ಗಣೇಶ ಕ್ರೂರಿ ಎಂಬಂತೆ ಬಿಂಬಿಸಲಾದ 'ಢುಂಢಿ' ಪುಸ್ತಕ ವಿರುದ್ಧ ಆಕ್ರೋಶ

ಬೆಂಗಳೂರು: ಕೋಟ್ಯಂತರ ಹಿಂದುಗಳಿಂದ ಮೊದಲ ಪೂಜೆಗೆ ಒಳಗಾಗುವ ವಿನಾಯಕನನ್ನು ರೌಡಿ, ಕ್ರೂರಿ ಎಂದೆಲ್ಲಾ ವಿಶ್ಲೇಷಿಸಿರುವ ಮತ್ತು ಶಿವ-ಪಾರ್ವತಿ-ಗಣೇಶನ ಸಂಬಂಧವನ್ನು ಆಕ್ಷೇಪಾಸ್ಪದವಾಗಿ ಹೆಣೆದಿರುವ 'ಢುಂಢಿ' ಕಾದಂಬರಿ ಈಗ ರಾಜ್ಯಾದ್ಯಂತ ವಿವಾದದ ಭುಗಿಲೆಬ್ಬಿಸಿದೆ.

ಲೇಖಕ ಯೋಗೇಶ್‌ ಮಾಸ್ಟರ್‌ ತಮ್ಮ ಕೃತಿಯಲ್ಲಿ ಗಣಪತಿಯನ್ನು ಅವಹೇಳನಕಾರಿಯಾಗಿ ಚಿತ್ರಿಸಿದ್ದಾರೆ ಎಂದು ಕೆಂಡಾಮಂಡಲಗೊಂಡಿರುವ ಹಿಂದು ಪರ ಸಂಘಟನೆಗಳು ತಕ್ಷಣವೇ ಪುಸ್ತಕವನ್ನು ಹಿಂಪಡೆಯಬೇಕು ಎಂದು ಹಕ್ಕೊತ್ತಾಯ ಮಂಡಿಸಿದ್ದಾರೆ. ಅಲ್ಲದೆ, ಲೇಖಕರ ವಿರುದ್ಧ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದುದಕ್ಕಾಗಿ ಲೇಖಕರು ಬೇಷರತ್‌ ಕ್ಷಮೆ ಯಾಚಿಸಬೇಕು ಎಂದೂ ಆಗ್ರಹಿಸಿದ್ದಾರೆ.

ಬುಡಕಟ್ಟು ಗಣೇಶ: ಶನಿವಾರ ಬೆಂಗಳೂರಿನಲ್ಲಿ ಬಿಡುಗಡೆಯಾದ ಈ ಕಾದಂಬರಿಯಲ್ಲಿ ಗಣೇಶನನ್ನು ಬುಡಕಟ್ಟು ಸಮುದಾಯದಲ್ಲಿ ಹುಟ್ಟಿದವನೆಂದು ಬಿಂಬಿಸಲಾಗಿದೆ. ಪಾರ್ವತಿ ಎಂಬ ಹಾಡಿಯ ಗಿರಿಜನ ಕನ್ಯೆಯೊಬ್ಬಳು ಅನೇಕರೊಡನೆ ಕೂಡಿ 'ಢುಂಢಿ' ಎಂಬ ಹುಡುಗನನ್ನು ಹಡೆದಳು ಎಂದು ಬರೆಯಲಾಗಿದೆ. ಮೂಲದಲ್ಲಿ ಇರುವ ಶಿವ-ಪಾರ್ವತಿ ಮತ್ತು ಗಣೇಶ ಸಂಬಂಧವನ್ನು ಲೇಖಕರು ತಮ್ಮ ಕಲ್ಪನೆಯ ಪ್ರಕಾರ ಬದಲಿಸಿಕೊಂಡು ಕಾದಂಬರಿ ಕಟ್ಟಿದ್ದಾರೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶೂದ್ರ ಮತ್ತು ಆರ್ಯರ ನಡುವಿನ ಸೈದ್ಧಾಂತಿಕ ತಾಕಲಾಟವನ್ನು ಹೇಳಲು ಗಣೇಶನ ಕತೆಯನ್ನು ವಿನಾಕಾರಣ ಎಳೆತರಲಾಗಿದೆ ಎಂದು ಧಾರ್ಮಿಕತೆಯಲ್ಲಿ ನಂಬಿಕೆ ಇರುವವರು ವಿರೋಧಿಸಿದ್ದಾರೆ.

ತೀವ್ರ ವಿರೋಧ: ಗಣೇಶನನ್ನು ಈ ರೀತಿ ಚಿತ್ರಿಸಿರುವುದಕ್ಕೆ ನಾಡಿನಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದು ಧಾರ್ಮಿಕ ಮುಖಂಡರು, ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಇವತ್ತು ಯಾರು ಹೇಗೆ ಬೇಕಾದರೂ ಹಿಂದೂ ಧರ್ಮವನ್ನು ಅವಹೇಳನಕಾರಿಯಾಗಿ ಬಿಂಬಿಸಬಹುದೆಂಬ ಸ್ಥಿತಿ ನಿರ್ಮಾಣವಾಗಿದೆ. ಬೇರೆ ಧರ್ಮಗಳು ಇಂಥ ಸ್ವಾತಂತ್ರ್ಯವನ್ನು ಸಹಿಸುವುದಿಲ್ಲ, ಹಿಂದೂ ಧರ್ಮ ಸಹಿಸುತ್ತದೆ ಎಂಬ ಕಾರಣಕ್ಕೇ 'ಢುಂಢಿ'ಯಂಥ ಕೃತಿಗಳು ಹೊರಬರುತ್ತಿವೆ ಎಂದು ಹಿಂದೂಪರ ಸಂಘಟನೆಗಳು ಕಿಡಿ ಕಾರಿವೆ.

ಇಂಥ ಕೃತಿಗಳು ಸಮಾಜದ ಧರ್ಮ ಸಹಿಷ್ಣುತೆಯನ್ನು ಕೆಣಕುತ್ತವೆ ಎಂದೂ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸುತ್ತವೆ ಎಂದೂ ಹಲವರು ಅಭಿಪ್ರಾಯಪಟ್ಟಿದ್ದು, ಇಂಥ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂಬ ಕೂಗೂ ಕೇಳಿಬರುತ್ತಿದೆ. ಈ ಸಂಬಂಧ ತೀವ್ರ ಸ್ವರೂಪದ ಪ್ರತಿಭಟನೆಯನ್ನೂ ರಾಜ್ಯಾದ್ಯಂತ ಹಮ್ಮಿಕೊಳ್ಳುವುದಾಗಿ ಹಲವು ಹಿಂದೂಪರ ಸಂಘಟನೆಗಳು ಎಚ್ಚರಿಸಿವೆ.

ಕೃತಿಯಲ್ಲಿ ಏನಿದೆ?

ಗಣೇಶನನ್ನು ಢುಂಢಿ ಎಂಬ ಹುಡುಗನಾಗಿ ಚಿತ್ರಿಸಲಾಗಿದೆ. 'ಅರಣ್ಯಕ ಗಣಪತಿಯಾದ ಕತೆ' ಎಂದೇ ಕೃತಿಯ ಮುಖಪುಟದಲ್ಲಿ ಹೇಳಲಾಗಿದೆ. ಶುಕ್ತಿಮತ್‌ ಎಂಬ ಪ್ರದೇಶದಲ್ಲಿ ಹಿಮಾಲಯದ ಒಡೆಯನ ಮಗಳು ಪಾರ್ವತಿ ಹುಟ್ಟಿದಳು. ಆ ಕಾಲದಲ್ಲಿ ಮದುವೆ ಎಂಬ ಪದ್ಧತಿಯೇ ಇರಲಿಲ್ಲ. ಕೂಡಿಕೆ ರೂಢಿಯಲ್ಲಿತ್ತು. ಪಾರ್ವತಿ ಹಲವರ ಜೊತೆ ಕೂಡುವ ಹೆಂಗಸಾಗಿದ್ದಳು. ಅವಳಿಗೆ ಢುಂಢಿ ಎಂಬ ಮಗ ಹುಟ್ಟಿದ. ಆತನಿಗೆ ತನ್ನ ತಂದೆ ಯಾರು ಎಂದೂ ಗೊತ್ತಿರಲಿಲ್ಲ ಎಂಬಿತ್ಯಾದಿ ಅಂಶಗಳಿವೆ. ರುದ್ರನ ಲೈಂಗಿಕ ಶಕ್ತಿಯ ಬಗ್ಗೆ ಪಾರ್ವತಿಗೆ ಅಸಮಾಧಾನವಿತ್ತೆನ್ನುವಂಥ ಕೆಲವು ಸೂಕ್ಷ್ಮವಿಚಾರಗಳೂ ಇಲ್ಲಿ ವರ್ಣರಂಜಿತವಾಗಿ ಚರ್ಚಿತವಾಗಿವೆ.

ಲೇಖಕರು ಏನಂತಾರೆ?

ಪೌರಾಣಿಕ ಕಥಾನಕಗಳು ವಾಸ್ತವ ನಿರೂಪಣೆಗಳಲ್ಲ. ಅವೆಲ್ಲಾ ಒಂದೋ ಉತ್ಪ್ರೇಕ್ಷಿಕ ವಿವರಣೆ ಅಥವಾ ಮೌಡ್ಯದಿಂದ ಕೂಡಿರುವ ಭ್ರಮಾಧೀನ ಕಾಲ್ಪನಿಕತೆಯಿಂದ ಕೂಡಿರುತ್ತದೆ. ಆದರೆ ಅದರ ಬಗ್ಗೆ ಆಕ್ಷೇಪ ಬರಬಹುದು ಅನ್ನುವ ಕಾರಣಕ್ಕೆ ಕೆಲವೊಮ್ಮೆ ವಿಶ್ಲೇಷಣೆಗೋ, ವ್ಯಾಖ್ಯಾನಕ್ಕೋ ಹೋಗುವುದಿಲ್ಲ. ಆದರೆ ತಮಗೆ ಮೊದಲಿಂದಲೂ ಗಣೇಶ ಹುಟ್ಟಿದ ಕತೆಯ ಬಗ್ಗೆ ತುಂಬ ಆಕ್ಷೇಪಗಳಿದ್ದವು. ಈ ಬಗ್ಗೆ ಹುಡುಕಿಕೊಂಡು ಹೋದಾಗ ತಾಪಿ ಧರ್ಮರಾವು ಮೊದಲಾದವರ ಕೃತಿಗಳನ್ನು ಓದಿದೆ. ಹಲವು ಸಂಶೋಧನೆಗಳನ್ನು ನಡೆಸಿ ನನ್ನ ಕಲ್ಪನೆಯಲ್ಲಿ ಈ ಕಾದಂಬರಿಯನ್ನು ಬರೆದಿದ್ದೇನೆ ಎಂದು ಅವರು ಮುನ್ನುಡಿಯಲ್ಲಿ ಬರೆದುಕೊಂಡಿದ್ದಾರೆ.

ವಿಘ್ನನಿವಾರಕ "ವಿವಾದ'ಕೊಳಗಾದ ಕಥೆ

ದೇವತೆಗಳಲ್ಲಿ ಮೊದಲು ಪೂಜಿಸಲ್ಪಡುವವನು ಗಣಪತಿ. ಆತನ ಹುಟ್ಟು ಪುರಾಣದಲ್ಲಿನ ಒಂದು ವಿಶಿಷ್ಟ ಅಧ್ಯಾಯ. ಇದೀಗ ಲೇಖಕ ಯೋಗೇಶ್‌ ಮಾಸ್ಟರ್‌ ಆತನ ಮೂಲವನ್ನು ಬೇರೊಂದು ರೀತಿಯಲ್ಲಿ ಹುಡುಕಲು ಯತ್ನಿಸಿದ್ದಾರೆ. 

ಗಣಪತಿ ಪಾರ್ವತಿ ಎಂಬ ಗಿರಿಜನ ಕನ್ಯೆಗೆ ಹುಟ್ಟಿದ ಮಗ ಎಂದು ಬಿಂಬಿಸಿದ್ದಾರೆ. ಇಡೀ ಪುಸ್ತಕದಲ್ಲಿ ಶೂದ್ರರು ಮತ್ತು ಆರ್ಯರ ನಡುವೆ ಪುರಾಣ ಕಾಲದಲ್ಲಿದ್ದ ಸಂಘರ್ಷವನ್ನು ಚಿತ್ರಿಸಲಾಗಿದೆ. ಈ ಚಿತ್ರಣ ಹಲವರಿಗೆ ಸಿಟ್ಟುತರಿಸಿದೆ.  ಈ ಹಿನ್ನೆಲೆಯಲ್ಲಿ ಪುಸ್ತಕದಲ್ಲಿ ಏನಿದೆ ಎನ್ನುವುದರ ಸಂಕ್ಷಿಪ್ತ ಪರಿಚಯ.

ಕೃತಿಯ 10 ಮುಖ್ಯ ವಿವಾದಾಸ್ಪದ ಅಂಶಗಳು

1.  "ನಾನು ನಿನಗೇನಾ ಹುಟ್ಟಿದ್ದು?' ಢುಂಢಿ (ಗಣೇಶ) ವದಿರಜ್ಜ ಎನ್ನುವವನಿಗೆ ಕೇಳುತ್ತಾನೆ.
 "ಇಲ್ಲ ಯಾರಿಗೆ ಅಂತ ಗೊತ್ತಿಲ್ಲ.. ನನಗಂತೂ ಅಲ್ಲ. ನಿಮ್ಮ ಅಮ್ಮ ಬೇರೆ ಬೇರೆ ಗುಂಪಿನವರ ಜೊತೆಗೆಲ್ಲಾ ಓಡಾಡುತ್ತಿದ್ದಳು. ರುದ್ರನ ಕಡೆಯವರ ಜೊತೆಗೆಲ್ಲಾ ಇರ್ತಿದ್ದಳು. ಮಾತಂಗದವರ ಗುಂಪಿನಲ್ಲೆಲ್ಲಾ ಮಲಕ್ಕೊಂಡು ಎದ್ದು ಬರ್ತಿದ್ದಳು. ಬಲೇ ಸೋಗಲಾಡಿ!'

2. ಅವಳೂ ಮದುವೆ ಆಗಲಿಲ್ಲ, ನನ್ನ ಥರ. ನಿಮ್ಮಮ್ಮನ ಜೊತೆ ಕೂಟ ಮಾಡೋಕೆ ಬಲೇ ಚೆನ್ನಾಗಿರತ್ತೆ. ಆಗ ಒಳ್ಳೆ ಹೆಣ್ಣು ಹುಲಿ ಆಡಿದ ಹಾಗೆ ಆಡ್ತಾಳೆ! (ವದಿರಜ್ಜ ಎನ್ನುವ ಪಾತ್ರ ಹೇಳುವುದು)

3. ಶಿವ ಸ್ನಾನ ಮಾಡಿಕೊಂಡು ಬರುತ್ತಿರುವಾಗ ಆರ್ಯ ಋಷಿಗಳ ಹೆಂಡತಿಯರು ನೋಡುತ್ತಾರೆ. ಅರೆಬರೆ ವಸ್ತ್ರದಲ್ಲಿರುವ ಶಿವನನ್ನು ನೋಡಿ ಅವರು ಕಾಮಾತುರರಾಗುತ್ತಾರೆ. ಇದನ್ನು ನೋಡಿ ಋಷಿಮುನಿಗಳು ಕೋಪಗೊಳ್ಳುತ್ತಾರೆ. ಆದರೆ ಅವರ ಕೋಪಕ್ಕೆ ರುದ್ರರ ಕಡೆಯವರು ಸೊಪ್ಪು ಹಾಕಲಿಲ್ಲ. ನೀವು ನಮ್ಮ ರುದ್ರನಿಗೆ ಕೋಪ ತರಿಸಿದ್ದೀರಿ ಅಂತ ಹೇಳಿದರು. ಇದು ತುಂಬ ದೊಡ್ಡದಾಗಿ ತ್ರಿಮೂರ್ತಿಗಳವರೆಗೂ ದೂರು ಹೋಯಿತು. ಈ ತನ್ನ ಲಿಂಗದ ಬಗ್ಗೆಯೇ ಆರ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅದನ್ನೇ ಪೂಜಿಸುವಂತೆ ಶಿವ ಆಜ್ಞೆಯಿತ್ತ!

4. ಯಾಜ್ಞಿಕ ಎಂಬ ಬ್ರಾಹ್ಮಣನೊಬ್ಬ ಶೂದ್ರನಾದ ಶಂಬರನ ಮನೆಗೆ ಬರುತ್ತಾನೆ. ಆತ ಉಣ್ಣಲೇನು ಕೊಡಲಿ ಎಂದು ಕೇಳಿದಾಗ ಗೋಮಾಂಸ ಎನ್ನುತ್ತಾನೆ. ಗೋಮಾಂಸವನ್ನು ನೀವು ತಿನ್ನುತ್ತೀರಾ ಎಂದು ಕೇಳಿದಾಗ "ಅಥೋ ಅನ್ನಂ ವೈ ಗೋಃ.. ಗೋವು ಆಹಾರವಲ್ಲದೇ ಮತ್ತಿನ್ನೇನು?' ಎಂದು ಆ ಯಾಜ್ಞಿಕ ಹೇಳುತ್ತಾನೆ.

5. ಈ ಕೃತಿಯಲ್ಲಿ ಶಂಬರ ಎನ್ನುವ ವ್ಯಕ್ತಿಯೊಬ್ಬ ಮುಖ್ಯ ಕತೆಯ ನಿರೂಪಕನಾಗಿ ಬರುತ್ತಾನೆ. ಗೋವುಗಳನ್ನು ನೋಡಿಕೊಂಡು ಇರುವ ಆ ವ್ಯಕ್ತಿ ತನ್ನ ತಾಯಿ ವಸುಮಾ ಎನ್ನುವವಳ ಜೊತೆ ವಾಸಿಸುತ್ತಿರುತ್ತಾನೆ. ಕೌಮಾರ್ಯದಲ್ಲಿ ತನ್ನ ಕಾಮ ಜಾಗೃತವಾದಾಗ ತನ್ನ ತಾಯಿಯ ಜೊತೆಗೇ ಅವನು ಕಾಮಾತುರನಾಗುತ್ತಾನೆ. ಅದಕ್ಕೆ ಅಮ್ಮ ಆಕ್ಷೇಪಿಸಿದರೂ ಅವನು ಅವಳಲ್ಲೇ ಅನುರಕ್ತನಾಗಿರುತ್ತಾನೆ.

6. ಶಂಬರ ಪ್ರಾಯಪ್ರಬುದ್ಧನಾದಮೇಲೆ ವೇಶ್ಯೆಯರ ಸಹವಾಸ ಮಾಡುವುದಕ್ಕೆ ಹೋಗುತ್ತಾನೆ. ಆಗ ವೇಶ್ಯೆಯೊಬ್ಬಳು ತಾನು ಚೆನ್ನಾಗಿದ್ದೇನಾ ಅಂತ ಕೇಳಿದ್ದಕ್ಕೆ "ನನ್ನ ತಾಯಿಯೇ ನಿಜವಾದ 
ಸುಂದರಿ' ಎನ್ನುತ್ತಾನೆ. ತಾಯಿ ಜೊತೆಗೆ ಇಂಥ ಭಾವನೆ ಸರಿಯಲ್ಲ ಅಂತ ವೇಶ್ಯೆ ಹೇಳಿದ್ದಕ್ಕೆ "ಅವಳನ್ನು ಯಾರೋ ಕೂಡಿದ್ದರಿಂದಲೇ ನಾನು ಹುಟ್ಟಿದ್ದು.. ಕಾಮದ ಕಲ್ಪನೆ ನನಗೆ 
ಬಂದಿದ್ದೇ ಅವಳಿಂದ.. ನನ್ನ ಹೃದಯದಲ್ಲಿ ಅವಳ ಬಗ್ಗೆ ಇರುವ ಭಾವನೆಗಳು ಎಲ್ಲೇ ಹೋದರೂ ಹಾಗೇ ಇರುತ್ತವೆ' ಎನ್ನುತ್ತಾನೆ.

7. ಮದುವೆ ಎನ್ನುವುದು ದರಿದ್ರ ವ್ಯವಸ್ಥೆ ಎಂದು ಯಾಜ್ಞಿಕ ಹೇಳುತ್ತಾನೆ. ಒಂದೊಮ್ಮೆ ಉದ್ದಾಲಕನ ಮಗ ಶ್ವೇತಕೇತು ಮದುವೆ ಎನ್ನುವ ವ್ಯವಸ್ಥೆ ಮಾಡದಿದ್ದರೆ ಯಾರು ಯಾರ ಜೊತೆಗಾದರೂ ಕೂಡಬಹುದಿತ್ತು ಎಂದು ಹೇಳುತ್ತಾನೆ. 

ಆತ ತನ್ನ ಅಣ್ಣನ ಮಡದಿಯನ್ನೇ ಕೂಡಿ, ಮಗು ಹುಟ್ಟಿ ಕೊನೆಗವಳು ಅವನನ್ನು ತೊರೆದು ಹೋಗಿರುತ್ತಾಳೆ.

8. ಶಿವ ಕೂಡ ಈ ಮದುವೆ ಎಂಬ ಬಂಧನದಿಂದ ದೂರವಿದ್ದ. ಆದರೆ ದೇವತೆಗಳೆಲ್ಲಾ ರಾಜಕೀಯ ಮಾಡಿ ಶಿವನಿಗೆ ಅರಣ್ಯಕ, ಕಪ್ಪು ಸುಂದರಿ ಪಾರ್ವತಿ ಜೊತೆ ಮದುವೆ ಮಾಡಿಬಿಟ್ಟರು.

9. ಗಣೇಶ ಶಿವನ ಮಗನೇ ಅಲ್ಲ ಎನ್ನುವ ಹಲವು ದೃಷ್ಟಾಂತಗಳನ್ನು ಲೇಖಕರು ನೀಡುತ್ತಾರೆ. ರುದ್ರನಿಗೆ ಮಕ್ಕಳನ್ನು ಹುಟ್ಟಿಸುವ ಶಕ್ತಿ ಇಲ್ಲವೆಂದೂ ಅದಕ್ಕಾಗಿ ಪಾರ್ವತಿ ಶಿವನ ಜೊತೆ ಜಗಳವಾಡಿದ್ದಳೆಂದೂ ಸವಿವರವಾಗಿ ಹೇಳಲಾಗಿದೆ.

10. ಢುಂಢಿ (ಗಣೇಶ)ಗೆ ಮದುವೆ ಮಾಡಬೇಕು ಅಂತ ಪಾರ್ವತಿ ಢುಂಢಿಯ ಜೊತೆಗೇ ಹೇಳಿಕೊಂಡಾಗ ಆತ ನನಗೆ ನಿನ್ನಂಥ ಹೆಣ್ಣು ಸಿಕ್ಕಿದರೆ ಮದುವೆಯಾಗುತ್ತೇನೆ ಎನ್ನುತ್ತಾನೆ. ಅದಕ್ಕೂ ಮೊದಲು ಗಣೇಶ ಮತ್ತು ಪಾರ್ವತಿಯ ಮಧ್ಯೆ ಸಣ್ಣದಾಗಿ ಕಾಮಭಾವನೆ ಇತ್ತೆನ್ನುವಂತೆ ತೋರಿಸಲಾಗುತ್ತದೆ.

ಹಳೆಯದನ್ನು ಕೆದಕುವ ಖಾಯಿಲೆ ಏಕೆ?

ಹಳೆಯದನ್ನಿಟ್ಟುಕೊಂಡು ಸಂಶೋಧಿಸಿ ಕೃತಿ ಬರೆಯುವುದು ಸಾಹಿತ್ಯ ಲೋಕದಲ್ಲಿ ಹಲವರಿಗೆ ಖಾಯಿಲೆ. ಈ ಖಾಯಿಲೆ ಎಲ್ಲಾ ಭಾಷೆ, ದೇಶಗಳಿವೆ. ರಶ್ದಿಯಿಂದ ಹಿಡಿದು ಹಲವರಲ್ಲಿ ಇದೆ. ಆದರೆ ಲೇಖಕನಾದವನು ಕೆಲವು ಸಂಗತಿಗಳನ್ನು ಮುಟ್ಟಬಾರದು. ಒಪ್ಪಿತ ಧಾರ್ಮಿಕ ನಂಬಿಕೆಗಳನ್ನು ಅಲ್ಲಾಡಿಸಬಾರದು. 
ಒಂದು ಕೃತಿ ಹೊಸ ಹೊಸ ಸತ್ಯಗಳನ್ನು ಹೊರಡಿಸಬೇಕಷ್ಟೇ ಹೊರತೂ ಇರುವ ಭಾವನೆಗಳನ್ನು ಕೆದಕುವುದಲ್ಲ. ನಮ್ಮಲ್ಲಿ ಪುರಾಣವನ್ನು ವಸ್ತುವಾಗಿಟ್ಟುಕೊಂಡು ಬರೆದ ಕುಮಾರವ್ಯಾಸ, ಲಕ್ಷ್ಮೀಶ ಮೊದಲಾದವರು ಮೂಲವನ್ನು ಇಟ್ಟುಕೊಂಡು ತಮ್ಮ ಪ್ರತಿಭೆಯಿಂದ ವ್ಯಾಖ್ಯಾನಿಸಿದರೇ ಹೊರತು ಕೆದಕುವ ಕೆಲಸ ಮಾಡಲಿಲ್ಲ. ಗಣೇಶ ಕೊನೆಗೂ ನಮ್ಮ ನಮ್ಮ ತಾಯಂದಿರು ಹೇಳಿದ ಕತೆ ಮತ್ತು ಅದರಲ್ಲಿ ನಮಗಿರುವ ನಂಬಿಕೆ ಮಾತ್ರ.
- ಜೋಗಿ, ಕತೆಗಾರ-ಅಂಕಣಕಾರ

ಆಕ್ಷೇಪಾರ್ಹವಾಗಿದ್ದುಇದರಲ್ಲಿ ಏನಿದೆ?

ಇದರಲ್ಲಿ ಅಂಥ ಆಕ್ಷೇಪಾರ್ಹ ಅಂಶಗಳನ್ನು ಏನು ಕಂಡರೋ ನನಗೆ ಅರ್ಥವಾಗುತ್ತಿಲ್ಲ. ಈ ಥರ ಸಂಶೋಧನೆ ಬೇಕೇ, ಇದು ಸಾಮಾಜಿಕ ನೆಲೆಯಲ್ಲಿ ಎಷ್ಟು ಅರ್ಥಪೂರ್ಣ ಅನ್ನುವುದು ಬೇರೆ ಮಾತು. ಇದರಲ್ಲಿ ನನ್ನ ಪ್ರಕಾರ ಆಕ್ಷೇಪಾರ್ಹವಾದುದು ಯಾವುದೂ ಇಲ್ಲ. ಭಗವತಿ ಶರಣ್ಯ ಉಪಾಧ್ಯಾಯರಂಥ ಹಲವರು ಇಂಥ ಸಂಶೋಧನಾಧಾರಿತ ಹಲವು ಕೃತಿಗಳನ್ನು ಬರೆದಿದ್ದಾರೆ. ಅದಕ್ಕೆ ಇಲ್ಲದ ಆಕ್ಷೇಪ ಇದಕ್ಯಾಕೆ? ಇದು ತನ್ನ ಓದು ಚಿಂತನೆಯಿಂದ ಕಂಡುಕೊಂಡ ಸತ್ಯವನ್ನು ಕಾದಂಬರಿಯಾಗಿ ಬರೆದದ್ದು. ಅದು ಅಪ್ರಿಯವಾಗಬಹುದು, ಬೇಡವೆಂದರೆ ನಾವು ಓದುಗರಾದವರು ತಿರಸ್ಕರಿಸೋಣ. ಆದರೆ ಬರೀಲೇಬಾರ್ದು ಅಂತ ಹೇಳಬಾರದು.
- ಸಿ.ಎನ್‌. ರಾಮಚಂದ್ರನ್‌, ವಿಮರ್ಶಕ

ಢುಂಢೀ ಪ್ರತಿಕ್ರಿಯೆ

ಪ್ರಸ್ತುತ ವಾಸ್ತವದ ನೆಲೆಗಟ್ಟಿನಲ್ಲಿ ಹೇಳುವುದಾದರೆ, ಗಣೇಶ ಎಲ್ಲರಿಗೂ ದೈವ ಸ್ವರೂಪ. ಆದರೆ, ಅವನ ಬಗ್ಗೆ ಈ ರೀತಿ ಚಿತ್ರಿಸಿರುವುದು ತಪ್ಪು. ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು ಸರಿ ಅಲ್ಲ. ಸಂಶೋಧನೆಗಳು, ಹಲವರ ಅಭಿಪ್ರಾಯಗಳು ಏನೇ ಇರಬಹುದು. ಆದರೆ, ಸಾಮಾನ್ಯರ ನಂಬಿಕೆ, ಭಾವನೆಗಳಿಗೆ ಧಕ್ಕೆ ಮಾಡುವುದು ಸಮಂಜಸವಲ್ಲ.
- ಉಮಾಶ್ರೀ, ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

'ಕೃತಿಯನ್ನು ನಾನು ಓದಿಲ್ಲ. ಆದರೆ, ಅದರ ಸಾರಾಂಶವನ್ನು ಮಾಧ್ಯಮಗಳಿಂದ ಕೇಳಿದ್ದೇನೆ. ನಾನು ಭಾರತದ ಸಾಕಷ್ಟು ಇತಿಹಾಸ ಕೋಶಗಳನ್ನು ಓದಿದ್ದೇನೆ. ಎಲ್ಲಿಯೂ ಗಣೇಶ ಹಿಂಸಕ, ಕ್ರೂರಿ ಎಂದು ಕರೆದಿಲ್ಲ ಹಾಗೂ ಚಿತ್ರಿಸಿಲ್ಲ. ಸ್ವಾತಂತ್ರ್ಯಪೂರ್ವ ಜನರನ್ನು ಒಗ್ಗೂಡಿಸಲು ಈ ಆರಾಧನೆ ಪ್ರೇರಣೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಋಗ್ವೇದಗಳಲ್ಲೂ ಗಣೇಶನ ಸ್ತೋತ್ರಗಳನ್ನು ಮಾಡಲಾಗಿದೆ. ಗಣೇಶನ ಬಗ್ಗೆ ಅರ್ಥಗಳು ಏನೇ ಇದ್ದರೂ, ಜನರಲ್ಲಿ ದೈವದ ಪರಿಕಲ್ಪನೆ ಇದೆ. ಆ ಕಲ್ಪನೆ ಬಂದ ಮೇಲೆ ಈ ರೀತಿ ಲೇವಡಿ ಮಾಡುವುದು ಹಾಸ್ಯಾಸ್ಪದ ಮತ್ತು ಆಭಾಸ. ಹಿಂದೆಯೂ ಈ ರೀತಿ ಹಿಂದೂ ದೇವರುಗಳನ್ನು ವಿಕಾರವಾಗಿ ಚಿತ್ರಿಸಿದಾಗ, ಸರ್ಕಾರ ನಿಷೇಧಿಸಿತ್ತು. ಅದೇ ರೀತಿ, ಈ ಕೃತಿ ಮೇಲೆ ಸರ್ಕಾರ ನಿಷೇಧ ಹೇರಬೇಕು'.
- ಡಾ.ಚಿದಾನಂದಮೂರ್ತಿ, ಸಂಶೋಧಕರು

'ಇದೊಂದು ವಿಚಾರವಾದಿ ಹೆಸರಿನಲ್ಲಿ ಕುಖ್ಯಾತಿಗಾಗಿ ನಡೆಸಿದ ಕೃತಿಯಾಗಿದೆ. ಸಾವಿರಾರು ವರ್ಷಗಳಿಂದ ಪೂಜ್ಯನೀಯವಾಗಿ ಕಂಡುಕೊಂಡು ಬರುತ್ತಿರುವಾಗ ಈ ಸಂಶೋಧನೆ ಅಗತ್ಯತೆ ಏನಿತ್ತು? ಒಂದು ವೇಳೆ ಆಧಾರವಾಗಿಟ್ಟುಕೊಂಡೇ ಈ ಕೃತಿಯನ್ನು ರಚಿಸಿದ್ದರೂ ಈ ರೀತಿಯ ಪ್ರವೃತ್ತಿ ಸರಿ ಅಲ್ಲ. ಸಂಶೋಧನೆಗಳು ಅನ್ಯಧರ್ಮಗಳ ದೇವರುಗಳ ಮೇಲೂ ನಡೆಸಲಿ. ಕೇವಲ ಹಿಂದೂ ಧರ್ಮ ಮತ್ತು ಹಿಂದೂಗಳ ಭಕ್ತಿ, ಭಾವನೆಗಳಿಗೆ ಧಕ್ಕೆ ತರುವಂತಹದ್ದು ಅಕ್ಷಮ್ಯ. ಕೂಡಲೇ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅಥವಾ ಲೇಖಕರೇ ಸ್ವತಃ ಕೃತಿ ಹಿಂಪಡೆದು, ಬೇಷರತ್ತು ಕ್ಷಮೆಯಾಚಿಸಬೇಕು'.
- ಪ್ರಮೋದ್‌ ಮುತಾಲಿಕ್‌, ರಾಷ್ಟ್ರೀಯ ಅಧ್ಯಕ್ಷರು, ಶ್ರೀರಾಮ ಸೇನೆ.

'ಪ್ರಚಾರಪ್ರಿಯತೆ ಗೀಳಿಗಾಗಿ ಇಂತಹ ಕೀಳುಮಟ್ಟಕ್ಕೆ ಇಳಿದಿರುವುದು ಅಕ್ಷಮ್ಯ. ದೇವರನ್ನು ಈ ರೀತಿಯಾಗಿ ಚಿತ್ರಿಸುವುದೇ ಅಪರಾಧ; ಅದನ್ನು ಪ್ರಕಟಿಸಿರುವುದು ಅದಕ್ಕಿಂತ ದೊಡ್ಡ ತಪ್ಪು. ಹಿಂದೂಗಳ ಭಾವನೆಗಳಿಗೆ ವಿರುದ್ಧವಾದ, ಜನರ ಮನಸ್ಸು ಘಾಸಿಗೊಳಿಸುವ ಇಂತಹ ಕೃತ್ಯಗಳು ತಕ್ಷಣ ನಿಲ್ಲಬೇಕು. ಕೂಡಲೇ ಈ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಇಲ್ಲವಾದರೆ, ಇದರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು'.
- ಪ್ರಣವಾನಂದ ಸ್ವಾಮೀಜಿ, ಕಾರ್ಯಾಧ್ಯಕ್ಷರು, ಅಖೀಲ ಭಾರತ ಹಿಂದೂ ಮಹಾಸಭಾ

ಗಣೇಶೋತ್ಸವ ಮುಂದಿಟ್ಟುಕೊಂಡು ಉದ್ದೇಶಪೂರ್ವಕವಾಗಿ ನಾಸ್ತಿಕವಾದ ಬಿತ್ತುವ ವ್ಯವಸ್ಥಿತ ವಿಚಾರವಾದಿಗಳ ತಂಡದ ಕೃತ್ಯ ಇದಾಗಿದೆ. ಯಾವುದೇ ಕಾರಣಕ್ಕೂ ಇದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ.
- ಸೂರ್ಯನಾರಾಯಣ, ರಾಜ್ಯ ಸಂಚಾಲಕರು, ಬಜರಂಗದಳ

ಚಾರಿತ್ರಿಕ, ಸಾಮಾಜಿಕ, ಸಾಂಸ್ಕೃತಿಕ ಅಂಶಗಳು ನಮ್ಮ ತಲೆಮಾರಿಗೆ ಬರುವಷ್ಟರಲ್ಲಿ ಸಾಕಷ್ಟು ಪವಾಡೀಕರಣಗೊಂಡಿರುತ್ತವೆ. ಅಂತಹವುಗಳ ಬೀಜಸ್ವರೂಪಿ ವಾಸ್ತವತೆಯನ್ನು ತೆರೆದಿಡುವ ಪ್ರಯತ್ನ ಈ ಕೃತಿಯದ್ದಾಗಿದೆ. ಇದೊಂದು ಸಾಂಸ್ಕೃತಿಕ ಅಧ್ಯಯನ ವಿಧಾನ ಎನ್ನಬಹುದು. ವಾಸ್ತವವನ್ನು ನಗ್ನವಾಗಿ ನೋಡುವ ಕ್ರಮ ಇದಾಗಿದೆ. ಸಾಂಸ್ಕೃತಿಕ ಯತಾರ್ಥಿ ಅಷ್ಟೇ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ.
- ಬಂಜಗೆರೆ ಜಯಪ್ರಕಾಶ್‌, ಲೇಖಕರು

courtesy :Udayavani

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com