ಕರ್ಣಾಟಕ ಬ್ಯಾಂಕ್‌ ಕುಂದಾಪುರ ಶಾಖೆ ಕೃಷಿ ಅಭಿವೃದ್ಧಿ ಶಾಖೆ

ಕುಂದಾಪುರ: ಖಾಸಗಿ ರಂಗದ ಮುಂಚೂಣಿಯ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್‌ ಸ್ಥಾಪನೆಯಾದಾಗಿನಿಂದಲೂ ಕೃಷಿಯನ್ನು ಆದ್ಯತಾ ವಲಯವಾಗಿ ಪರಿಗಣಿಸಿ ಪ್ರೋತ್ಸಾಹ ನೀಡುತ್ತಾ ಬಂದಿದೆ. ಕುಂದಾಪುರ ತಾಲೂಕಿನ ಕೃಷಿಕರ ಹಿತದೃಷ್ಟಿಯನ್ನು ಹೊಂದಿರುವ ಕುಂದಾಪುರ ಶಾಖೆಯನ್ನು 'ಕೃಷಿ ಅಭಿವೃದ್ಧಿ ಶಾಖೆ' ಎಂದೇ ಈ ಮೂಲಕ ರೂಪಿಸಲಾಗಿದೆ ಎಂದು ಕರ್ಣಾಟಕ ಬ್ಯಾಂಕ್‌ನ ಮಹಾ ಪ್ರಬಂಧಕ ಎನ್‌. ಉಪೇಂದ್ರ ಪ್ರಭು ಘೋಷಿಸಿದರು.

ಸೋಮವಾರ ನಗರದ ಬಿ.ಆರ್‌. ರಾಯರ ಶಾಲೆಯಲ್ಲಿ ನಡೆದ ಬ್ಯಾಂಕಿನ ಕೃಷಿ ಗ್ರಾಹಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಬಗ್ಗೆ ಅಧಿಕೃತವಾಗಿ ಘೋಷಿಸಿದರು.

ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರ ಸರಕಾರದ ನಿರ್ದೇಶನದನ್ವಯ ಕೃಷಿ ಸಾಲಗಳ ಬಡ್ಡಿಯನ್ನು ಬ್ಯಾಂಕ್‌ ಶೇ. 10.75ಕ್ಕಿಂತ ಕಡಿಮೆಗೊಳಿಸಲಾಗದು. ಸರಕಾರದ ಯೋಜನೆಯನ್ವಯ ಬಡ್ಡಿ ಮನ್ನಾದ ಸಹಾಯ ಧನ ಖಾಸಗಿ ರಂಗದ ಬ್ಯಾಂಕುಗಳಿಗೆ ಲಭಿಸದು. ಆದರೆ ಇತರೆಲ್ಲಾ ನೀತಿ ನಿಯಮಗಳು ಅನ್ವಯವಾಗುತ್ತವೆ ಎಂದರು.

280 ಕೊಟಿ ರೂ. ವ್ಯವಹಾರ

ಕುಂದಾಪುರ ಶಾಖೆಯ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಭು, ಇಲ್ಲಿನ ವ್ಯವಹಾರ 280 ಕೊಟಿ ರೂ. ಮೀರಿದೆ. 30 ಕೋಟಿ ರೂ. ಕೃಷಿ ಸಾಲ ಸೇರಿದಂತೆ 170 ಕೊಟಿ ರೂ. ಸಾಲ ನೀಡಿದೆ. ಅತ್ಯತ್ತಮ ಗ್ರಾಹಕ ಸೇವೆಯೇ ಬ್ಯಾಂಕು ಗ್ರಾಹಕರನ್ನು ಉಳಿಸಿಕೊಳ್ಳಲು, ಬೆಳೆಸಲು ದಾರಿ ಎಂಬುದನ್ನು ಬ್ಯಾಂಕ್‌ ಮನಗಂಡಿದೆ ಎಂದರು.

ಬ್ಯಾಂಕಿನ ನಿರ್ದೇಶಕ ಡಾ| ಎಚ್‌. ರಾಮಮೋಹನ್‌ ಸಮಾರಂಭವನ್ನು ಉದ್ಘಾಟಿಸಿದರು. ಗ್ರಾಹಕರ ಪರವಾಗಿ ಉದ್ಯಮಿ ಜಯಕರ ಶೆಟ್ಟಿ, ಪತ್ರಕರ್ತ ಯು.ಎಸ್‌. ಶೆಣೈ ಮಾತನಾಡಿದರು.

ಮಂಗಳೂರು ವಲಯ ಮುಖ್ಯಸ್ಥ ಎಚ್‌.ಪಿ.ಆರ್‌. ಹಂದೆ ಸ್ವಾಗತಿಸಿದರು. ವಲಯ ಕಚೇರಿ ಪ್ರಬಂಧಕ ಬಿ.ಎಂ. ನಾಗೇಶ್‌ ರಾವ್‌ ಕಾರ್ಯಕ್ರಮ ನಿರೂಪಿಸಿ, ಕುಂದಾಪುರ ಶಾಖಾ ಪ್ರಬಂಧಕ ಚಂದ್ರಶೇಖರ ನಾವಡ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com