ಗುಜ್ಜಾಡಿಯಲ್ಲಿ ನಾಗರಿಕ ಪ್ರಜ್ಞಾ ಅಭಿಯಾನ, ಸ್ವಚ್ಛತಾ ಆಂದೋಲನ

ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ಗುಜ್ಜಾಡಿ ಎ ಮತ್ತು ಬಿ ಒಕ್ಕೂಟದ ಕಾರ್ಯಕ್ಷೇತ್ರದ ಸ್ವಸಹಾಯ ಸಂಘಗಳ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೃಹತ್ ಸ್ವಚ್ಛತಾ ಆಂದೋಲನ ಅಭಿಯಾನ ಹಾಗೂ ನಾಗರಿಕ ಪ್ರಜ್ಞಾ ಕಾರ್ಯಕ್ರಮ ಗುರುವಾರ ಸಂಜೆ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಜರಗಿತು.
     ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಜಾಗೃತಿ ವೇದಿಕೆಯ ತ್ರಾಸಿ ವಲಯ ಅಧ್ಯಕ್ಷ ಬಿ.ರಾಘವೇಂದ್ರ ಪೈ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಮ್ಮ ರಾಜ್ಯವನ್ನು ಸ್ವಚ್ಛ ರಾಜ್ಯವನ್ನಾಗಿ ಮಾಡಲು ಸ್ವಸಹಾಯ ಸಂಘದ ಸದಸ್ಯರು ಕೈಜೋಡಿಸಬೇಕು. ಪರಿಸರದ ನೈರ್ಮಲ್ಯ ಕಾಪಾಡುವುದರ ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮುತುವರ್ಜಿ ವಹಿಸಬೇಕು. ಪ್ಲಾಸ್ಟಿಕ್ ಮತ್ತಿತರ ಪರಿಸರಕ್ಕೆ ಹಾನಿಯಾಗುವ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವುದರ ಬಗ್ಗೆ ಮತ್ತಿ ಗುಟ್ಕಾ ಸಿಗರೇಟ್, ಬೀಡಿ ಮತ್ತಿತರ ಜೀವಕ್ಕೆ ಹಾನಿಯಾಗುವ ಪದಾರ್ಥಗಳ ಬಳಕೆಯನ್ನು ನಿಯಂತ್ರಿಸಬೇಕಿದೆ ಎಂದರು.
ಗುಜ್ಜಾಡಿ ಎ ಒಕ್ಕೂಟದ ಅಧ್ಯಕ್ಷೆ ನಾಗರತ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ನಾಯಕ್ ಶುಭಾಶಂಸನೆಗೈದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕಿ ಸುಶೀಲಾ ಮಾಹಿತಿ ನೀಡಿದರು. ಗುಜ್ಜಾಡಿ ಬಿ ಒಕ್ಕೂಟದ ಅಧ್ಯಕ್ಷೆ ರಾಧಿಕಾ ಮೇಸ್ತ ಉಪಸ್ಥಿತರಿದ್ದರು.
ಒಕ್ಕೂಟದ ಸೇವಾ ಪ್ರತಿನಿಧಿಗಳಾದ ನೀಲಾ ಸ್ವಾಗತಿಸಿ, ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯ ಮೇಲ್ವಿಚಾರಕ ವಿಜಯಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಮತಾ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com