ವಿವಾಧಿತ ಕೃತಿ 'ಢುಂಢಿ' ಲೇಖಕ ಯೋಗೇಶ್‌ ಬಂಧನ

ಬೆಂಗಳೂರು: ಕೋಟ್ಯಂತರ ಮಂದಿ ಆರಾಧಿಸುವ ಗಣೇಶನನ್ನು ರೌಡಿ ಎಂದು ಚಿತ್ರಿಸಲಾಗಿರುವ ವಿವಾದಾತ್ಮಕ 'ಢುಂಢಿ' ಕೃತಿಯ ಲೇಖಕ ಯೋಗೇಶ್‌ ಮಾಸ್ಟರ್‌ ಅವರನ್ನು ಗುರುವಾರ ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
       ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಗಣಪತಿಯ ಹುಟ್ಟಿನ ಬಗ್ಗೆ ಪುಸ್ತಕದಲ್ಲಿ ಅವಹೇಳನಕಾರಿಯಾಗಿ ಬಿಂಬಿಸಿರುವುದಲ್ಲದೆ, ಗಣಪತಿಯನ್ನು ರೌಡಿ ಎಂದು ಚಿತ್ರಿಸಲಾಗಿದ್ದು, ಲೇಖಕ ಯೋಗೇಶ್‌ ಮಾಸ್ಟರ್‌ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಅಖೀಲ ಭಾರತ ಹಿಂದೂ ಮಹಾಸಭಾ ಕಾರ್ಯಾಧ್ಯಕ್ಷ ಪ್ರಣವಾನಂದಸ್ವಾಮಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಲೇಖಕರ ವಿರುದ್ಧ ಐಪಿಸಿ ಸೆಕ್ಷನ್‌ 292 ಹಾಗೂ 298ರಡಿ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ) ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನಗರದ ಜ್ಞಾನಭಾರತಿ ಬಡಾವಣೆ ಬಳಿ ಅವರನ್ನು ಬಂಧಿಸಿದ್ದಾರೆ.
       ನಗರದ ಪಶ್ಚಿಮ ವಿಭಾಗ (ಕಾನೂನು ಮತ್ತು ಸುವ್ಯವಸ್ಥೆ) ಜಂಟಿ ಪೊಲೀಸ್‌ ಆಯುಕ್ತ ಎಸ್‌. ರವಿ ಅವರು, ಢುಂಢಿ ಕೃತಿ ಲೇಖಕ ಯೋಗೇಶ್‌ ಮಾಸ್ಟರ್‌ ಅವರನ್ನು ಬಂಧಿಸಲಾಗಿದೆ ಎಂದು ಖಚಿತಪಡಿಸಿದರು.
       'ಹಿಂದೂಗಳ ಆರಾಧ್ಯ ದೈವ ಗಣಪತಿ ಕುರಿತು ಅವಹೇಳನವಾಗಿ ಕೃತಿ ರಚಿಸುವ ಮುಖಾಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಯೋಗೇಶ್‌ ಮಾಸ್ಟರ್‌ ಧಕ್ಕೆ ಮಾಡಿದ್ದು, ಅವರ ವಿರುದ್ಧ ಕ್ರಮ ಜರುಗಿಸುವಂತೆ ಹಿಂದೂ ಧಾರ್ಮಿಕ ಮಹಾಸಭಾದ ಪದಾಧಿಕಾರಿಗಳು ಕಲಾಸಿಪಾಳ್ಯ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಮೇರೆಗೆ ಬಂಧಿಸಲಾಗಿದೆ' ಎಂದೂ ರವಿ ಸ್ಪಷ್ಟಪಡಿಸಿದರು.

ಬಿಡುಗಡೆ ಬೆನ್ನಲ್ಲೇ ವಿವಾದ:

ಅರಣ್ಯಕ ಗಣಪತಿಯಾದ ಕತೆ ಎಂದೇ ಕೃತಿಯ ಮುಖಪುಟದಲ್ಲಿ ಹೇಳಲಾಗಿದ್ದು, ಇಡೀ ಕಾದಂಬರಿಯಲ್ಲಿ ಗಣಪನನ್ನು ವಿಘ್ನಕಾರಕ ಎಂಬಂತೆ ಬಿಂಬಿಸಲಾಗಿತ್ತು. ಇಷ್ಟೇ ಅಲ್ಲ, ಗಣೇಶನ ಕೈಯಲ್ಲಿ ಲಾಂಗು-ಮಚ್ಚಿನಂತಹ ಆಯುಧಗಳನ್ನು ಹಿಡಿದ ಚಿತ್ರವನ್ನೂ ಪ್ರಕಟಿಸಲಾಗಿತ್ತು. ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತ್ತು.

'ಡುಂಢಿ' ಕೃತಿಯಲ್ಲಿ ಲೇಖಕ ಯೋಗೇಶ್‌ ಮಾಸ್ಟರ್‌, ಕೋಟ್ಯಂತರ ಹಿಂದೂಗಳಿಂದ ಪೂಜಿಸಲ್ಪಡುವ ಗಣೇಶ ಗೂಂಡಾ, ಕ್ರೂರಿ ಎಂದು ವಿಶ್ಲೇಷಿಸಿದ್ದರು. ಅಲ್ಲದೇ, ಶಿವ-ಪಾರ್ವತಿ ಹಾಗೂ ಗಣೇಶನ ಸಂಬಂಧವನ್ನು ಆಕ್ಷೇಪಾರ್ಹವಾಗಿ ಈ ಕಾದಂಬರಿಯಲ್ಲಿ ಲೇಖಕರು ಹೆಣೆದಿದ್ದರು.

ಕೃತಿ ಬಿಡುಗಡೆಯಾದ ಬೆನ್ನಲ್ಲೇ ವಿವಾದ ಭುಗಿಲೆದ್ದಿತ್ತು. ಗಣೇಶೋತ್ಸವ ಮುಂದಿರುವಾಗಲೇ ಇಂತಹದ್ದೊಂದು ಕೃತಿಯನ್ನು ಉದ್ದೇಶಪೂರ್ವಕವಾಗಿ ಹೊರತಂದಿದ್ದು, ಇದರಿಂದ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಕೂಡಲೇ ಪುಸ್ತಕದ ಮೇಲೆ ನಿಷೇಧ ಹೇರುವುದರ ಜತೆಗೆ ಲೇಖಕರನ್ನು ಬಂಧಿಸಬೇಕು ಎಂದು ಹಿಂದೂ ಮಹಾಸಭಾ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು. ಕನ್ನಡ ಮತ್ತು ಸಂಸ್ಕೃತಿ ಸಚಿವರು, ಮಠಾಧೀಶರಾದಿಯಾಗಿ ಬಹುತೇಕರು ಕೃತಿಯಲ್ಲಿನ ಅಂಶಗಳನ್ನು ಖಂಡಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com