ಆನಗಳ್ಳಿ ಸೇತುವೆಯಲ್ಲಿ ಸಿಲುಕಿದ ಲೂಸ್ ಮಾದ ಯೋಗೀಶ್ ಕಾರು

ಕುಂದಾಪುರ: ಇದು ಯಾವುದೇ ಸಿನಿಮಾ ಕಥೆಯಲ್ಲ. ಚಿತ್ರೀಕಣವೂ ಅಲ್ಲ...ಸ್ಯಾಂಡಲ್‌ವುಡ್ ನಟ ಲೂಸ್ ಮಾದ ಖ್ಯಾತಿಯ ಯೋಗಿ ರಿಯಲ್ ಲೈಫ್‌ನಲ್ಲಿ ಅನುಭವಿಸಿದ ಘಟನೆ. ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕುಂದಾಪುರದಲ್ಲಿರುವ ಆತ್ಮೀಯರೊಬ್ಬರ ಮನೆಗೆ ಭೇಟಿ ನೀಡಿ ವಾಪಸಾಗುತ್ತಿದ್ದ ಸಂದರ್ಭ ನಡೆದ ಘಟನೆ. ಕುಂದಾಪುರದ ಅಗಲ ಕಿರಿದಾದ ಆನಗಳ್ಳಿ ಸೇತುವೆಯಲ್ಲಿ ಅವರು ಪ್ರಯಾಣಿಸುತ್ತಿದ್ದ ಫಾರ್ಚ್ಯೂನ್ ಕಾರು ಪ್ರವೇಶಿಸಲಾಗದೆ ತಿಣುಕಾಡಿದರು. 

ನಡೆದಿದ್ದೇನು?: ಕುಟುಂಬಿಕರೊಂದಿಗೆ ಧರ್ಮಸ್ಥಳ ಯಾತ್ರೆ ಮುಗಿಸಿ ಕುಟುಂಬದ ಆತ್ಮೀಯ ರಾದ ಕುಂದಾಪುರ ಸಮೀಪದ ಆನಗಳ್ಳಿಯ ಅರ್ಚಕ ಚೆನ್ನಕೇಶವ ಭಟ್ಟ ಅವರ ಮನೆಗೆ ಆಗಮಿಸಿದ್ದರು. ಬಸ್ರೂರು ಮಾರ್ಗವಾಗಿ ಆಗಮಿಸಿದ್ದ ಅವರು ಅರ್ಚಕರ ಮನೆಯಲ್ಲಿ ಕುಶಲೋಪರಿ ನಡೆಸಿ ನಂತರ ಅದೇ ಮಾರ್ಗದಲ್ಲಿ ಆನಗಳ್ಳಿ ಸೇತುವೆಯ ಮೂಲಕ ಕುಂದಾಪುರ ಪ್ರವೇಶಿಸಿ ಬೆಂಗಳೂರಿಗೆ ತೆರಳಲು ಯೋಚಿಸಿದ್ದರು. 

ತಮ್ಮ ಫಾರ್ಚ್ಯೂನ್ ಕಾರನ್ನು ಅಗಲ ಕಿರಿದಾದ ಸೇತುವೆಯಲ್ಲಿ ನುಗ್ಗಿಸಲು ಸಫಲರಾದರೂ ಮುಂದೆ ಸಾಗುತ್ತಿದ್ದಂತೆ ಕಾರಿನ ಮಿರರ್ ಮತ್ತು ಬಾಡಿ ಸೇತುವೆಗೆ ತಾಗುವ ಲಕ್ಷಣ ತೋರಿಬಂದುದರಿಂದ ಹಿಂದಕ್ಕೆ ಸರಿದರು. ಇದರಿಂದ ಕೆಲ ಹೊತ್ತು ಸಂಚಾರ ವ್ಯತ್ಯಯ ಉಂಟಾಯಿತು. ಬಳಿಕ ಸಾವಕಾಶವಾಗಿ ತಮ್ಮ ಕಾರನ್ನು ಹಿಂದಕ್ಕೆ ಚಲಾಯಿಸಿದ ಅವರು ಬಳಿಕ ಬಸ್ರೂರಿಗೆ ತಲುಪಿ ಅಲ್ಲಿಂದ ರಾಜ್ಯ ಹೆದ್ದಾರಿಯ ಮೂಲಕ ಕುಂದಾಪುರಕ್ಕೆ ಆಗಮಿಸಿ ಬೆಂಗಳೂರಿಗೆ ಸಾಗಿದರು. 

ಈ ಸಂದರ್ಭ ವಿಜಯ ಕರ್ನಾಟಕದೊಂದಿಗೆ ಯೋಗಿ ಮಾತನಾಡಿ, ಖಾಸಗಿ ಭೇಟಿ ನಿಮಿತ್ತ ಆನಗಳ್ಳಿಗೆ ತಾಯಿ ಮತ್ತು ಕುಟುಂಬ ಸದಸ್ಯರೊಂದಿಗೆ ಆಗಮಿಸಿದ್ದೆ. ಇಲ್ಲಿನ ಚೆನ್ನಕೇಶವ ಭಟ್ಟರು ಕುಟುಂಬದ ಆತ್ಮೀಯರು. ಈ ಭಾಗಕ್ಕೆ ಬಂದಾಗಲೆಲ್ಲ ಅವರ ಮನೆಗೆ ಭೇಟಿ ನೀಡುವ ಸಂಪ್ರದಾಯ ಇಟ್ಟುಕೊಂಡಿದ್ದೇವೆ. ಧರ್ಮಸ್ಥಳಕ್ಕೆ ಬಂದಿದ್ದೆವು. ಅಲ್ಲಿ ದರ್ಶನ ಮುಗಿಸಿ ಇಲ್ಲಿಗೆ ಬಂದೆವು. ಇಲ್ಲಿನ ಸೇತುವೆ ಕಿರಿದಾಗಿರುವುದರಿಂದ ಅಪಾಯ ಬೇಡ ಅಂತ ಹಿಂದಕ್ಕೆ ತೆಗೆದುಕೊಂಡು ಬಸ್ರೂರು ಮಾರ್ಗವಾಗಿ ಹೋಗಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು. 

ಸಿನಿಮಾ ಕೆರಿಯರ್, ಬಿಗ್‌ಬಾಸ್ ವಿಚಾರವಾಗಿ ಪ್ರಶ್ನಿಸಿದಾಗ ಉತ್ತರಿಸದ ಯೋಗಿ, ನಗು ಮೊಗದಿಂದಲೇ ಥ್ಯಾಂಕ್ಸ್ ಅಂತಾ ಹೇಳಿ...ಮತ್ತೆ ಸಿಗ್ತೀನಿ ಅಂತಾ ಹೊರಟು ಬಿಟ್ಟರು. 

ಆನಗಳ್ಳಿ ಸೇತುವೆಯ ದುರ್ದೆಶೆ: ಕುಂದಾಪುರಕ್ಕೆ ಅತ್ಯಂತ ನಿಕಟವಾಗಿರುವ ಆನಗಳ್ಳಿ ಸೇತುವೆ ಅತ್ಯಂತ ದುರ್ಬಲವಾಗಿದೆ. ಕಾರು ಸಹ ಪ್ರವೇಶಿಸಿದ ಸ್ಥಿತಿ ನಿರ್ಮಾಣವಾಗಿದೆ. ಸೇತುವೆ ಆಗುತ್ತದೆ ಅಂತ ಭರವಸೆ ಮಾತ್ರ ಸಿಗುತ್ತಿದೆಯೇ ಹೊರತು ಸೇತುವೆ ಮಾತ್ರ ಆಗುತ್ತಿಲ್ಲ ಎಂದು ಸ್ಥಳದಲ್ಲಿದ್ದ ನಾಗರಿಕರು ದೂರಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com