಗಿ ಕಡೆದಿಟ್ಟಿದ್ದಾರೆ. ಅಲ್ಲಿನ  ಹೆಣ್ಣುಪಾತ್ರಗಳು ಹೆಣ್ಣಿನ ಗಟ್ಟಿತನವನ್ನು ಬಡಿದೆಬ್ಬಿಸುತ್ತದೆ. ತನ್ಮೂಲಕ ಸುತ್ತಮುತ್ತಲಿನ ಕೆಟ್ಟತನವನ್ನು ಹೋಗಲಾಡಿಸಿ ಹೊಸ ರೀತಿಯ ಹೊಳಹು ನೀಡುವ ಪ್ರಯತ್ನ ಕಥಾಹಂದರದಲ್ಲಿ ಕಂಡುಬರುತ್ತದೆ ಎಂದು ಕ್ರತಿಯ ಕುರಿತು ಹೇಳಿದರು.
ಬರಹವೆಂದರೆ ಕೇವಲ ಖಾಲಿ ಹಾಳೆಯ ಮೇಲೆ ಕಪ್ಪುಶಾಯಿಯಿಂದ ಬರೆಯುವ    ಅಕ್ಷರಗಳಲ್ಲ. ಸೌಂದರ್ಯದ ಜೊತೆಗೆ ಸತ್ಯದ   ಹುಡುಕಾಟ ಸಾಹಿತಿಯ ಬರಹಗಳಿಂದ  ಆಗಬೇಕಾಗಿದೆ.  ಸಾಹಿತಿಯಾದವನು  ಪಂಚೇಂದ್ರಿಯಗಳನ್ನು ಮುಕ್ತವಾಗಿ ತೆರೆದು ಸಾಹಿತ್ಯಕ್ರಷಿಯಲ್ಲಿ ತೊಡಗಿಕೊಂಡರೆ ಮಾತ್ರ ಸಮಾಜದ ಎಲ್ಲಾ ರೀತಿಯ ಸಂವೇದನೆಗಳಿಗೆ ಸ್ಪಂದಿಸಿ ಸತ್ಯವನ್ನು ಹುಡುಕಲು ಸಾಧ್ಯವಾಗುತ್ತದೆ.  ಅದರ ಜೊತೆಗೆ ಸಾಹಿತ್ಯವು ಬಂಡೇಳುವ ಪ್ರವೃತ್ತಿಯನ್ನು ಹುಟ್ಟುಹಾಕಿ  ನಿದ್ದೆ ಮಾಡುತ್ತಿರುವವರನ್ನು  ಬಡಿದೆಬ್ಬಿಸಬೇಕು’ ಎಂದು ಅಭಿಪ್ರಾಯಪಟ್ಟರು. 
ಪ್ರಶಸ್ತಿ ಸ್ವೀಕರಿಸಿದ ಮಂಜುನಾಥಲತಾ  ಕುಂದಾಪುರ ಪರಿಸರದ ಸಾಂಸ್ಕ್ರತಿಕ ಹಿರಿಮೆಯನ್ನು ಪ್ರಶಂಸಿದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಂ ಅಧ್ಯಕ್ಷತೆ ವಹಿಸಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗೊಂಡ, ವಿಜಯಲಕ್ಷ್ಮೀ ಶಾಂತಾರಾಂ, ವಸಂತ ಬನ್ನಾಡಿ ಉಪಸ್ಥಿತರಿದ್ದರು. ಕೋಣಿ ಶಿವಾನಂದ ಕಾರಂತ ಸ್ವಾಗತಿಸಿದರು. ಪ್ರಶಸ್ತಿ ಸಮಿತಿಯ ಸಂಚಾಲಕಿ ಪ್ರೊ.ರೇಖಾ ವಿ.ಬನ್ನಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕರಾದ ರಂಜಿತ್ ಶೆಟ್ಟಿ ಮತ್ತು ಅರುಣ ಎಸ್. ಕಾರ್ಯಕ್ರಮ ನಿರ್ವಹಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com