ಹೋದ ಆರ್ಡಿ ಗ್ರಾಮದಲ್ಲಿ ಅಬ್ಬರಿಸಿದ ಸುಂಟರಗಾಳಿ

ಸಿದ್ಧಾಪುರ: ಕುಂದಾಪುರ ತಾಲೂಕಿನ ಬೆಳ್ವೆ ಗ್ರಾ.ಪಂ. ವ್ಯಾಪ್ತಿಯ ಆರ್ಡಿಯಲ್ಲಿ ಗುರುವಾರ ಮುಂಜಾನೆ 3.30ಕ್ಕೆ ಬೀಸಿದ ಭಾರಿ ಸುಂಟರ ಗಾಳಿಗೆ ಪರಿಸರದ 100ಕ್ಕೂ ಹೆಚ್ಚು ಮನೆಗಳು ಹಾಗೂ ಅಂಗಡಿ ಮುಂಟ್ಟುಗಳ ಹೆಂಚು, ಸೀಟುಗಳು ಸಂಪೂರ್ಣ ಹಾರಿ ಹೋಗಿದೆ. 

ಭಾರಿ ಗಾತ್ರದ ಮರಗಳು ಬುಡ ಸಮೇತ ನೆಲಕ್ಕುರುಳಿವೆ. ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಯಲ್ಲಿ ಮೈಲುಗಟ್ಟಲೆ ಮರಗಳು ರಾಜ್ಯ ಹೆದ್ದಾರಿ ಮೇಲೆ ಬಿದ್ದು ರಸ್ತೆ ಸಂಪರ್ಕ ಅಸ್ತವ್ಯಸ್ತಗೊಂಡಿದ್ದು ನಾಗರಿಕರು ತತ್ತರಿಸಿ ಹೋಗಿದ್ದಾರೆ. 

ಆರ್ಡಿ ಪರಿಸರದ ಕಾಸಗೋಡ್‌ಮಕ್ಕಿ, ಚಿತ್ತೇರಿ ಕ್ರಾಸ್, ಮಾಬ್ಳಿ, ಕೊಂಜಾಡಿ, ಗಂಟುಬೀಳು, ಕಾಟ್ಕೇರಿ, ಬರೆಗದ್ದೆ, ತೊನ್ನಾಸೆ, ಮರೂರು ಭಾಗಗಳಲ್ಲಿ ಬೀಸಿದ ಸುಂಟರ ಗಾಳಿಗೆ ಕಾಸಗೋಡಮಕ್ಕಿ ಬೆಳ್ಳ ನಾಯ್ಕ, ಚಿತ್ತೇರಿ ಕ್ರಾಸ್ ಲಕ್ಷ್ಮಣ ನಾಯ್ಕ, ಮುತ್ತು ಶೆಡ್ತಿಯವರ ಮನೆ, ಆರ್ಡಿ ಎಸ್.ವಿ. ಶೆಟ್ಟಿ ಸ್ಕೂಲ್‌ನ ಮೇಲ್ಮಾಡು, ವಿಠಲ ಶೆಟ್ಟಿ ಅಂಗಡಿ ಮುಂಭಾಗದ ಶೀಟುಗಳು ಕಿತ್ತುಕೊಂಡು ಹೋಗಿದೆ. 

ಪರಿಸರದ ಕಟ್ಟಡಗಳು, ವಿಶ್ವನಾಥ ಆಚಾರ್ಯರ ಮನೆ ಹಾಗೂ ಅಂಗಡಿ, ಮಂಜಯ್ಯ ಹೆಗ್ಡೆ ಅಂಗಡಿ ಕಟ್ಟಡ, ವಿಜಯಾ ಬ್ಯಾಂಕಿನ ಕಟ್ಟಡ, ಗೋಪಾಲ ಪ್ರಭು ಮನೆ, ದುರ್ಗಾ ಕ್ಯಾಶೂ ಇಂಡಸ್ಟ್ರೀಸ್‌ನ ಮೂರು ಶೆಡ್ಡುಗಳ ಮೇಲ್ಮಾಡಿನ ಶೀಟುಗಳು ಸಂಪೂರ್ಣ ಹಾನಿಗೊಂಡು ಸಂಸ್ಕರಿಸಿದ ಗೇರು ಬೀಜ ಮಳೆ ನೀರಿಗೆ ಹಾನಿಯಾಗಿವೆ. ಆರ್ಡಿ ಡಾ.ಪರಮೇಶ್ವರ ಉಡುಪ ಅವರಿಗೆ ಸೇರಿದ ಖಾಸಗಿ ಚಿಕಿತ್ಸಾಲಯದ ಕಟ್ಟಡ ಸಂಪೂರ್ಣ ಹಾನಿಗೊಂಡಿದೆ. 

ಕುಶಲ ಶೆಟ್ಟಿ ಕಟ್ಟಡ, ಕುಂದಾಪುರ ತಾ.ಪಂ. ಅಧ್ಯಕ್ಷೆ ದೀಪಿಕಾ ಎಸ್. ಶೆಟ್ಟಿಯವರ ಅವರ ವಾಸದ ಮನೆ, ದನದ ಕೊಟ್ಟಿಗೆ, ದೇವರಗುಡಿ, ನಾಲ್ಕು ನೂರಕ್ಕೂ ಮಿಕ್ಕಿದ ರಬ್ಬರ್ ಮರಗಳು, ಆರ್ಡಿ ಮೇಲ್ಮನೆ ರತಿ ಶೆಡ್ತಿಯವರ ವಾಸದ ಮನೆ ಹಾಗೂ ದನದ ಹಟ್ಟಿ, ಸೋಲಾರ್, ಭೋಜು ಶೆಟ್ಟಿ ಯವರ ದನದ ಕೊಟ್ಟಿಗೆ, ಕೊಂಜಾಡಿ ರೈಸ್ ಮಿಲ್ಲು ಬಳಿಯಲ್ಲಿ ನರಸಿಂಹ ನಾಯ್ಕರ ದನದ ಕೊಟ್ಟಿಗೆ, ರಾಮ ನಾಯ್ಕರ ಮನೆ, ಪರಿಶಿಷ್ಟ ಪಂಗಡದ ನಿವಾಸಿಗಳಾದ ಬುರುಡಿ, ರುದ್ರ, ಐತ, ಸಿದ್ದು, ಚಂದ್ರ, ಕೊಂಜಾಡಿ ತೆಂಕಬೈಲು, ಪ್ರಭಾಕರ ಶೆಟ್ಟಿ, ಅರುಣ ಶೆಟ್ಟಿ, ತೊನ್ನಾಸೆ ಕೃಷ್ಣಮೂರ್ತಿ, ಗುಂಡು ನಾಯ್ಕ, ದೊಳ್ಳಣ್ಣ, ಚಂದ್ರಣ್ಣ, ಮುಳುಕು ನಾಯ್ಕ, ಮಹಾಬಲ ಶೆಟ್ಟಿ, ಕಾವೇರಿ ಶೆಡ್ತಿ, ಹಡಿಗರಡಿ ವೆಂಕಟರಮಣ ಭಟ್ ಅವರ ಮನೆ ಹಾಗೂ ತೋಟಗಳು ಸಂಪೂರ್ಣ ಹಾನಿಗೊಂಡಿವೆ. 

ತೆರವು ಕಾರ್ಯಾಚರಣೆ: ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಯಲ್ಲಿ ಮೈಲುಗಟ್ಟಲೆ ಮರಗಳು ರಾಜ್ಯ ಹೆದ್ದಾರಿ ಮೇಲೆ ಬಿದ್ದು ರಸ್ತೆ ಸಂಪರ್ಕ ಅಸ್ತವ್ಯಸ್ತಗೊಂಡು ಜನ ಜೀವನ ಸಂಪೂರ್ಣ ಅಸ್ಥವ್ಯಸ್ಥಗೊಂಡಿದ್ದು ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. 

ಸ್ಥಳೀಯ ಅಭಿಮಾನಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಬಿ. ಸಂತೋಷ ಕುಮಾರ್ ಶೆಟ್ಟಿ ಘಟನೆ ಕುರಿತು ಸಂಬಂಧಿಸಿದ ವಿದ್ಯುತ್ ಪ್ರಸರಣ ನಿಗಮ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮುಂಜಾಗ್ರತೆ ಕ್ರಮಕ್ಕಾಗಿ ಮಾಹಿತಿ ನೀಡಿ ಬೆಳಗಿನ ಜಾವ 4 ಗಂಟೆಗೆ ಸ್ಥಳೀಯರು ಹಾಗೂ ಯುವಕರು, ಅರಣ್ಯ ಇಲಾಖೆ ಹೆಬ್ರಿ ವಲಯ ಅಲ್ಬಾಡಿ ಘಟಕದ ಉಪ ವಲಯಾರಣ್ಯಾಧಿಕಾರಿ ನಾರಾಯಣ ನಾಯ್ಕ ಘಟನಾ ಸ್ಳಳಕ್ಕೆ ಭೇಟಿ ನೀಡಿ ಹೆಬ್ರಿ ವಲಯಾರಣ್ಯಾಧಿಕಾರಿ ಸತೀಶ್ ಎನ್ ನೇತೃತ್ವದಲ್ಲಿ ಸ್ಥಳೀಯರ ಸಹಕಾರದಲ್ಲಿ ಹೆದ್ದಾರಿಯುದ್ದ ಬಿದ್ದ ಭಾರಿ ಗಾತ್ರದ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡರು. 

ಕುಂದಾಪುರ ತಾ.ಪಂ. ಅಧ್ಯಕ್ಷೆ ದೀಪಿಕಾ ಎಸ್ ಶೆಟ್ಟಿ, ಬೆಳ್ವೆ ಗ್ರಾ.ಪಂ. ಸದಸ್ಯ ಸುರೇಶ ಶೆಟ್ಟಿ ಆರ್ಡಿ, ವಿಜಯ ಕುಮಾರ್ ಶೆಟ್ಟಿ ಗೋಳಿಯಂಗಡಿ, ಹೆಬ್ರಿ ವಲಯ ವನಪಾಲಕ ಎಸ್.ಎನ್. ಸುಬ್ರಹ್ಮಣ್ಯ, ವನ್ಯ ಜೀವಿ ವಿಭಾಗದ ವಲಯಾರಣ್ಯಾಧಿಕಾರಿ ಶರತ್ ಕುಮಾರ್, ಅಲ್ಬಾಡಿ ಘಟಕದ ಅರಣ್ಯ ರಕ್ಷಕ ರಮೇಶ, ಮಡಾಮಕ್ಕಿ-ಶೇಡಿಮನೆ ಘಟಕದ ಅರಣ್ಯ ರಕ್ಷಕ ರಾವೋತ್ ಬೀರದಾರ, ಅರಣ್ಯ ವಿಕ್ಷಕ ಸಂಖ ಆರ್ಡಿ, ಹಾಗೂ ಸ್ಥಳೀಯ ಯುವಕರು ಬೆಳಗಿನ ಜಾವ 4 ಗಂಟೆಗೆ ಘಟನಾ ಸ್ಥಳಕ್ಕೆ ಧಾವಿಸಿ ರಸ್ತೆ ತೆರವು ಕಾರ್ಯದಲ್ಲಿ ಸಹಕರಿಸಿದರು. 

ಕೆ.ಇ.ಬಿ ಇಲಾಖೆ ಅಧಿಕಾರಿಗಳು ಘಟನೆ ಸಂಭವಿಸಿದ ಕೊಡಲೇ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಮುಂಜಾಗ್ರತೆ ಕ್ರಮ ಕೈಗೊಂಡಿದ್ದಾರೆ. ಮೆಸ್ಕಾಂ ಕುಂದಾಪುರ ವಿಭಾಗದ ಸಹಾಯಕ ಎಂಜಿನಿಯರ್ ರಾಕೇಶ್ ಹಾಗೂ ಹಾಲಾಡಿ ವಲಯದ ಜುನೀಯರ್ ಎಂಜಿನಿಯರ್ ಬಿ. ಮಂಜುನಾಥ ಶ್ಯಾನುಭೋಗ ನೇತೃತ್ವದಲ್ಲಿ ಸಿಬ್ಬಂದಿ ವಿದ್ಯುತ್ ಮರು ಸಂಪರ್ಕಕ್ಕಾಗಿ ಶ್ರಮಿಸುತ್ತಿದ್ದಾರೆ. 

ಕುಂದಾಪುರ ಅಗ್ನಿಶಾಮಕ ದಳದ ವಾಹನ ಘಟನಾ ಸ್ಥಳಕ್ಕೆ ಬೆಳಗ್ಗೆ 6 ಗಂಟೆಗೆ ಆಗಮಿಸಿ. ಭರತ್ ಕುಮಾರ್ ನೇತೃತ್ವದಲ್ಲಿ ಮುಂಜಾಗ್ರತೆ ಹಾಗೂ ತೆರವು ಕಾರ್ಯದಲ್ಲಿ ಸಹಕರಿಸಿದ್ದಾರೆ. 

ಸ್ಥಳಕ್ಕೆ ಆಡಳಿತದ ದಂಡು: ಕುಂದಾಪುರ ಉಪ ವಿಭಾಗಾಧಿಕಾರಿ ಯೋಗೀಶ್ವರ ಎಸ್., ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ. ಉಡುಪಿ ಜಿ.ಪಂ. ಕಾರ್ಯನಿರ್ವಹಣಾಕಾರಿ ಪ್ರಭಾಕರ ಶರ್ಮಾ, ಕುಂದಾಪುರ ಡಿವೈಎಸ್‌ಪಿ ಯಶೋದ ಎಸ್ ಒಂಟಗೋಡಿ. ತಹಸೀಲ್ದಾರ್ ಗಾಯತ್ರಿ ಎನ್. ನಾಯಕ್, ಕುಂದಾಪುರ ತಾ.ಪಂ. ಅಧ್ಯಕ್ಷೆ ದೀಪಿಕಾ ಎಸ್. ಶೆಟ್ಟಿ, ಕುಂದಾಪುರ ವೃತ್ತ ನಿರೀಕ್ಷಕ ಮಂಜುನಾಥ ಕವರಿ, ತಾ.ಪಂ. ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಗೋಪಾಲ ಶೆಟ್ಟಿ, ಬೆಳ್ವೆ ಗ್ರಾ. ಪಂ. ಅಧ್ಯಕ್ಷ ಶಿವರಾಮ ಪೂಜಾರಿ ಅಲ್ಬಾಡಿ, ಮಡಾಮಕ್ಕಿ ಗ್ರಾ.ಪಂ. ಅಧ್ಯಕ್ಷೆ ಸುಶೀಲಾ, ಕರುಣಾಕರ ಶೆಟ್ಟಿ ಗೋಳಿಯಂಗಡಿ, ಶಂಕರನಾರಾಯಣ ಠಾಣಾಧಿಕಾರಿ ದೇಜಪ್ಪ, ಅಮಾಸೆಬೈಲು ಠಾಣಾಧಿಕಾರಿ ನಾಸ್ಹೀರ್ ಹುಸೇನ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. 

ಗಂಜಿಕೇಂದ್ರ ಆರಂಭ: ತೊಂದರೆಗೊಳಗಾದ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಆರ್ಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಅಧಿಕಾರಿಗಳ ತಂಡ ಗ್ರಾಮ ವಾಸ್ತವ್ಯ ಮಾಡಿದೆ. ಹಾನಿಯ ಕುರಿತು ಮಾಹಿತಿ ಸಂಗ್ರಹಿಸಿದೆ. ತುರ್ತು ಕ್ರಮವಾಗಿ ಗಂಜಿ ಕೇಂದ್ರವನ್ನು ತೆರೆದಿದೆ. ನಾಳೆಯಿಂದ ಆರ್ಡಿ ಆಶ್ರಮ ಶಾಲೆಯ ಕಟ್ಟಡದಲ್ಲಿ ಗಂಜಿ ಕೇಂದ್ರವನ್ನು ತೆರೆಯಲಿದೆ. ಹಾನಿಗೊಳಗಾದ ಮನೆಗಳಿಗೆ ಹೆಂಚುಗಳನ್ನು ಹಾಗೂ ತುರ್ತು ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳ ತಂಡ ತಿಳಿಸಿದೆ. 

ಸಚಿವ ಸೊರಕೆ ಭೇಟಿ: ಗುರುವಾರ ಸಂಜೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ ಸೊರಕೆ ಕೋಡಿ ಗ್ರಾಮದ ಸುಂಟರಗಾಳಿ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಹಾನಿ ಪರಿಶೀಲಿಸಿದರು. 

ಸುಂಟರಗಾಳಿಯಿಂದ ಮನೆ ಕಳೆದುಕೊಂಡವರ ಮನೆಗೆ ಭೇಟಿ ನೀಡಿದ ಅವರು ತುರ್ತು ಪರಿಹಾರವಾಗಿ ಒಟ್ಟು 77 ಸಾವಿರ ರೂ. ವಿತರಿಸಿದರು. ಇದೇ ಸಂದರ್ಭದಲ್ಲಿ ಸಂತ್ರಸ್ತರ ಮನೆಗಳ ಪಕ್ಕದಲ್ಲಿರುವ ನದಿದಂಡೆಗೆ ರಿವಿಟ್‌ಮೆಂಟ್ ಕಾಮಗಾರಿ ಮುಂದುವರಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com