ಅರಣ್ಯ ಹಕ್ಕು ಕಾಯಿದೆ ಸರಳೀಕರಣಕ್ಕೆ ಪ್ರಯತ್ನ: ಸಚಿವ ರಮಾನಾಥ ರೈ

ಬೈಂದೂರು: ಅರಣ್ಯ ಹಕ್ಕು ಕಾಯಿದೆ ಸರಳೀಕರಣಕ್ಕೆ ಕಾನೂನಿನ ಇತಿಮಿತಿಯಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಸುಪ್ರೀಂ ಕೋರ್ಟ್‌ನ ಆದೇಶ ಗಣನೆಯಲ್ಲಿಟ್ಟುಕೊಂಡು ಕಾನೂನಿಗೆ ತೊಂದರೆಯಾಗದ ರೀತಿಯಲ್ಲಿ ಇಲಾಖೆ ಕೆಲಸ ನಿರ್ವಹಿಸಲು ಚಿಂತನೆ ನಡೆಸುತ್ತಿದೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು. 
    ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಶೇ.30ರಷ್ಟು ಮಾತ್ರ ಅರಣ್ಯವಿದೆ. ಉಳಿದ ಪ್ರದೇಶ ಜನವಸತಿಯಿಂದ ಕೂಡಿದೆ. ಅರಣ್ಯ ಭಾಗದಲ್ಲಿ 1 ಹೆಕ್ಟೇರ್ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಕೊಡಲು ಅವಕಾಶವಿದೆ. ಕಂದಾಯ ಇಲಾಖೆ ಸಹಕಾರದಿಂದ ಮಾತ್ರ ಸಾಧ್ಯ. ಅರಣ್ಯದಲ್ಲಿ ನೆಲೆಸಿರುವ ಮಂದಿಗೆ ಮೂಲ ಸೌಕರ್ಯ ಒದಗಿಸಲು ಇಲಾಖೆ ಅಡ್ಡಿಪಡಿಸದು. ಮಾವಿನಕಾರಿನಂತಹ ಗ್ರಾಮಗಳಿಗೆ ಅಂಡರ್‌ಗ್ರೌಂಡ್ ಮೂಲಕ ವಿದ್ಯುತ್ ಸಂಪರ್ಕ ನೀಡುವ ಬಗ್ಗೆ ಯೋಚನೆ ನಡೆಸಿದ್ದೇವೆ. ಕಂಬದ ಮೂಲಕ ವಿದ್ಯುತ್ ಮಾರ್ಗ ಕೊಂಡೊಯ್ಯುವುದರಿಂದ ಕಾಡು ಪ್ರಾಣಿಗಳಿಗೆ, ಸಸ್ಯ ಸಂಕುಲಕ್ಕೆ ತೊಂದರೆ ಉಂಟಾಗುತ್ತದೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುವುದು ಎಂದರು. 

ಒಕ್ಕಲ್ಲೆಬ್ಬಿಸುವ ಪ್ರಶ್ನೆ ಇಲ್ಲ: ವನ್ಯಜೀವಿ ವಲಯ, ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ಒಕ್ಕಲ್ಲೆಬ್ಬಿಸಲಾಗುತ್ತಿದೆ ಎಂಬ ಗುಮಾನಿ ಹಬ್ಬಿದೆ. ಆದರೆ ಒಕ್ಕಲ್ಲೆಬ್ಬಿಸುವ ಪ್ರಶ್ನೆಯೇ ಇಲ್ಲ. ಕಾನೂನು ಪ್ರಕಾರವಾಗಿ ನೆಲೆಸಿರುವವರನ್ನು ಒಕ್ಕಲ್ಲೆಬ್ಬಿಸಲಾಗದು. ಸರಕಾರಿ ಜಾಗ ಅತಿಕ್ರಮಿಸಿಕೊಂಡವರ ವಿರುದ್ಧ ಮಾತ್ರ ಕಾನೂನು ಕ್ರಮ ಜರುಗಿಸಲಾಗುವುದು. ಒಂದೊಮ್ಮೆ ಒಕ್ಕಲ್ಲೆಬ್ಬಿಸುವ ಪ್ರಶ್ನೆ ಎದುರಾದಲ್ಲಿ ಅಂತವರಿಗೆ ಸೂಕ್ತ ಪರಿಹಾರ ಮಾರ್ಗ ಕಲ್ಪಿಸಲಾಗುವುದು. ದಟ್ಟ ಕಾನನದಲ್ಲಿಯೂ ಜನರು ನೆಲೆಸಿದ್ದಾರೆ. ಇದರಿಂದ ಕಾಡಿನ ಪ್ರಾಣಿಗಳು ನಾಡಿಗೆ ಬರುತ್ತಿವೆ. ಆನೆ ಹಾವಳಿ ಇದಕ್ಕೊಂದು ಸಾಕ್ಷಿ. ಇದರಿಂದ ಪ್ರಾಕೃತಿಕ ಅಸಮತೋಲನ ಉಂಟಾಗುತ್ತಿದೆ. ಇದೊಂದು ಜಾಗತಿಕ ಸಮಸ್ಯೆ. ಅರಣ್ಯ, ಪರಿಸರ ಉಳಿಸುವ ನಿಟ್ಟಿನಲ್ಲಿ ಇಲಾಖೆ ಶ್ರಮವಹಿಸಿ ದುಡಿಯಲಿದೆ ಎಂದರು. 

ಕಾಂಗ್ರೆಸ್ ಮುಖಂಡರಾದ ರಾಜು ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ, ಮಂಜುನಾಥ ಖಾರ್ವಿ, ಮೋಹನ ಪೂಜಾರಿ, ವಲಯ ಅರಣ್ಯಾಕಾರಿ ವಿನಯಕುಮಾರ್ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com