ಉಡುಪಿಯಲ್ಲಿ ಶ್ರೀಕೃಷ್ಣ ಜಯಂತಿ ಸಂಭ್ರಮ

ಉಡುಪಿ: ಕೃಷ್ಣ ಭಕ್ತರ ಪ್ರಮುಖ ಕೇಂದ್ರಗಳಲ್ಲೊಂದಾದ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಬುಧವಾರ ರಾತ್ರಿ ಶ್ರೀಕೃಷ್ಣ ಜಯಂತಿಯನ್ನು ಶೃದ್ಧಾಭಕ್ತಿಪೂರ್ವಕ ಆಚರಿಸಲಾಯಿತು. ದಿನವಿಡೀ ಉಪವಾಸ ವೃತಾಚರಿಸಿದ ಸಾವಿರಾರು ಮಂದಿ ಕೃಷ್ಣ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಆರಾಧ್ಯ ದೈವ ಕೃಷ್ಣನ ಹುಟ್ಟುಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸಿದರು.
ಸಿಂಹಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯ ಚಂದ್ರೋದಯ ಕಾಲದಲ್ಲಿ ರೋಹಣಿ ನಕ್ಷತ್ರದ ಗಳಿಗೆ, ಬುಧವಾರ ಮಧ್ಯರಾತ್ರಿ ಕಳೆದು 12.10 ಗಂಟೆಗೆ ಕೃಷ್ಣ ಜಯಂತಿಯ ಗಳಿಗೆಯಲ್ಲಿ ಪರ್ಯಾಯ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು ಕಡೆಗೋಲು ಕೃಷ್ಣನ ಮೂಲವಿಗ್ರಹದ ಮುಂಭಾಗದಲ್ಲಿ ಅರ್ಘ್ಯ ಪ್ರದಾನ ಮಾಡಿದರು. ನಂತರ ಕೃಷ್ಣ ಜಯಂತಿಯ ಈ ಅಪೂರ್ವ ಗಳಿಗೆಯನ್ನುಂಟು ಮಾಡಿದ ಚಂದ್ರನಿಗೆ ತುಳಸಿ ಕಟ್ಟೆಯಲ್ಲಿ ಅರ್ಘ್ಯ ಪ್ರದಾನ ಮಾಡಿದರು.
ಶ್ರೀಗಳ ನಂತರ ಮಠದ ಪ್ರಮುಖರು, ಉಡುಪಿಯ ಗಣ್ಯರು, ಸಾವಿರಾರು ಮಂದಿ ಮಾಧ್ವ ಕೃಷ್ಣ ಭಕ್ತರು ಅರ್ಘ್ಯ ಪ್ರದಾನ ಮಾಡಿ ಧನ್ಯತಾ ಭಾವ ಪಡೆದರು. ಉಡುಪಿ ಕೃಷ್ಣಮಠದಲ್ಲಿ, ಚಂದ್ರೋದಯ ಕಾಲಕ್ಕೆ ರೋಹಣಿ ನಕ್ಷತ್ರ ಇಲ್ಲದಿದ್ದಲ್ಲಿ ಅದನ್ನು ಕೃಷ್ಣ ಜನ್ಮಾಷ್ಟಮಿಯೆಂದೂ, ರೋಹಣಿ ನಕ್ಷತ್ರ ಇದ್ದರೇ ಅದನ್ನು ಕೃಷ್ಣ ಜಯಂತಿ ಎಂದೂ ಆಚರಿಸಲಾಗುತ್ತದೆ. ಈ ಬಾರಿ ಕೃಷ್ಣ ಜಯಂತಿ ಆಚರಣೆ ನಡೆಯಿತು. ಕೃಷ್ಣ ಜಯಂತಿಗೆ ಸಂಬಂಧಪಟ್ಟಂತೆ ಸೋದೆ ಮಠದಲ್ಲಿ ಇನ್ನೊಂದು ಸಂಪ್ರದಾಯವಿದೆ, ಅದು ವ್ಯಾಸಮುಷ್ಟಿ ಅರ್ಘ್ಯ ಪ್ರದಾನ. ಸೋದೆ ಮಠದಲ್ಲಿ ವ್ಯಾಸ ಮುಷ್ಟಿ ಎಂಬ ದೇವತಾಸಾನಿಧ್ಯವಿರುವ ಪೂಜಾ ಶಿಲೆಯೊಂದಿದೆ. ಸಂಪ್ರದಾಯದಂತೆ ಕೃಷ್ಣ ಜಯಂತಿ ಸಂದರ್ಭದಲ್ಲಿ ಸೋದೆ ಶ್ರೀಗಳು ಮಧ್ಯಾಹ್ನ ಈ ವ್ಯಾಸಮುಷ್ಟಿಗೂ ಅರ್ಘ್ಯ ಪ್ರದಾನ ಮಾಡಿದರು.
ಎಲ್ಲೆಲ್ಲೂ ಮುದ್ದು ಕೃಷ್ಣರು: ಉಡುಪಿಯ ಕೃಷ್ಣ ಜಯಂತಿಯ ಇನ್ನೊಂದು ಸಂಭ್ರಮ ಎಂದರೇ ಮುದ್ದು ಮಕ್ಕಳ ಕೃಷ್ಣ ವೇಷ ಸ್ಪರ್ಧೆ. ನೂರಾರು ಮಕ್ಕಳು ಭಾಗವಹಿಸುವ ಈ ಸ್ಪರ್ಧೆ ಕೃಷ್ಣ ಮಠಕ್ಕೆ ವಿಶೇಷ ಕಳೆಕಟ್ಟುತ್ತದೆ. ಬುಧವಾರ ಪರ್ಯಾಯ ಸೋದೆ ಮಠದ ವತಿಯಿಂದ ಮುದ್ದು ಮಕ್ಕಳ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. 500ಕ್ಕೂ ಹೆಚ್ಚು ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಗರದ ತುಂಬಾ ಹುಲಿಗಳು: ಕೃಷ್ಣ ಲೀಲೋತ್ಸವಕ್ಕೂ ಕರಾವಳಿಯ ಭರ್ಜರಿ ಹುಲಿವೇಷಕ್ಕೂ ಅವಿನಾಭಾವ ಸಂಬಂಧ ಇದೆ. ಉಡುಪಿಯಲ್ಲಿ ಹುಲಿವೇಷ ಧರಿಸಿ ರಸ್ತೆ ರಸ್ತೆ ಸುತ್ತುತ್ತಾ ತಾಸೆಯ ನಾದಕ್ಕೆ ಮೈಮಣಿಸಿ ಕುಣಿಯುವ ಹತ್ತಾರು ತಂಡಗಳಿವೆ. ನವಮಿಯಂದು ರಾತ್ರಿ ಇಡೀ ವೇಷ ಬಳಿದುಕೊಂಡು ಮುಂಜಾನೆ ರಸ್ತೆಗಿಳಿಯುತ್ತವೆ. ಬುಧವಾರ ಉಡುಪಿಯ ಗಲ್ಲಿಗಲ್ಲಿಗಳಲ್ಲಿ ತಾಸೆಯ ಸದ್ದು ಕೇಳುತ್ತಿತ್ತು. ಜತೆಗೆ ರಕ್ಕಸ ವೇಷಧಾರಿಗಳು, ಪೇಪರು, ಹಾಲು ಹಾಕುವಂಥ ಫ್ಯಾನ್ಸಿ ವೇಷಗಳೂ ಅಂಗಡಿ ಅಂಗಡಿಗೆ ಹೋಗಿ ಬೇಡುತ್ತಿದ್ದವು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com