ಇಂದಿನಿಂದ ಶಾಲಾ ಮಕ್ಕಳಿಗೆ ಹಾಲಿನ ಪುಡಿ

     ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಬೆಳಗ್ಗೆ ಶಾಲಾರಂಭ ಸಂದರ್ಭ ಹಾಲು ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಆ.1ರಂದು ಉಡುಪಿ, ದಕ್ಷಿಣ ಕನ್ನಡದಲ್ಲಿ ಚಾಲನೆ ದೊರೆಯಲಿದೆ. 
      ಸೋಮವಾರ, ಬುಧವಾರ, ಶುಕ್ರವಾರ ಹಾಲು ವಿತರಣೆಯಾಗಲಿದೆ. ಉಡುಪಿ, ದ.ಕ.ಜಿಲ್ಲೆಯ 1-10ನೇ ತರಗತಿಯವರೆಗಿನ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಒಟ್ಟು 3,16,845 ವಿದ್ಯಾರ್ಥಿಗಳು, 1,42,981 ಅಂಗನವಾಡಿ ಚಿಣ್ಣರು ಈ ಸೌಲಭ್ಯ ಪಡೆಯಲಿದ್ದಾರೆ. 
      ಶಾಲಾ ಮಕ್ಕಳಿಗೆ ವಾರದಲ್ಲಿ 3 ದಿನ ಪ್ರತಿಯೊಬ್ಬರಿಗೆ 18ಗ್ರಾಂ. ಕೆನೆ ಸಹಿತ ಹಾಲಿನ ಪುಡಿ ವಿತರಣೆ ಮಾಡಲಾಗುವುದು. ಹಾಗೆಯೇ ಅಂಗನವಾಡಿಯ ಪ್ರತಿ ಮಗುವಿಗೆ 14 ಗ್ರಾಂ. ಕೆನೆ ರಹಿತ ( ಬೆಣ್ಣೆ ರಹಿತ) ಹಾಲಿನ ಪುಡಿ ವಿತರಿಸಲಾಗುವುದು. 
     ಯೋಜನೆಯಡಿ ಉಡುಪಿಯ 1,013 ಶಾಲೆಯ 1,11,780 ಮಕ್ಕಳು ಹಾಗೂ ದ.ಕ.ಜಿಲ್ಲೆಯ 1,475 ಶಾಲೆಯ 2,05,065 ಮಕ್ಕಳಿದ್ದಾರೆ. ಅಂಗನವಾಡಿಗೆ ಸಂಬಂಧಿಸಿ ಉಡುಪಿಯ 1,146 ಅಂಗನವಾಡಿಗಳ 54,858 ಮಕ್ಕಳು ಹಾಗೂ ದ.ಕ. ಜಿಲ್ಲೆಯ 2,102 ಅಂಗನವಾಡಿಗಳ 88, 123 ಚಿಣ್ಣರು ಹಾಲಿನ ಪುಡಿ ಪಡೆಯಲಿದ್ದಾರೆ. 
    ಉಡುಪಿ ಹಾಗೂ ದ.ಕ.ಜಿಲ್ಲೆಯ 3,16,845 ವಿದ್ಯಾರ್ಥಿಗಳಿಗೆ ಪ್ರತಿದಿನ (ವಾರಕ್ಕೆ 3 ದಿನ) 5,730ಕಿ.ಗ್ರಾಂ ಕೆನೆ ಸಹಿತ ಹಾಲಿನ ಪುಡಿ ಕೆಎಂಎಫ್ ವಿತರಿಸಲಿದೆ. ಈ 2 ಜಿಲ್ಲೆಗಳ ಒಟ್ಟು 1,42,891ಅಂಗನವಾಡಿ ಮಕ್ಕಳಿಗೆ 2001ಕಿ.ಗ್ರಾಂ. ಕೆನೆ ರಹಿತ ಹಾಲಿನ ಪೌಡರ್ ಸರಬರಾಜಾಗಲಿದೆ. 
      ಜಿಲ್ಲೆಯ ಎಲ್ಲ ಸರಕಾರಿ, ಅನುದಾನಿತ ಶಾಲೆಗಳಲ್ಲಿ ಬೆಳಗ್ಗೆ ಪ್ರಾರ್ಥನೆ ಮುಗಿದ ನಂತರ ಅಥವಾ ಮುಂಚೆ ಹಾಲಿನ ಪೌಡರ್ ಕುದಿಸಿ ಮಕ್ಕಳಿಗೆ ನೀಡಲಾಗುವುದು. ಹಾಲಿನ ಪೌಡರ್‌ನ್ನು ಕೆಎಂಎಫ್ 1ಕಿ.ಗ್ರಾಂ, 25ಕಿ.ಗ್ರಾಂ. ಪ್ಯಾಕೆಟ್‌ನಲ್ಲಿ ಪೂರೈಕೆ ಮಾಡುತ್ತಿದ್ದು, ಮಕ್ಕಳಿಗೆ ನಿಗದಿತ ಪ್ರಮಾಣದಲ್ಲಿ ನೀಡಲಾಗುವುದು. 

ಎಲ್ಲೆಲ್ಲ್ಲಿ ಚಾಲನೆ ?: ಉಡುಪಿಯಲ್ಲಿ ಯೋಜನೆಗೆ ಸಚಿವ ವಿನಯ ಕುಮಾರ್ ಸೊರಕೆ ಕಾಪು ಸರಕಾರಿ ಮಾದರಿ ಹಿ.ಪ್ರಾ. ಶಾಲೆಯಲ್ಲಿ ಬೆಳಗ್ಗೆ 9.30ಕ್ಕೆ ಚಾಲನೆ ನೀಡಿದ್ದಾರೆ.. ಈ ಸಂದರ್ಭ ಮಂಗಳೂರಿನ ಮಣ್ಣಗುಡ್ಡೆ ಗಾಂಧಿ ನಗರ ಸರಕಾರಿ ಶಾಲೆಯಲ್ಲಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದ್ದಾರೆ.

ಕೆಎಂಎಫ್‌ಗೆ ಪೂರೈಕೆ ಜವಾಬ್ದಾರಿ: ಮಕ್ಕಳಿಗೆ ಹಾಲಿನ ಪೌಡರ್ ಪೂರೈಕೆ ಜವಾಬ್ದಾರಿ ಕೆಎಂಎಫ್ ವಹಿಸಿಕೊಂಡಿದೆ. ಸದ್ಯಕ್ಕೆ ಆಯಾ ಶಾಲೆಗಳಿಗೆ ಬೇಕಾದ ಹಾಲಿನ ಪುಡಿ ಸಂಸ್ಥೆ ತನ್ನ ಖರ್ಚಿನಲ್ಲಿಯೇ ವಿತರಿಸಲಿದೆ. ಮುಂದೆ ಸಾರಿಗೆ ವೆಚ್ಚ ಸರಕಾರ ಅಥವಾ ಸಂಸ್ಥೆಯೇ ಭರಿಸುವ ಬಗ್ಗೆ ಚಿಂತನೆ ನಡೆಯಲಿದೆ. 

     ರಾಜ್ಯಾದ್ಯಂತ ಹಾಲಿನ ಪುಡಿ ಪೂರೈಕೆ ಮಾಡುವ ಜವಾಬ್ದಾರಿ ಹೊಂದಿರುವ ಈ ಸಂಸ್ಥೆಯ ಹಾಲಿನ ಪೌಡರ್ ತಯಾರಿಕೆ ಘಟಕ ಚೆನ್ನರಾಯಪಟ್ಟಣ, ಮಂಡ್ಯ, ಬೆಂಗಳೂರು, ಧಾರವಾಡದಲ್ಲಿ ಮಾತ್ರವಿದೆ. ಕೆಎಂಎಫ್ ಸಂಗ್ರಹಿಸುವ ಹೆಚ್ಚುವರಿ ಹಾಲು ಮಹಾರಾಷ್ಟ್ರದ ವರ್ನಾ, ಆಂಧ್ರದ ಬಾಲಾಜಿ ಡೈರಿ, ತಮಿಳುನಾಡಿನ ಕೃಷ್ಣಗಿರಿ ಡೈರಿಗೆ ಪೂರೈಕೆ ಮಾಡಲಾಗುತ್ತಿದೆ. ಹಾಗಾಗಿ ರಾಜ್ಯ ಘಟಕದಲ್ಲಿ ಹಾಲಿನ ಪೌಡರ್ ಉತ್ಪಾದನೆ ಸಾಲದಿದ್ದರೆ ಈ ಡೈರಿಗಳಿಂದ ತರಿಸಲು ಕೆಎಂಎಫ್ ಚಿಂತನೆ ನಡೆಸಿದೆ. ಹಾಲಿನ ಪುಡಿ ಹೊಸ ಘಟಕ ತೆರೆಯಲು 150 ಕೋಟಿ ರೂ.ವೆಚ್ಚವಾಗಲಿದೆ. ಹೀಗಾಗಿ ಹಾಲಿನ ಬೆಲೆ 2ರೂ. ಏರಿಕೆ ಪ್ರಸ್ತಾಪ ಕೆಎಂಎಫ್ ಸರಕಾರದ ಮುಂದಿಟ್ಟಿದೆ. ಈ ಪ್ರೋತ್ಸಾಹ ಧನ ರೈತರಿಗೆ ನೀಡದೆ ಸಂಸ್ಥೆಯ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸಲು ಸಂಸ್ಥೆ ಚಿಂತನೆ ನಡೆಸಿದೆ. 

* ಜಿಲ್ಲೆಯ ಎಲ್ಲ ಸರಕಾರಿ, ಅನುದಾನಿತ ಶಾಲೆಗಳಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಬೆಳಗ್ಗೆ ಪ್ರಾರ್ಥನೆ ಮುಗಿದ ನಂತರ ಅಥವಾ ಮುಂಚೆಯೇ(ಶಾಲಾರಂಭ ಸಮಯ)ಹಾಲಿನ ಪೌಡರ್ ಕುದಿಸಿ ಮಕ್ಕಳಿಗೆ ನೀಡಲಾಗುವುದು. ಹಾಲಿನ ಪೌಡರ್‌ನ್ನು ಕೆಎಂಎಫ್ 1ಕಿ.ಗ್ರಾಂ, 25ಕಿ.ಗ್ರಾಂ. ಪ್ಯಾಕೆಟ್‌ನಲ್ಲಿ ಪೂರೈಕೆ ಮಾಡುತ್ತಿದ್ದು, ಮಕ್ಕಳಿಗೆ ನಿಗದಿತ ಪ್ರಮಾಣದಲ್ಲಿ ನೀಡಲಾಗುವುದು. -ನಾಗೇಂದ್ರ ಮಧ್ಯಸ್ಥ , ಡಿಡಿಪಿಐ ಉಡುಪಿ. 

* ರಾಜ್ಯದಲ್ಲಿ ಒಟ್ಟು 62 ಲಕ್ಷ ಮಕ್ಕಳಿಗೆ, 39 ಲಕ್ಷ ಅಂಗನವಾಡಿ ಮಕ್ಕಳಿಗೆ ಹಾಲಿನ ಪುಡಿಯನ್ನು ಕೆಎಂಎಫ್ ಪೂರೈಕೆ ಮಾಡಲಿದೆ. ಶಾಲಾ ಮಕ್ಕಳಿಗೆ ಪ್ರತಿದಿನ 112 ಟನ್, ಅಂಗನವಾಡಿ ಮಕ್ಕಳಿಗೆ ಸುಮಾರು 65 ಟನ್ ಸೇರಿದಂತೆ ದಿನಂಪ್ರತಿ 177 ಟನ್ ಹಾಲಿನ ಪುಡಿ ಪೂರೈಕೆ ಮಾಡಲಾಗುವುದು. -ಕೆ.ರವಿರಾಜ್ ಹೆಗ್ಡೆ, ಅಧ್ಯಕ್ಷ, ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ

ಕೃಪೆ-ಉಮೇಶ್ ಕುಕ್ಕುಪಲ್ಕೆ ಉಡುಪಿ, ವಿಕ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com