ರೈತರು ಬೀದಿಗಿಳಿಯುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಲಿ : ಎಂ.ಎನ್. ರಾಜೇಂದ್ರಕುಮಾರ್

ಕುಂದಾಪುರ: ಗ್ರಾಮೀಣ ಭಾಗದಲ್ಲಿ ರೈತರ ಜೀವನಾಡಿಯಾಗಿ ಕೆಲಸ ಮಾಡುತ್ತಿರುವ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು ಠೇವಣಾತಿ ಸಂಗ್ರಹಿಸುವುದು, ಸಾಲ ನೀಡುವುದನ್ನು ಕೈಬಿಟ್ಟು ಜಿಲ್ಲಾ ಬ್ಯಾಂಕ್‌ನ ಕಮಿಷನ್ ಏಜೆಂಟ್ ಆಗಿ ಕೆಲಸ ಮಾಡಬೇಕೆಂಬ ನಬಾರ್ಡ್ ಅಧಿಸೂಚನೆ ಅರ್ಥಹೀನ. ಪ್ರಜಾಪ್ರಭುತ್ವ ವಿರೋಧಿಯಾಗಿರುವ ಈ ನಿಲುವಿನ ವಿರುದ್ಧ ಪತ್ತಿನ ಸಹಕಾರಿ ಸಂಘದ ರೈತರು ಬೀದಿಗಿಳಿಯುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಎಚ್ಚರಿಸಿದ್ದಾರೆ. 

ಬುಧವಾರ ಮಧ್ಯಾಹ್ನ ಕುಂದಾಪುರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪತ್ತಿನ ಸಹಕಾರಿ ಸಂಘಗಳಿಗೆ ಶತಮಾನದ ಇತಿಹಾಸವಿದೆ. ಸಹಕಾರಿ ತತ್ವದಡಿ ಹೆಮ್ಮರವಾಗಿ ಬೆಳೆದು ನಿಂತಿವೆ. ಸಹಕಾರಿ ವ್ಯವಸ್ಥೆಯನ್ನು ಬಲಹೀನಗೊಳಿಸುವ ಪ್ರವತ್ತಿ ಸಲ್ಲ. ನಬಾರ್ಡ್ ಉದ್ದೇಶದಿಂದ ಕೇಂದ್ರ ಬ್ಯಾಂಕ್ ಬಲಿಷ್ಠವಾಗುತ್ತದೆ ಎಂಬುವುದು ತಪ್ಪು ಕಲ್ಪನೆ. ತಳಮಟ್ಟದಲ್ಲಿ ಕಾರ್ಯಾಚರಿಸುವ ಪತ್ತಿನ ಸಹಕಾರಿ ಸಂಘ ಕೇಂದ್ರ ಬ್ಯಾಂಕಿನ ಪ್ರಮುಖ ಕೊಂಡಿ. ವ್ಯವಸ್ಥೆಯಲ್ಲಿ ಒಂದಕ್ಕೊಂದು ಬೆಸೆದುಕೊಂಡಿವೆ. ಕೊಂಡಿ ಕಳಚಿದರೆ ಇಡಿ ವ್ಯವಸ್ಥೆಯೇ ಕುಸಿಯುತ್ತದೆ. ಸಹಕಾರಿ ಸಂಘಗಳು ಪ್ರಜಾಪ್ರಭುತ್ವ ಮಾದರಿಯಲ್ಲಿ ಕಾರ್ಯಾಚರಿಸುತ್ತಿವೆ. ಅದಕ್ಕೊಂದು ಆಡಳಿತ ಮಂಡಳಿ ಇದೆ. 2005ರ ವೆದ್ಯನಾಥನ್ ವರದಿ, ನಂತರದ ಪ್ರಕಾಶ್ ಭಕ್ಷಿ ವರದಿ ಎಲ್ಲವೂ ಸಹಕಾರಿ ವ್ಯವಸ್ಥೆಯ ಮೇಲೆ ಪ್ರಹಾರ ನಡೆಸುವಂತೆನೇ ಇದೆ. 

ಇದೀಗ ನಿರ್ದಯವಾಗಿ ಸಹಕಾರಿ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹುನ್ನಾರ ನಡೆಯುತ್ತಿದೆ. ದೊಡ್ಡ ಬ್ಯಾಂಕ್‌ಗಳನ್ನು ಕಷಿ ಬ್ಯಾಂಕ್ ಎಂದು ಘೋಷಿಸಿ ಪೋಷಿಸುವ ನಬಾರ್ಡ್‌ನ ಚಿಂತನೆಯಡಿ ಶತಮಾನಗಳಿಂದ ಬೆಳೆದು ಬಂದಿರುವ ಸಹಕಾರ ತತ್ವವನ್ನು ನಾಶಗೆಯುವ ಇರಾದೆ ಅಡಗಿದೆ. ಇದಕ್ಕೆ ನಾವು ಆಸ್ಪದ ಮಾಡಿಕೊಡುವುದಿಲ್ಲ. ಆ.16ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಹಕಾರಿ ಮಿತ್ರರ ಸಭೆ ಕರೆಯಲಾಗಿದೆ. ಅಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡು ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು. 

ರೆತರ ಸಾಲಮನ್ನಾ, ಕಷಿ ಸಾಲ, ರೇಶನ್ ವಿತರಣೆಯಿಂದ ಹಿಡಿದು ಪ್ರತಿಯೊಂದು ವ್ಯವಸ್ಥೆಯಲ್ಲಿಯೂ ಪತ್ತಿನ ಸಹಕಾರಿ ಸಂಘಗಳು ಕಷ್ಟವಾದರೂ ಸರಕಾರದ ಭಾಗವಾಗಿ ಕೆಲಸ ಮಾಡುತ್ತ ಬಂದಿರುವುದನ್ನು ಸರಕಾರ ಆಗಲಿ, ಜನಪ್ರತಿನಿಧಿಗಳಾಗಲಿ ಮರೆಯಕೂಡದು. ಗ್ರಾಮೀಣ ಭಾಗದ ಕಡುಬಡವನಿಗೆ ದಿನದ 24ಗಂಟೆಯಲ್ಲಿಯೂ ಸಂಕಷ್ಟ ಕಾಲದಲ್ಲಿ ತಕ್ಷಣ ನೆರವಿಗೆ ಬರುವುದು ಪತ್ತಿನ ಸಹಕಾರಿ ಸಂಘಗಳು. ಸಂಘಗಳ ಏಳ್ಗೆ ಸಹಿಸಲಾಗದೆ ಬ್ಯಾಂಕಿನ ಹೆಗ್ಗಳಿಕೆ ಕಸಿದ ಸರಕಾರ ಈಗ ಪತ್ತಿನ ಸಹಕಾರಿ ವ್ಯವಸ್ಥೆಯನ್ನು ದೂರೀಕರಿಸಿ ಅವುಗಳನ್ನು ಕೇವಲ ಕಮಿಷನ್ ಏಜೆಂಟರನ್ನಾಗಿ ಇಟ್ಟುಕೊಳ್ಳುವ ಚಿಂತನೆ ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ರಾಜ್ಯದಲ್ಲಿ ನಬಾರ್ಡ್‌ನ ಈ ಆದೇಶ ಜಾರಿಯಾಗದಂತೆ ತಡೆಯುವ ಜವಾಬ್ದಾರಿ ನಮ್ಮ ಜನಪ್ರತಿನಿಧಿಗಳದ್ದು. ತಪ್ಪಿದ್ದಲ್ಲಿ ರೈತರು ನಮ್ಮ ಜನಪ್ರತಿನಿಧಿಗಳಿಗೆ ತಕ್ಕುದಾದ ಉತ್ತರ ನೀಡುವರು ಎಂದು ಅವರು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೆಲು, ಹಿರಿಯ ಸಹಕಾರಿಗಳಾದ ವಾಸುದೇವ ಯಡಿಯಾಳ, ರಘುರಾಮ ಶೆಟ್ಟಿ, ರಾಜು ಪೂಜಾರಿ, ಮಹೇಶ್ ಹೆಗ್ಡೆ, ಸುಧಾಕರ ಶೆಟ್ಟಿ ಬಾಂಡ್ಯ, ಸಬ್ಲಾಡಿ ಮಂಜಯ್ಯ ಶೆಟ್ಟಿ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com