ಮಳೆಗಾಲದಲ್ಲೂ ನೀರಿಗೆ ಬರ: ಪ್ರತಿಭಟನೆ

ಕುಂದಾಪುರ: ಸುಡು ಬೇಸಿಗೆಯಲ್ಲಂತೂ ನೀರಿರುವುದಿಲ್ಲ. ಮಳೆಗಾಲದಲ್ಲಿಯಾದರೂ ನೀರು ಕೊಡಿ ಎಂದು ಆಗ್ರಹಿಸಿ ಕನ್ಯಾನ ಗ್ರಾಮಸ್ಥರು ಖಾಲಿ ಕೊಡಪಾನಗಳೊಂದಿಗೆ ಪ್ರತಿಭಟನೆ ನಡೆಸಿ ಧರಣಿ ಮಾಡಿದ ಘಟನೆ ಸೋಮವಾರ ಬೆಳಿಗ್ಗೆ ಹಟ್ಟಿಯಂಗಡಿ ಗ್ರಾಮ ಪಂಚಾಯ್ತಿ ಕಚೇರಿ ಮುಂದೆ ನಡೆದಿದೆ.
     ಪಂಚಾಯಿತಿ ವ್ಯಾಪ್ತಿಯ ಕನ್ಯಾನ ಗ್ರಾಮದ ಕೂಡ್ಲುಗುಡ್ಡೆ ಪ್ರದೇಶದಲ್ಲಿರುವ ಐದು ಸೆಂಟ್ಸ್ ಕಾಲೋನಿಯಲ್ಲಿ ಸುಮಾರು 90ಕ್ಕಿಂತಲೂ ಹೆಚ್ಚು ಕುಟುಂಬಗಳಿದ್ದು ಗ್ರಾ.ಪಂ. ವತಿಯಿಂದ ಸರಬರಾಜಾಗುವ ನೀರನ್ನೇ ನೆಚ್ಚಿಕೊಂಡಿದ್ದಾರೆ. ಬೇಸಿಗೆಯಲ್ಲಿಯೂ ಬಾವಿಗಳಲ್ಲಿ ನೀರಿಲ್ಲ ಎನ್ನುವ ಕಾರಣಕ್ಕೆ ಸರಿಯಾಗಿ ನೀರು ಸರಬರಾಜಾಗುತ್ತಿರಲಿಲ್ಲ. ಆದರೆ ಮಳೆಗಾಲದಲ್ಲಿಯೂ ನೀರು ಬಿಡುತ್ತಿಲ್ಲ ಎಂದು ಪ್ರತಿಭಟನಾನಿರತ ಗ್ರಾಮಸ್ಥರು ಆರೋಪಿಸಿದರು.
ಈ ಪ್ರದೇಶದಲ್ಲಿ ಒಂದು ಕೊಳವೆ ಬಾವಿಯಿದ್ದು ಅದರ ನೀರು ಸಂಪೂರ್ಣ ಕಲುಷಿತವಾಗಿದ್ದು ಕೆಸರಿನಂತಿದೆ. ಆ ನೀರನ್ನು ಕುಡಿಯುವುದು ಬಿಡಿ, ಇತರ ಕೆಲಸಕ್ಕೂ ಬಳಸುವಂತಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು, ಜನರ ಸಮಸ್ಯೆಗೆ ಸ್ಪಂದಿಸದ ಗ್ರಾಮ ಪಂಚಾಯಿತಿ ವಿಸರ್ಜನೆಯಾಗಲಿ ಎಂದು ಆಗ್ರಹಿಸಿದರು.
     ಹಟ್ಟಿಯಂಗಡಿ ಪಂಚಾಯಿತಿಯಲ್ಲಿ ಸರ್ವಾಧಿಕಾರ ನಡೆಯುತ್ತಿದೆ. ಬಡವರ ಪರ ಕಾಳಜಿ ಇಲ್ಲ. ಹಾಗಾಗಿ ಕಳೆದ ಸಾಲಿನಲ್ಲಿ ಚುನಾವಣೆಗಳೇ ನಡೆಯದೆ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕೂಲಿ ಕೆಲಸ ಮಾಡಿ ಬದುಕುವ ದಲಿತರಿಗೆ ಸಿಗಬೇಕಾದ ಮೂಲ ಸೌಕರ್ಯಗಳಾದ ನೀರು, ವಿದ್ಯುತ್, ರಸ್ತೆಗಳು ಇನ್ನೂ ಕನಸಾಗಿಯೇ ಉಳಿದಿದೆ. ಅಲ್ಲದೆ ಪಂಚಾಯಿತಿ ಅಧ್ಯಕ್ಷರು ಯಾರೆಂಬುದೇ ತಿಳಿದಿಲ್ಲ. ಹಲವು ಬಾರಿ ಬಂದಾಗಲೂ ಅಧ್ಯಕ್ಷರು ಕಚೇರಿಯಲ್ಲಿರಲಿಲ್ಲ. ಅಧ್ಯಕ್ಷರನ್ನು ಕರೆಯಿಸಿ, ಅವರ ಮುಖ ದರ್ಶನ ಮಾಡಿ ಸಮಸ್ಯೆಗಳನ್ನು ಹೇಳಿ ಹೋಗುತ್ತೇವೆ ಎಂದು ಹಠ ಹಿಡಿದರು. ಆದರೆ ಕೊನೆಗೂ ಅಧ್ಯಕ್ಷರು ಬರಲೇ ಇಲ್ಲ ಉಪಾಧ್ಯಕ್ಷರ ಸಮಕ್ಷಮ ಪಂಪ್‌ಸೆಟ್ ದುರಸ್ತಿ ಮಾಡಿ ನೀರು ಬಿಡುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.
ಪಂಚಾಯ್ತಿಯಲ್ಲಿ ಅಧಿಕಾರಿಗಳಿಲ್ಲ: ಪ್ರತಿಭಟನೆ ಸಂದರ್ಭ ಪಿಡಿಓ ಆಗಲೀ, ಕಾರ್ಯದರ್ಶಿಗಳಾಗಲೀ ಕಚೇರಿಯಲ್ಲಿರಲಿಲ್ಲ. ಇಬ್ಬರೂ ಚುನಾವಣಾ ಪೂರ್ವಭಾವಿ ತಯಾರಿ ಹಾಗೂ ಉಸ್ತುವಾರಿ ಸಚಿವರ ಸಭೆಯ ಪೂರ್ವಭಾವಿ ತಯಾರಿ ಸಭೆಗೆ ಹೋಗಿದ್ದರೆನ್ನಲಾಗಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷರೂ ಬರದೇ ಇದ್ದುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಯಿತು.
ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜೀವ ಶೆಟ್ಟಿ, ಕನ್ಯಾನ ಕೂಡ್ಲುಗುಡ್ಡೆ ಗ್ರಾಮಸ್ಥ ರಮೇಶ್ ಇದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com