ಮಡಾಮಕ್ಕಿ ಪರಿಸರದಲ್ಲಿ ಮತ್ತೆ ಸುಂಟರ ಗಾಳಿ

ಸಿದ್ದಾಪುರ: ಕುಂದಾಪುರ ತಾಲೂಕಿನ ಬೆಳ್ವೆ ಗ್ರಾ.ಪಂ. ವ್ಯಾಪ್ತಿಯ ಅಲಾºಡಿ ಗ್ರಾಮದ ಆರ್ಡಿ ಪರಿಸರದಲ್ಲಿ ಭಾರಿ ಸುಂಟರ ಗಾಳಿ ಬೀಸಿ ಹಾನಿ ಸಂಭವಿಸಿದ ಬೆನ್ನಲ್ಲೇ ಮಡಾಮಕ್ಕಿ ಹಾಗೂ ಕಾಸನಮಕ್ಕಿಗಳಲ್ಲಿ ಶನಿವಾರ ಮತ್ತೆ ಬಾರೀ ಸುಂಟರಗಾಳಿ ಬೀಸಿ ಅಪಾರ ಹಾನಿ ಉಂಟಾಗಿದೆ.

ಅಭಯಾರಣ್ಯದ ಹಲವು ಮರಗಳು ಧರಾಶಾಹಿ

ಮಡಾಮಕ್ಕಿ ಮತ್ತು ಕಾಸನಮಕ್ಕಿ ಪರಿಸರದಲ್ಲಿ ಶನಿವಾರ ಬೆಳಗ್ಗೆ 8.30ಕ್ಕೆ ಸುಂಟರ ಗಾಳಿ ಬೀಸಿದ ಪರಿಣಾಮ ಅಪಾರ ನಷ್ಟ ಸಂಭವಿಸಿದೆ. ಈ ಪರಿಸರಕ್ಕೆ ಹೊಂದಿಕೊಂಡಿರುವ ಸೋಮೇಶ್ವರ ಅಭಯಾರಣ್ಯದಲ್ಲಿ ಬಿರುಗಾಳಿಗೆ ಹಲವು ಮರಗಳು ನೆಲಕ್ಕುರುಳಿವೆ. ಸುಂಟರ ಗಾಳಿಯಿಂದ ವಿರಾಜಪೇಟೆ - ಬೈಂದೂರು ರಾಜ್ಯ ಹೆದ್ದಾರಿ ಮೇಲೆ ಮರಗಳು ಉರುಳಿದ್ದು, ಸುಮಾರು ಮೂರು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತು.

ಕೋಟ್ಯಂತರ ರೂ. ನಷ್ಟ

ಭಾರಿ ಸುಂಟರಗಾಳಿಗೆ ಭಾರಿ ಪ್ರಮಾಣದ ಆಸ್ತಿ - ಪಾಸ್ತಿಗೆ ಹಾನಿ ಉಂಟಾಗಿದ್ದು, ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮಡಾಮಕ್ಕಿ ಸಮೀಪದ ದುಡ್ಡಿನಜೆಡ್ಡು ಕ್ರಾಸ್‌ ಬಳಿ ಹಲಸಿನ ಮರವೊಂದು ಉರುಳಿ ಬಿದ್ದಿದೆ. ಈ ಸಂದರ್ಭ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಲಾರಿಯೊಂದು ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಮಡಾಮಕ್ಕಿ ಸೇತುವೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ರಾಜ್ಯ ಹೆದ್ದಾರಿಗೆ ಮರಗಳು ಉರುಳಿವೆ.

ವಾಹನ ಸಂಚಾರ ಅಸ್ತವ್ಯಸ್ತ

ಬೆಳಗ್ಗೆ ಮರಗಳು ಉರುಳಿದ್ದರಿಂದ ಈ ಭಾಗದಲ್ಲಿ ಸಂಚರಿಸುವ ಹಾಲಿನ ವಾಹನ, ಶಾಲಾ ವಾಹನ, ಬಸ್ಸು ಮತ್ತು ಪ್ರವಾಸಿ ವಾಹನಗಳ ಸಂಚಾರ ಕಷ್ಟವಾಯಿತು. ಸ್ಥಳಿಯರು ಹೆದ್ದಾರಿಯಲ್ಲಿನ ಕೆಲವು ಮರಗಳನ್ನು ಕಡಿದು ಲಘುವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಾಹನಗಳು ಮಾಂಡಿಮೂರುಕೈಯಿಂದ ಹೆಬ್ರಿ ಬೆಳಂಜೆ ಮೂಲಕ ಆಗುಂಬೆ, ಶಿವಮೊಗ್ಗಕ್ಕೆ ತೆರಳಿದವು. ಕುಂದಾಪುರ ಕಡೆ ಬರುವ ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಲಾಯಿತು.

ಸೋಮೇಶ್ವರ ವನ್ಯಜೀವಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನೋದ್‌ ಮತ್ತು ಅರಣ್ಯ ರಕ್ಷಕ ವಿಜಯ ಕುಮಾರ ನೇತೃತ್ವದಲ್ಲಿ ಸ್ಥಳಿಯರು ಉರುಳಿದ ಮರಗಳನ್ನು ತೆರವುಗೊಳಿಸಿದರು. ಅಭಯಾರಣ್ಯದಲ್ಲಿ ಉರುಳಿದ ಮರಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com