ಜಿ.ಪಂ. ಸಾಮಾನ್ಯ ಸಭೆ

ಉಡುಪಿ:  ಜಿಲ್ಲೆಯಲ್ಲಿ ಎಂಡೋಸಲ್ಫಾನ್‌ ಸಿಂಪಡನೆಯಾದ 73 ಗ್ರಾಮಗಳಿಗೆ ಭೇಟಿ ಇತ್ತು ಪ್ರಾಥಮಿಕ ಸಮೀಕ್ಷೆ ಮಾಡಲಾಗಿದ್ದು, ಈ ವರದಿ ಪ್ರಕಾರ ಜಿಲ್ಲೆಯಲ್ಲಿ 2,156 ಎಂಡೋ ಪೀಡಿತರು ಪತ್ತೆಯಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿ ಡಾ| ರಾಮಚಂದ್ರ ಬಾಯರಿ ಹೇಳಿದರು.

ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್‌ ಅಧ್ಯಕ್ಷತೆಯಲ್ಲಿ ಶನಿವಾರ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಈ ವಿಷಯವನ್ನು ತಿಳಿಸಿದರು. ಕರಾವಳಿಯ ಉಡುಪಿ, ದ.ಕ. ಮತ್ತು ಉ.ಕ. ಜಿಲ್ಲೆಗಳಲ್ಲಿ ಎಂಡೋ ಪೀಡಿತರ ಸಮೀಕ್ಷೆ ನಡೆಸಿ ಕೇರಳ ಮಾದರಿಯಲ್ಲಿ ಪರಿಹಾರ ನೀಡಲು ಸರಕಾರ ಯೋಜಿಸಿದಂತೆ ಎಂಡೋ ಸಂತ್ರಸ್ತರ ಸ್ವತಂತ್ರ ಸಮಿತಿ ರಚಿಸಿ ಉಡುಪಿ ಜಿಲ್ಲೆಯಲ್ಲಿ ಸಮೀಕ್ಷೆ ನಡೆಸಲಾಗಿದೆ. 3 ಜಿಲ್ಲೆಗೆ ರಾಜ್ಯದ ಬಜೆಟ್‌ನಲ್ಲಿ 50 ಕೋ.ರೂ. ಮೀಸಲಿರಿಸಲಾಗಿದೆ. ಅದರಂತೆ ಜಿಲ್ಲೆಗೆ 11.25 ಕೋ.ರೂ. ಬಿಡುಗಡೆಯಾಗಲಿದೆ. ಎಂಡೋ ಪೀಡಿತರಿಗಾಗಿ ಮುಂದೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಈ ಬಗ್ಗೆ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪರಿಶೀಲನೆಯೂ ನಡೆಯಲಿದೆ ಎಂದು ಬಾಯರಿ ತಿಳಿಸಿದರು.

ಅಧ್ಯಕ್ಷರ '10 ಪರ್ಸೆಂಟ್‌': ಸದಸ್ಯರ ಆಕ್ಷೇಪ

ಜಿ.ಪಂ. ಅಧ್ಯಕ್ಷರು ಸರಕಾರದ ಅನುದಾನದಲ್ಲಿ ಶೇ. 10 ಉಳಿಸಿಕೊಂಡು ಶೇ. 90ನ್ನು ಮಾತ್ರ ಕಾಮಗಾರಿಗಳಿಗೆ ವಿನಿಯೋಗಿಸಲು ಎಂಜಿನಿಯರ್‌ಗಳಿಗೆ ಸೂಚಿಸಿದ್ದಾರೆ. ಸಭೆಗೆ ಕ್ರಿಯಾಯೋಜನೆಯ ಅಜೆಂಡಾ ನೀಡಿಲ್ಲ ಎಂದು ಆರೋಪಿಸಿ ಸದಸ್ಯರಾದ ಅನಂತ ಮೊವಾಡಿ ಮತ್ತು ಮಂಜುನಾಥ ಪೂಜಾರಿ ಸಭೆಯ ಪ್ರಾರಂಭದಲ್ಲಿಯೇ ಆಕ್ಷೇಪಿಸಿ ಗದ್ದಲ ನಡೆಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷರು, 10 ಪರ್ಸೆಂಟ್‌ ಉಳಿಸಿಕೊಳ್ಳಲು ಹೇಳಿರುವುದು ನಿಜ. ಯಾಕೆಂದರೆ ಅಧ್ಯಕ್ಷರ ನಿಧಿ ಎಂದು ಪ್ರತ್ಯೇಕ ಅನುದಾನ ಈ ಬಾರಿ ಬಂದಿಲ್ಲ. ಮುಂದೇನಾದರೂ ತುರ್ತು ಕಾರ್ಯಗಳು ಎದುರಾದಲ್ಲಿ ವಿನಿಯೋಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ವಿನಃ ಬೇರೆ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಅಕ್ಷರ ದಾಸೋಹ: ಶಾಲೆಗಳಿಗೆ 5 ಸಾವಿರ

ಅಕ್ಷರ ದಾಸೋಹ ಕಾರ್ಯಕ್ರಮದಡಿ ಪಾತ್ರೆ ಖರೀದಿಗೆ ಪ್ರತಿ ಶಾಲೆಗಳಿಗೆ ವಾರ್ಷಿಕ 5 ಸಾವಿರ ರೂ. ಅನುದಾನ ಶಿಕ್ಷಣ ಇಲಾಖೆಯಿಂದ ಲಭ್ಯವಿದೆ. 1,006 ಶಾಲೆಗಳ ಪೈಕಿ 950 ಶಾಲೆಗಳಿಗೆ ಈಗಾಗಲೇ ಅನುದಾನ ನೀಡಲಾಗಿದೆ. ಶಾಲೆಯ ಎಸ್‌ಡಿಎಂಸಿ ಖಾತೆಗೆ ಈ ಹಣ ವರ್ಗಾವಣೆಯಾಗುತ್ತದೆ ಎಂದು ಶಿಕ್ಷಣಾಧಿಕಾರಿಗಳು ಹೇಳಿದರು. ಉಳಿದ ಶಾಲೆಗಳಿಗೆ ಯಾಕೆ ಕಳುಹಿಸಲಾಗಿಲ್ಲ? ಎಲ್ಲ ಶಾಲೆಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆಯೇ? ಎಂದು ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಲಿಲ್ಲ. ತತ್‌ಕ್ಷಣ ಎಲ್ಲ ಶಾಲೆಗಳಿಗೆ ಸೂಚನೆ ನೀಡುವಂತೆ ಸಿಇಒ ಅವರು ಡಿಡಿಪಿಐಗೆ ಸೂಚಿಸಿದರು.

ಬೈಂದೂರು ನಿಲ್ದಾಣಕ್ಕೆ ಬಸ್‌ ಯಾಕೆ ಬರಲ್ಲ?

ಬೈಂದೂರಿನ ಹೊಸ ಬಸ್‌ ನಿಲ್ದಾಣಕ್ಕೆ ಬಸ್ಸುಗಳು ಬರುತ್ತಿಲ್ಲ ಎಂದು ಪದೇ ಪದೇ ಸಭೆಯಲ್ಲಿ ಹೇಳುತ್ತಿದ್ದರೂ ಆರ್‌ಟಿಒ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು, ಇದರ ಹಿಂದೆ ಬಸ್ಸಿನವರ ಲಾಬಿ ಇದೆಯೇ? ಎಂದು ಇಲಾಖೆಗೆ ಪ್ರಶ್ನಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಟಿಒ ಅರುಣ್‌ ಕುಮಾರ್‌, ನಾನು ಹೊಸ ಅಧಿಕಾರಿ ಆದರೂ ಬೈಂದೂರಿಗೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಮುಂದೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ಇತ್ತರು.

ಜಿಲ್ಲೆಯ ಕೆಲ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರಿರುವ ಕಾರಣ ಸರಕಾರಕ್ಕಾಗುತ್ತಿರುವ ನಷ್ಟ, ಸಿಆರ್‌ಜೆಡ್‌ ಕಾನೂನು ಸಡಿಲೀಕರಣಗೊಳಿಸುವಿಕೆ, ಎಪಿಎಲ್‌ ಟು ಬಿಪಿಎಲ್‌ ರೇಶನ್‌ ಕಾರ್ಡು ಸಮಸ್ಯೆ ಮೊದಲಾದ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಎಪಿಎಲ್‌ನಲ್ಲೂ ಬಡವರಿರುವ ಕಾರಣ ಎಪಿಎಲ್‌ ಕಾರ್ಡುದಾರರಿಗೂ ಕನಿಷ್ಠ 10 ಕೆ.ಜಿ.ಯಾದರೂ ಅಕ್ಕಿ ನೀಡುವಂತೆ ನಿರ್ಣಯ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು. ಜಿ.ಪಂ. ಸದಸ್ಯರ ವತಿಯಿಂದ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ 38,750 ರೂ. ಹಣವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಹಸ್ತಾಂತರಿಸಲಾಗುವುದು ಎಂದು ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.

ಸದಸ್ಯರಾದ ಕಟಪಾಡಿ ಶಂಕರ ಪೂಜಾರಿ, ಬಾಬು ಶೆಟ್ಟಿ, ದಿವಾಕರ ಕುಂದರ್‌, ಸುಪ್ರೀತಾ ಡಿ. ಶೆಟ್ಟಿ, ಗೀತಾಂಜಲಿ ಎಂ. ಸುವರ್ಣ, ಮಮತಾ ಹರೀಶ್‌ ಅಧಿಕಾರಿ, ಇಂದಿರಾ, ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಗೌರಿ ದೇವಾಡಿಗ, ಸುಪ್ರೀತ್‌ ಶೆಟ್ಟಿ ಮೊದಲಾದವರು ಸಭೆಯಲ್ಲಿ ಮಾತನಾಡಿದರು.

ಜಿ.ಪಂ. ಉಪಾಧ್ಯಕ್ಷೆ ಮಮತಾ ಆರ್‌. ಶೆಟ್ಟಿ ಹದ್ದೂರು, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಣಪತಿ ಟಿ. ಶ್ರೀಯಾನ್‌, ಅರುಣ್‌ ಶೆಟ್ಟಿ ಪಾದೂರು, ಉದಯ ಎಸ್‌. ಕೋಟ್ಯಾನ್‌, ಸಿಇಒ ಎಸ್‌.ಎ. ಪ್ರಭಾಕರ ಶರ್ಮ, ಉಪಕಾರ್ಯದರ್ಶಿ ಪ್ರಾಣೇಶ್‌ ರಾವ್‌, ಮುಖ್ಯ ಯೋಜನಾಧಿಕಾರಿ ವಿಜಯ ಕುಮಾರ್‌ ಶೆಟ್ಟಿ, ಲೆಕ್ಕಾಧಿಕಾರಿ ತಿಮ್ಮಪ್ಪ ಉಪಸ್ಥಿತರಿದ್ದರು.

ಶಿಕ್ಷಕರಿಗೆ ಜಾಗ: ಮರುತನಿಖೆಗೆ ಸೂಚನೆ

ಕುಂದಾಪುರ ತಾಲೂಕಿನ ಬಿಜೂರು ಗ್ರಾ.ಪಂ. ವ್ಯಾಪ್ತಿಗೆ ಬರುವ ಹೊಸ್ಕೋಟೆಯ ಕಿ.ಪ್ರಾ.ಶಾಲೆಯೊಂದರ ಪಕ್ಕದ ಎಕರೆಗಟ್ಟಲೆ ಸರಕಾರಿ ಜಾಗವನ್ನು ಕೆಲವರು ಶಿಕ್ಷಕರೊಂದಿಗೆ ಸೇರಿಕೊಂಡು ಅಕ್ರಮ-ಸಕ್ರಮದಡಿ ಮಂಜೂರು ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಮರುತನಿಖೆ ನಡೆಸಬೇಕು ಎಂದು ಸದಸ್ಯರು ಆಗ್ರಹಿಸಿದರು. ಕೂಡಲೇ ಕಂದಾಯ ಇಲಾಖೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ವರದಿ ಸಲ್ಲಿಸುವಂತೆ ಸಿಇಒ ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com