ಪ್ರಾ. ಶಾಲೆ - 9400, ಪ್ರೌಢಶಾಲೆ -1137 ಅತಿಥಿ ಶಿಕ್ಷಕರ ನೇಮಕಾತಿ

26ರಿಂದ ಅರ್ಜಿ ಸ್ವೀಕಾರ, ಸೆ. 6ರಂದು ಆಯ್ಕೆ ಪಟ್ಟಿ ಪ್ರಕಟ

ಸುದ್ದಿ: ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲು ಸರಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳಿಗೆ ಒಟ್ಟು 9,405 ಹಾಗೂ ಪ್ರೌಢಶಾಲೆಗಳಿಗೆ ಒಟ್ಟು 1,137 ಅತಿಥಿ ಶಿಕ್ಷಕರ ನೇಮಕಾತಿ ನಡೆಯಲಿದೆ. ಆ. 26ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ.

ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳುವ ವರೆಗೆ ಅಥವಾ 2014ರ ಮಾರ್ಚ್‌ ವರೆಗೆ ಯಾವುದು ಮೊದಲೋ ಅಲ್ಲಿ ವರೆಗೆ ಕೆಲವು ಶರತ್ತಗಳಿಗೆ ಒಳಪಡಿಸಿ ಅಡ್‌ - ಹಾಕ್‌ ವ್ಯವಸ್ಥೆಯಡಿ ಆಯ್ಕೆ ಮಾಡಿಕೊಳ್ಳಲು ಸರಕಾರ ಅನುಮತಿ ನೀಡಿದೆ.

ದ.ಕ. - 312, ಉಡುಪಿ - 111

ದ.ಕನ್ನಡ ಜಿಲ್ಲೆಗೆ ಪ್ರಾಥಮಿಕ ಶಾಲೆಗಳಿಗೆ ಒಟ್ಟು 250 ಹಾಗೂ ಪ್ರೌಢಶಾಲೆಗಳಿಗೆ 62 ಅತಿಥಿ ಶಿಕ್ಷಕರ ತಾತ್ಕಾಲಿಕ ನೆಲೆಯಲ್ಲಿ ನೇಮಕಾತಿಗೆ ಅನುಮತಿ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಿಗೆ 100 ಹಾಗೂ ಪ್ರೌಢಶಾಲೆಗಳಿಗೆ 11 ಅತಿಥಿ ಶಿಕ್ಷಕರ ನೇಮಕಾತಿ ನಡೆಯಲಿದೆ. ಯಾದಗಿರಿ ಜಿಲ್ಲೆಯ ಪ್ರಾಥಮಿಕ ಶಾಲೆಗಳಿಗೆ 750 ಅತಿಥಿ ಶಿಕ್ಷಕರ ಹಂಚಿಕೆ ಮಾಡಲಾಗಿದ್ದು, ಇದು ರಾಜ್ಯದಲ್ಲೆ ಗರಿಷ್ಠವಾಗಿದೆ. ಪ್ರೌಢ ಶಾಲಾ ವಿಭಾಗದಲ್ಲಿ ಗುಲ್ಬರ್ಗಾಕ್ಕೆ ಗರಿಷ್ಠ 104 ಅತಿಥಿ ಶಿಕ್ಷಕರನ್ನು ಹಂಚಿಕೆ ಮಾಡಲಾಗಿದೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಉಡುಪಿ ಹಾಗೂ ಬೆಂಗಳೂರು ಉತ್ತರ ಜಿಲ್ಲೆಗಳು (ತಲಾ 100 ) ಕನಿಷ್ಠ ಸಂಖ್ಯೆಯಲ್ಲಿ ಅತಿಥಿ ಶಿಕ್ಷಕರನ್ನು ಹಂಚಿಕೆ ಮಾಡಲಾಗಿದೆ.

ಮಾಸಿಕ ಗೌರವಧನ

ಸರಕಾರ ನಿಗದಿಪಡಿಸಿರುವ ಮಾನದಂಡದಂತೆ ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರಿಗೆ ಮಾಸಿಕ 5,500 ರೂ. ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಮಾಸಿಕ 6,000 ರೂ. ಗೌರವಧನ ನೀಡಲಾಗುತ್ತದೆ. ಅತಿಥಿ ಶಿಕ್ಷಕರ ಹಾಜರಾತಿ ಕುರಿತು ಪ್ರತ್ಯೇಕ ಹಾಜರಾತಿ ಪುಸ್ತಕ ಹಾಗೂ ಗೌರವ ಧನ ಪಾವತಿ ಬಗ್ಗೆ ಅಳವಡಿಸಿರುವ ಪದ್ದತಿಯನ್ನೇ ಮುಂದುವರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ತನ್ನ ಸುತ್ತೋಲೆಯಲ್ಲಿ ನಿರ್ದೇಶನ ನೀಡಿದೆ.

ಸರಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಅಗತ್ಯವಿರುವ ಶಾಲೆಗಳಿಗೆ ಮರುಹಂಚಿಕೆ ಪ್ರಕ್ರಿಯೆ ಈಗಾಗಲೇ ಚಾಲನೆಯಲ್ಲಿದೆ. ಇದು ಪೂರ್ಣಗೊಂಡ ಬಳಿಕ ಅಗತ್ಯವಿರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ತುರ್ತಾಗಿ ನಿಯೋಜಿಸಲು ಕ್ರಮಕೈಗೊಳ್ಳಲು ಆದೇಶದಲ್ಲಿ ಸೂಚಿಸಲಾಗಿದೆ. ಅನುದಾನಿತ ಪ್ರಾಥಮಿಕ ಶಾಲೆಗಳ ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆ ಪ್ರಕ್ರಿಯೆ ಪೂರ್ಣಗೊಂಡ ಅನಂತರ ಅಗತ್ಯವಿರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಲು ಇಲಾಖೆ ಸೂಚನೆ ನೀಡಿದೆ.

ವರದಿ ಕೃಪೆ: ಕೇಶವ ಕುಂದರ್‌
Republished with social interest
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com