ಸರಕಾರದ ವಿವಿಧ ಸವಲತ್ತುಗಳ ವಿತರಣೆ

ಕುಂದಾಪುರ: ಉಡುಪಿ, ಶಿವಮೊಗ್ಗ, ದ.ಕ., ಉ.ಕ. ಜಿಲ್ಲೆಗಳಲ್ಲಿ ವಿಪರೀತ ಮಳೆಯಿಂದ ಅಡಿಕೆಗೆ ಕೊಳೆ ರೋಗ ಬಂದಿದ್ದು, ಇದರಿಂದ ಹಾನಿ ಅನುಭವಿಸಿರುವ ರೈತರಿಗೆ ರೂ. 25 ಕೋಟಿ ಪರಿಹಾರ ನೀಡಲು ಸರಕಾರ ನಿರ್ಧರಿಸಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್‌ ಸೊರಕೆ ಹೇಳಿದರು.

ಅವರು ಉಡುಪಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್‌ ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ  ಕುಂದಾಪುರದ ಆರ್‌.ಎನ್‌. ಶೆಟ್ಟಿ ಸಭಾಂಗಣದಲ್ಲಿ ಜರಗಿದ ಸರಕಾರದ ವಿವಿಧ ಸವಲತ್ತುಗಳ ವಿತರಣಾ ಸಮಾರಂಭದಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಮಾತನಾಡಿದರು.

ಈ ಭಾರಿಯ ಭಾರಿ ಮಳೆಯಿಂದ ಅಡಿಕೆಬೆಳೆಗಾರರು ನಷ್ಟ ಅನುಭವಿಸಿದ್ದು, ಶೇ. 50ಕ್ಕಿಂತ ಹೆಚ್ಚು ಆದ ಬೆಳೆ ಹಾನಿಗೆ ಆದ್ಯತಾನುಸಾರ ಪರಿಹಾರ ನೀಡಲು ರಾಜ್ಯ ಸರಕಾರದ ಸಚಿವಾಲಯದ ಉಪ ಸಮಿತಿ ಈ ತೀರ್ಮಾನ ತೆಗೆದುಕೊಂಡಿದೆ. ವಿವಿಧ ಇಲಾಖೆಗಳಿಂದ ದೊರಕುವ ಸವಲತ್ತುಗಳನ್ನು ಒಂದೇ ಸೂರಿನಡಿ ಒಂದೇ ದಿನದಲ್ಲಿ ನೀಡುವ ವಿನೂತನ ಕಾರ್ಯಕ್ರಮ ಇದಾಗಿದ್ದು, ಜನರು ಇಲಾಖಾ ಕಚೇರಿಗಳಿಗೆ ಅಲೆದಾಡುವ ಕೆಲಸ ಇದರಿಂದ ಕಡಿಮೆಯಾಗಲಿದೆ. ಈ ಸಮಾರಂಭದಲ್ಲಿ ಸುಮಾರು 2,698 ಮಂದಿ ಫಲಾನುಭವಿಗಳಿಗೆ ಒಟ್ಟು 5.56 ಕೋಟಿ ರೂ. ಮೌಲ್ಯದ ಸವಲತ್ತು ವಿತರಿಸಲಾಗುತ್ತಿದೆ ಎಂದರು.

ಆಡಳಿತ ವ್ಯವಸ್ಥೆ ಜನರಿಂದ ದೂರವಾಗಬಾರದು ಗ್ರಾ.ಪಂ. ಮಟ್ಟದಲ್ಲಿ ಜನರ ಸಮಸ್ಯೆ ಇತ್ಯರ್ಥಗೊಳಿಸುವಲ್ಲಿ ಅಧಿಕಾರಿಗಳು ಶ್ರಮವಹಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜನಸ್ಪಂದನ ಮೊದಲಾದ ಕಾರ್ಯಕ್ರಮಗಳ ಮೂಲಕ ಜನರ ಬಳಿಗೆ ಹೋದಾಗ ಜನರ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.

ಸರಕಾರದ ಅನ್ನಬಾಗ್ಯ, ಕ್ಷೀರಭಾಗ್ಯ ಸರಕಾರದ ವಿನೂತನ ಕಾರ್ಯಕ್ರಮಗಳಾಗಿದ್ದು, ಮುಂದೆ ಮನೆ ನಿವೇಶನಕ್ಕೆ ಅರ್ಜಿ ಹಾಕಿರುವವರು ಹಾಗೂ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ಹಕ್ಕುಪತ್ರ ನೀಡುವ ಕಾರ್ಯಕ್ಕೆ ಸರಕಾರ ಮುಂದಾಗಲಿದೆ. ಮನೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸದವರಿಗೆ ಆದ್ಯತಾನುಸಾರ ಮನೆ ನಿವೇಶನ ನೀಡಲಾಗುತ್ತಿದೆ. ಈ ಹಿಂದೆ ಈ ಬಗ್ಗೆ 75 ಸಾವಿರ ರೂ. ಸಬ್ಸಿಡಿ ನೀಡಲಾಗುತ್ತಿದ್ದು, ಅದನ್ನು ಈ ಬಾರಿ 1.20 ಲ. ರೂ.ಗೆ ಏರಿಸಲಾಗಿದೆ ಎಂದರು.

ಮಾಶಾಸನ ಅದಾಲತ್‌

ಮಾಸಾಶನ ಅದಾಲತ್‌ನ್ನು ಪ್ರತಿ ತಾಲೂಕಿನಲ್ಲಿ ಕಡ್ಡಾಯವಾಗಿ ನಡೆಸುವಂತೆ ಸರಕಾರ ಆದೇಶಿಸಿದ್ದು, ಜಿಲ್ಲೆಯ ಮೂರು ತಾಲೂಕು ಕೇಂದ್ರದಲ್ಲಿ ಈ ಮಾಸಾಶನ ಆದಾಲತ್‌ಗೆ ಚಾಲನೆ ನೀಡಲಾಗಿದೆ. ಅಲ್ಲದೇ ಕುಂದಾಪುರದಲ್ಲಿ ಕಳೆದ ಬಾರಿ ನಡೆಸಲಾದ ಅದಾಲತ್‌ನಲ್ಲಿ 490 ಮಂದಿ ಫಲಾನುಭವಿಗಳಿಗೆ ಮಾಶಾಸನ ಮಂಜೂರು ಮಾಡಲಾಗಿದೆ ಎಂದರು.

ಅಧಿಕಾರಿಗಳು ಜನರು ಮತ್ತು ಜನಪ್ರತಿನಿಧಿಗಳ ನಡುವೆ ಸೇತುವೆ ರೂಪದಲ್ಲಿ ಕೆಲಸ ನಿರ್ವಹಿಸಬೇಕಾಗಿದೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚುರುಕು ಮುಟ್ಟಿಸಲು ಸಾಧ್ಯ. ರಾಜ್ಯದಲ್ಲಿ ಒಂದು ರೀತಿಯ ಬದಲಾವಣೆ ಬಂದಿದೆ. ನೂತನ ಸರಕಾರ ಆಡಳಿತಕ್ಕೆ ಚುರುಕು ಮುಟ್ಟಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡಲು ಬದ್ಧರಾಗಿದ್ದೇವೆ ಎಂದರು.

ಸಿ.ಆರ್‌.ಝಡ್‌. ನಿಯಮಾವಳಿಯಲ್ಲಿ ಸಡಿಲಿಕೆ:

ಕರಾವಳಿ ತೀರ ಪ್ರದೇಶದಲ್ಲಿ ಸಿ.ಆರ್‌.ಝಡ್‌. ಸಮಸ್ಯೆಯಿಂದ ಅನೇಕ ತೊಂದರೆ ಉಂಟಾಗಿರುವುದನ್ನು ಗಮನಿಸಿದ ಸರಕಾರ ಈ ಯೋಜನೆ ನಿಯಮಾವಳಿಯಲ್ಲಿ ಸಡಿಲಗೊಳಿಸಿದ್ದು, ಇದರಿಂದ ಈ ಪ್ರದೇಶದ ಜನರಿಗೆ ಅನುಕೂಲವಾಗಲಿದೆ. ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ದಾರರ ಸಮಸ್ಯೆ ನಿವಾರಣೆಗೆ ಆರ್ಜಿಗಳನ್ನು ಸರಳಗೊಳಿಸುವ ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲದೇ ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಮಮತಾ ಆರ್‌. ಶೆಟ್ಟಿ, ಕುಂದಾಪುರ ತಾ.ಪಂ. ಸದಸ್ಯೆ ದೀಪಿಕಾ ಎಸ್‌. ಶೆಟ್ಟಿ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್‌, ಜಿ.ಪಂ. ಸದಸ್ಯರಾದ ಅನಂತ ಮೊವಾಡಿ, ಗೌರಿ ದೇವಾಡಿಗ, ಜಿಲ್ಲಾಧಿಕಾರಿ ಡಾ| ಎ.ಟಿ. ರೇಜು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕುಂದಾಪುರ ತಹಶೀಲ್ದಾರ್‌ ಗಾಯತ್ರಿ ನಾಯಕ್‌ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸೀತಾರಾಮ ಶೆಟ್ಟಿ ಹಾಗೂ ಪಶು ವೈದ್ಯಕೀಯ ಇಲಾಖೆಯ ಅಧಿಕಾರಿ ಸೂರ್ಯನಾರಾಯಣ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಗೋಪಾಲ ಶೆಟ್ಟಿ ವಂದಿಸಿದರು.

ಕುಂದಾಪುರ ಒಳಚರಂಡಿ ಯೋಜನೆಗೆ 50. ಕೋ. ರೂ.

ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಸುಮಾರು 50 ಕೋ. ರೂ. ವೆಚ್ಚದಲ್ಲಿ ಒಳಚರಂಡಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಅಲ್ಲದೇ ಪುರಸಬಾ ವ್ಯಾಪ್ತಿಯಲ್ಲಿ ಕುಡ್ಸೆಂಪ್‌ ಯೋಜನೆಯಡಿ ಪುನರಪಿ ಎರಡನೇ ಹಂತದ ಕಾರ್ಯ ಯೋಜನೆ ಜಾರಿಗೆ ತರಲು ಯೋಜಿಸಲಾಗಿದೆ ಎಂದು ಸಚಿವರು ಹೇಳಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com