ಶಿರದ ಮೇಲೆ ಬೆಳೆಯುತ್ತಿರುವ ಕೋಡಿನಿಂದ ಯಾತನೆ, ಶಸ್ತ್ರ ಚಿಕಿತ್ಸೆಗೆ ನೆರವು ಬೇಕಾಗಿದೆ

ಕುಂದಾಪುರ: ಗೋವುಗಳ ತಲೆಯಲ್ಲಿ ಕೋಡು ಮೂಡುವುದು ಸಹಜ. ಆದರೆ ಮನುಷ್ಯನ ತಲೆಯಲ್ಲಿ ಕೋಡು ಮೂಡುವುದು ಅಪರೂಪ. ಆಜ್ರಿ ಗ್ರಾಮದ ಬ್ಯಾಗಿಬೇರು ನಿವಾಸಿ ತೇಜ ಗೊಲ್ಲ(75) ಎಂಬರು ಇಂಥ ವಿಸ್ಮಯಕ್ಕೆ ಸಾಕ್ಷಿಯಾಗಿದ್ದಾರೆ. ಇವರ ತಲೆಯ ಮೇಲೆ ಎರಡು ಕೋಡು ಬೆಳೆಯುತ್ತಿದೆ. 

60 ಹರೆಯದಲ್ಲಿ ನಡುನೆತ್ತಿಯ ಮೇಲೊಂದು ಜಡ್ಡು ಬೆಳೆದಿತ್ತು. ಇದು ಮಾಮೂಲಿ ಎಂಬಂತೆ ಅವರು ಸುಮ್ಮಗೆ ಉಳಿದಿದ್ದರು. ಬರಬರುತ್ತಾ ಅದು ಬೆಳೆಯುತ್ತಲೆ ಹೋಯಿತು. ಪ್ರಸ್ತುತ ಎರಡು ಇಂಚು ಉದ್ದಕ್ಕೆ ಕೋಡಿನ ರೂಪದಲ್ಲಿ ಬೆಳೆದುನಿಂತಿದೆ. ಇದು ಜಾನುವಾರುಗಳ ಕೋಡಿಗ ಕೋಡಿನಂತೆ ಹೋಲುತ್ತಿದೆ. ಹೊರಚಿಪ್ಪು ಜಾನುವಾರು ಗೊರಸಿನಂತೆ ಇದೆ. ಇವರ ಶಿರದ ಮೇಲೆ ಕಳೆದ 15 ವರ್ಷಗಳಿಂದ ಕೋಡು ಬೆಳೆಯುತ್ತಿರುವುದು ಅನ್ಯರಿಗೆ ವಿಶೇಷ, ಇವರಿಗೆ ಯಮಯಾತನೆ. ಈ ತನಕ ಅವರು ಈ ಬಗ್ಗೆ ತಜ್ಞ ವೆದ್ಯರನ್ನು ಕಂಡಿಲ್ಲ. ಸ್ಥಳೀಯ ವೆದ್ಯರಲ್ಲಿ ಒಮ್ಮೆ ಪರೀಕ್ಷೆ ನಡೆಸಿದಾಗ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಒಳಿತು ಎಂದಿದ್ದರಂತೆ. 

ಕೋಡು ತಂದಿರುವ ಗೋಳು: ನಕ್ಸಲ್‌ಪೀಡಿತ ಕಮಲಶಿಲೆ ಸರಹದ್ದಿನ ಬ್ಯಾಗಿಬೇರಿನ ಅರಣ್ಯ ತಪ್ಪಲಿನಲ್ಲಿ ನೆಲೆಸಿರುವ ತೇಜಗೊಲ್ಲರದ್ದು ಬಡಕುಟುಂಬ. ಕಷಿಕೂಲಿಯೇ ಜೀವನಾಧಾರ. ಇಬ್ಬರು ಪುತ್ರರು ಹಾಗೂ 7 ಮಂದಿ ಹೆಣ್ಣುಮಕ್ಕಳ ತಂದೆಯಾಗಿರುವ ಇವರು ಕಷಿಕೂಲಿಯಿಂದಲೇ ಸಂಸಾರದ ನೊಗವನ್ನು ಮುನ್ನಡೆಸಿದವರು. ಕಳೆದ ಐದಾರು ವರ್ಷಗಳಿಂದ ನೆತ್ತಿಯ ಮೇಲೆ ಮೂಡಿರುವ ಕೋಡಿನಿಂದ ಅವರಿಗೆ ಕೆಲಸ ಕಾರ್ಯ ನಿರ್ವಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಅದು ಕೊಂಚ ಅಲುಗಿದರು ವಿಪರೀತ ನೋವು ತರಿಸುತ್ತಿದೆ. ಕೆಲವೊಮ್ಮೆ ಕೂರಲಾಗದ, ನಿದ್ರಿಸಲಾಗದ ಸಂದರ್ಭವು ಬರುತ್ತದೆ. ಕೆಲವು ದಿನಗಳ ಹಿಂದೆ ತೋಟದಲ್ಲಿ ಕೆಲಸ ನಿರ್ವಹಿಸುವಾಗ ಅಡಕೆ ಹಾಳೆ ಕೋಡಿಗೆ ತಾಗಿದ್ದರಿಂದ ವಿಪರೀತ ನೋವು ಕಾಣಿಸಿಕೊಂಡಿದೆ. ಈ ವಯಸ್ಸಿನಲ್ಲಿಯೂ ದುಡಿಯುವ ಸಾಮರ್ಥ್ಯ ಅವರಲ್ಲಿದ್ದರು ಕೋಡಿನ ಗೋಳು ಅಸಹನೀಯವಾಗಿದೆ. 

ನೆರವು ಕೋರಿಕೆ: ತಜ್ಞವೆದ್ಯರನ್ನು ಕಾಣಲು ಇವರಿಗೆ ಆರ್ಥಿಕತೆ ತೊಂದರೆ ಇದೆ. ಬಹಳ ಮುಖ್ಯವಾಗಿ ಅರಣ್ಯ ತಪ್ಪಲಿನಲ್ಲಿ ನೆಲೆಸಿರುವ ಇವರು ನಾಟಿವೆದ್ಯ ಪದ್ಧತಿಗೆ ಮೊರೆಹೋಗಿ ಸೋತುಹೋಗಿದ್ದಾರೆ. ಸಧಡ ಶರೀರದ ತೇಜಗೊಲ್ಲರಿಗೆ ಶಿರದ ಮೇಲಿನ ಕೋಡು ಯಾತನೆ ನೀಡುತ್ತಿದ್ದು ಸಹದಯರು ಸಹಕಾರ ನೀಡಿದ್ದಲ್ಲಿ ಚೇತರಿಸಿಕೊಳ್ಳಲು ಸಾಧ್ಯವಿದೆ. ಸಹಕಾರ ನೀಡಬಯಸುವವರು ಡಿಸಿಸಿ ಬ್ಯಾಂಕ್ ಸಿದ್ಧಾಪುರ ಶಾಖೆ ಖಾತೆ ನಂಬ್ರ 03025449 ಸಲ್ಲಿಸಬಹುದು. ಮನೆ ವಿಳಾಸ: ತೇಜ ಗೊಲ್ಲ, ಆಜ್ರಿಗ್ರಾಮ, ಬ್ಯಾಗಿಬೇರು, ಅಂಚೆ ಕಮಲಶಿಲೆ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ. 

*ಆರಂಭದಲ್ಲಿ ಸಂದರ್ಭ ಏನೂ ಅನ್ನಿಸಿರಲಿಲ್ಲ. ನನಗೀಗ ಪ್ರಾಯ 75. ಕಳೆದ ಹತ್ತು ವರ್ಷಗಳಲ್ಲಿ ಇದರಿಂದ ಯಾವ ತೊಂದರೆಯೂ ಇದ್ದಿರಲಿಲ್ಲ. ಐದಾರು ವರ್ಷಗಳಿಂದ ಸ್ವಲ್ಪ ತೊಂದರೆ ನೀಡುತ್ತಿದೆ. ಆಗೊಮ್ಮೆ ಈಗೊಮ್ಮೆ ತನ್ನಷ್ಟಕ್ಕೆ ತಲೆ ಸಿಡಿಯುವಂತಹ ನೋವು ಕಾಣಿಸಿಕೊಳ್ಳುತ್ತದೆ. ಮಲಗುವಾಗ ತಲೆದಿಂಬು ಅತ್ಯವಶ್ಯ. ನಿದ್ದೆಯ ಮಂಪರಿನಲ್ಲಿ ಕೆ ಅಥವಾ ಇನ್ನೇನಾದರೂ ತಾಗಿದರೆ ಜೀವ ಹೋಗುವಷ್ಟು ನೋವು ಬಂದು ಬಿಡುತ್ತಿದೆ. ಕಷಿ ಕೂಲಿ ಮಾಡಿ ಬದುಕಿದವನು. ನನಗೆ ಮಾಸಿಕ ವೃದ್ಧಾಪ್ಯವೇತನ ಬರುತ್ತಿದೆ. 9 ಮಂದಿ ಮಕ್ಕಳ ಪೈಕಿ ಹಿರಿಯ ಮಗಳಿಗೆ ಎರಡು ಕಣ್ಣಿನ ದೃಷ್ಟಿ ಇಲ್ಲ. ಜೀವನ ನಡೆಸುವುದೇ ಬಹಳ ಕಷ್ಟ -ತೇಜ ಗೊಲ್ಲ 

*ಇದನ್ನು ವೈದ್ಯಕೀಯ ಲೋಕದಲ್ಲಿ ಕ್ಯಾರಾಟ್ರೋಸಸ್ ಅಂಥ ಕರೆಯಲಾಗುತ್ತಿದೆ. ದೇಹದಲ್ಲಿ ಕಂಟ್ರೋಲರ್ ಸಿಸ್ಟಮ್ ಅಂತಾ ಇರುತ್ತೆ. ಕೆಲವು ಭಾಗದಲ್ಲಿ ಇದು ತಪ್ಪಿದಾಗ ಹೆಚ್ಚುವರಿ ಬೆಳವಣಿಗೆ ಕಂಡುಬರುತ್ತದೆ. ತಲೆ ಭಾಗದಲ್ಲಿ, ಬೆನ್ನಿನಲ್ಲಿ ಈ ರೀತಿಯ ಬೆಳವಣಿಗೆಗಳು ಕೆಲವೊಮ್ಮೆ ಆಗುತ್ತವೆ. ಗಾಬರಿ ಪಡುವಂತದ್ದೇನಿಲ್ಲ. ಇಂತಹ ಸಮಸ್ಯೆಗಳನ್ನು ಸೂಕ್ತ ಚಿಕಿತ್ಸೆಯ ಮೂಲಕ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ವಿಪರೀತ ಬೇನೆ ನೀಡುತ್ತಿದ್ದರೆ ಆ ಭಾಗದಲ್ಲಿ ಇನ್‌ಪೆಕ್ಷನ್ ಆಗಿದೆ ಎಂದರ್ಥ. ಹಾಗೆಯೇ ಬಿಡುವುದು ಸೂಕ್ತವಲ್ಲ - ಡಾ. ವಿವೇಕ್ ಮೂಳೆತಜ್ಞರು ಕುಂದಾಪುರ

ವರದಿ ಕೃಪೆ: ಜಾನ್‌ಡಿಸೋಜ, ವಿಕ

******************
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com