ಕಟೀಲು 6ನೇ ಮೇಳ ಆರಂಭಕ್ಕೆ ನಿರ್ಧಾರ

ಕಟೀಲು: ರಾಜ್ಯದಲ್ಲೇ ಪ್ರಥಮ ಬಾರಿಗೆ 2013-14ನೇ ಸಾಲಿನಿಂದ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳದಲ್ಲಿ 6 ಮೇಳಗಳ ತಿರುಗಾಟ ಆರಂಭವಾಗಲಿದೆ.
       ಯಕ್ಷಗಾನ ಪ್ರಿಯೆ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಳದಲ್ಲಿ ಈಗಾಗಲೇ 5 ಯಕ್ಷಗಾನ ಮೇಳಗಳು ತಿರುಗಾಟ ನಡೆಸುತ್ತಿದ್ದು, ಭಕ್ತರ ಆಶಯದಂತೆ ಹಾಗೂ ಯಕ್ಷಗಾನದ ಹೆಚ್ಚಿನ ಬೇಡಿಕೆಯನ್ನು ಪರಿಶೀಲಿಸಿ 2013-14ನೇ ಸಾಲಿನಲ್ಲಿ ನೂತನವಾಗಿ 6ನೇ ಮೇಳವನ್ನು ದೇವಳಕ್ಕೆ ಯಾವುದೇ ರೀತಿಯ ಖರ್ಚು ಬಾರದ ರೀತಿಯಲ್ಲಿ ಆರಂಭಿಸಲು ಹಾಗೂ 2014ನೇ ಸಾಲಿನಿಂದ ದೇವಳದ ರಥಬೀದಿಯಲ್ಲಿ ಮೇ ತಿಂಗಳಿನಿಂದ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಕಾಲ ಮಿತಿಯ ಯಕ್ಷಗಾನ ಆರಂಭಿಸಲು ನಿರ್ಧರಿಸಲಾಗಿದೆ ಎಂದು ದೇವಳ ಆಡಳಿತಾಧಿಕಾರಿ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದರು.
ನ.7ರಂದು ತಿರುಗಾಟ ಆರಂಭ: ಕಟೀಲು ದೇವಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂದಾರ್ತಿಯಲ್ಲಿ 5 ಯಕ್ಷಗಾನ ಮೇಳಗಳಿದ್ದು, ಉಳಿದಂತೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಕಟೀಲು ದೇವಳದಲ್ಲಿ 2013-14ನೇ ಸಾಲಿನಿಂದ ನೂತನ 6ನೇ ಮೇಳ ಸೇರಿದಂತೆ ಎಲ್ಲ ಆರು ಮೇಳಗಳ ತಿರುಗಾಟ ಆರಂಭಗೊಳ್ಳಲಿದೆ ಎಂದು ಹೇಳಿದರು..
ಈ ಬಾರಿ ಅಷ್ಟ ಮಂಗಳ ಪ್ರಶ್ನೆಯಲ್ಲಿ ತಿಳಿದುಬಂದಂತೆ ಕಾರ್ತಿಕ ಮಾಸದಲ್ಲಿ 22 ದಿನಗಳ ಮೊದಲು (ನ.7ರಂದು) ತಿರುಗಾಟ ಆರಂಭಗೊಳ್ಳಲಿದೆ ಎಂದರು.
          22 ದಿನ ಮೊದಲು ತಿರುಗಾಟ ಆರಂಭಗೊಳ್ಳಲಿರುವುದರಿಂದ 110 ಹೆಚ್ಚು ಯಕ್ಷಗಾನ ಪ್ರದರ್ಶನ ಭಕ್ತರಿಗೆ ದೊರೆಯಲಿದೆ. ಅಲ್ಲದೆ, ಮೇ 26ರಿಂದ ಅಕ್ಟೋಬರ್ 4ರವರೆಗೆ ಒಂದು ಮೇಳದಿಂದ ಕಾಲಮಿತಿಯ ಯಕ್ಷಗಾನ ಸಂಜೆ 6ರಿಂದ ರಾತ್ರಿ 12ರವರೆಗೆ 6 ಗಂಟೆ ಅವಧಿಯಯಲ್ಲಿ ದೇವಳದ ರಥಬೀದಿಯಲ್ಲಿ ನಡೆಯಲಿದ್ದು, ಇದರಿಂದ 132 ಹೆಚ್ಚು ಯಕ್ಷಗಾನ ಪ್ರದರ್ಶನ ಸಿಗಲಿದೆ ಎಂದರು.
      6ನೇ ಮೇಳದ ತಿರುಗಾಟದಿಂದ ವರ್ಷಕ್ಕೆ 200 ಹೆಚ್ಚುವರಿ ಯಕ್ಷಗಾನ ಪ್ರದರ್ಶನ ಸಿಗಲಿದ್ದು, ಇದರಿಂದ 2014ರಿಂದ ಹೆಚ್ಚುವರಿಯಾಗಿ 442 ಯಕ್ಷಗಾನ ಪ್ರದರ್ಶನವಾಗಲಿದೆ ಎಂದು ಹೇಳಿದರು.

ಮುಂದಿನ 10 ವರ್ಷಕ್ಕೆ ಬುಕ್ಕಿಂಗ್ ಭರ್ತಿ: ಈಗಾಗಲೇ 8000ಕ್ಕೂ ಹೆಚ್ಚು ಯಕ್ಷಗಾನ ಬುಕ್ಕಿಂಗ್ ಆಗಿದ್ದು, ಪ್ರತಿವರ್ಷ 450 ಶಾಶ್ವತ ಯಕ್ಷಗಾನ ಪ್ರದರ್ಶನಗಳಿವೆ. ವರ್ಷಕ್ಕೆ ಒಂದು ಮೇಳಕ್ಕೆ ತಲಾ 200ರಂತೆ ಆರು ಮೇಳಗಳಿಂದ ಒಟ್ಟು 1200 ಹಾಗೂ ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಕಾಲಮಿತಿಯ 132 ಪ್ರದರ್ಶನ ಸೇರಿದಂತೆ ಒಟ್ಟು ವರ್ಷಕ್ಕೆ 1332 ಪ್ರದರ್ಶನ ಸಿಗಲಿದ್ದು, ಶಾಶ್ವತ ಯಕ್ಷಗಾನ ಬಿಟ್ಟು ವರ್ಷಕ್ಕೆ 882 ಭಕ್ತರಿಗೆ ಅವಕಾಶ ಲಭ್ಯವಿದೆ. ಮುಂದಿನ 10 ವರ್ಷಗಳವರೆಗೆ ಈಗಾಗಲೇ ಬುಕ್ಕಿಂಗ್ ಆಗಿದೆ ಎಂದು ತಿಳಿಸಿದರು.
      ಈಗಾಗಲೇ ಬುಕ್ಕಿಂಗ್ ನಡೆಸಿದವರಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟ ಭಕ್ತರಿಗೆ ವಿಶೇಷ ಆದ್ಯತೆಯಲ್ಲಿ ಪ್ರದರ್ಶನ ನೀಡುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದರು.

18 ಕಲಾವಿದರ ಸೇರ್ಪಡೆ: ಆರನೇ ಮೇಳಕ್ಕೆ ಈಗಾಗಲೇ 18 ಕಲಾವಿದರು ಸೇರ್ಪಡೆಗೊಂಡಿದ್ದು, ದೇವಳದ ಐದು ಮೇಳಗಳಿಗೆ ಬಸ್ ಹಾಗೂ ರಂಗಸ್ಥಳದ ವ್ಯವಸ್ಥೆಯನ್ನು ನೀಡಿರುವ ಶ್ರೀ ದುರ್ಗಾಪರಮೇಶ್ವರಿ ಯಕ್ಷ ಧರ್ಮ ಬೋಧಿನಿ ಟ್ರಸ್ಟ್ 6ನೇ ಮೇಳಕ್ಕೆ ಬಸ್ಸು ಹಾಗೂ ರಂಗಸ್ಥಳದ ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ. ಟ್ರಸ್ಟ್ ಮೂಲಕ ಮೇಳದ ಕಲಾವಿದರಿಗೆ ಮೇ ತಿಂಗಳಿನಿಂದ ನವಂಬರ್‌ವರೆಗೆ ಭತ್ಯೆ ನೀಡಲಾಗುತ್ತಿದ್ದು, ಈ ವರ್ಷ ಕಾಲಮಿತಿಯ ಯಕ್ಷಗಾನ ಪ್ರದರ್ಶನದಿಂದ ಒಂದು ಮೇಳಕ್ಕೆ ರೊಟೇಷನ್ ಪದ್ಧತಿಯಂತೆ ಕಲಾವಿದರ ಸೇವೆ ಪಡೆಯುವುದರಿಂದ ಎಲ್ಲ ಕಲಾವಿದರಿಗೆ ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಹೆಚ್ಚುವರಿ ಭತ್ಯೆ ದೊರೆಯಲಿದೆ ಎಂದು ದೇವಳದ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ತಿಳಿಸಿದರು.
ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ದೇವಿ ಕುಮಾರ ಆಸ್ರಣ್ಣ, ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಇದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com