ಉಡುಪಿ ಜಾಮಿಯಾ ಮಸೀದಿಗೆ ಬಿಷಪ್ ಭೇಟಿ

ಉಡುಪಿ: ರಥಬೀದಿಯಲ್ಲಿ ನಡೆದ ವಿಟ್ಲ ಪಿಂಡಿ (ಶ್ರೀಕೃಷ್ಣ ಲೀಲೋತ್ಸವ) ಸಂಭ್ರಮದ ಮಧ್ಯೆ ಉಡುಪಿ ಧರ್ಮಪ್ರಾಂತ್ಯದ ಬಿಷಪರು ಜಾಮಿಯಾ ಮಸೀದಿಗೆ ಗುರುವಾರ ಸಾಮರಸ್ಯ, ಸೌಹಾರ್ದದ ಭೇಟಿ ನೀಡಿದರು. 
      ಬಿಷಪ್ ರೈಟ್ ರೆ. ಫಾ. ಡಾ. ಜೆರಾಲ್ಡ್ ಐಸಾಕ್ ಲೋಬೋ ಮಾತನಾಡಿ, ಪರರಿಗೆ ತೋರುವ ಅನುಕಂಪ, ದಯೆ ಹಾಗೂ ಬಡವರ, ನಿರ್ಗತಿಕರ ಪೋಷಣೆಯೇ ದೇವರ ಒಲುಮೆಗಿರುವ ದಾರಿ. 
       ಇಸ್ಲಾಂ ಪದದ ಅರ್ಥವೇ ಶಾಂತಿ. ಕುರಾನಿನಲ್ಲಿ ಶಾಂತಿಯುತ ಸಹಬಾಳ್ವೆಗೆ ಪೂರಕ ಉಲ್ಲೇಖವಿದೆ. ಬಡವರಿಗೆ ದಾನ ನೀಡಿ ಪೋಷಿಸುವ ವ್ಯವಸ್ಥಿತ ಸಂಪ್ರದಾಯ ಇಸ್ಲಾಂನಲ್ಲಿದೆ. ಅನ್ಯರಿಗೆ ಕೆಡುಕು, ಹಾನಿ ಮಾಡದೆ ಪರಸ್ಪರ ಪ್ರೀತಿ, ವಿಶ್ವಾಸ, ಸೌಹಾರ್ದದಿಂದ ಬಾಳಬೇಕು. ಸಾಮಾನ್ಯ ಜನರ ಕಷ್ಟ, ನೋವುಗಳಿಗೆ ಸ್ಪಂದಿಸಬೇಕು. ಶಾಂತಿ, ಸಹನೆ, ಹೊಂದಾಣಿಕೆ ಇಸ್ಲಾಂ, ಹಿಂದೂ ಧರ್ಮಗಳ ಪ್ರಮುಖ ಸಂದೇಶ. ಧರ್ಮ ಬೇರೆಯಾದರೂ ನಂಬಿಕೆಯ ಮೂಲವೊಂದೇ ಎಂದರು. 
     ಬಿಷಪ್ ವತಿಯಿಂದ ಮಸೀದಿ ಗುರುಗಳಿಗೆ ಸ್ಮರಣಿಕೆ (ಅಲ್ಲಾಹು) ನೀಡಲಾಯಿತು. ಜಾಮಿಯಾ ಮಸೀದಿಯ ಗುರು ವೌಲಾನಾ ಮುಹಿಯುದ್ದೀನ್ ಜಿಲಾನಿ ಮಾತನಾಡಿ, ಸಂಘರ್ಷ ತೊರೆದು, ಪ್ರೀತಿ ಮಾಡಬೇಕು. ಪರಸ್ಪರರ ಧರ್ಮ ಅರಿಯಬೇಕು ಎಂದು ಹೇಳಿದರು. 
       ರೆ.ಫಾ. ವಿಲಿಯಂ ಮಾರ್ಟಿಸ್, ಮುಹಮ್ಮದ್ ವೌಲಾನಾ ಉಪಸ್ಥಿತರಿದ್ದರು. ಹಾಜಿ ಟಿ. ಎಸ್. ಬುಡಾನಾ ಬಾಷಾ ಸ್ವಾಗತಿಸಿದರು. ಉಸ್ಮಾನ್ ಅಲಿ ಸನ್ಮಾನ ಪತ್ರ ವಾಚಿಸಿದರು. ಹಾಜಿ ಖಮರುದ್ದೀನ್ ಸನ್ಮಾನ ಪತ್ರವನ್ನು ಬಿಷಪ್‌ಗೆ ಹಸ್ತಾಂತರಿಸಿದರು. ರೆ. ಫಾ. ಡೆನ್ನಿಸ್ ಡೇಸಾ, ಬಿಷಪ್ ಅವರನ್ನು ಪರಿಚಯಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com