ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಂಘದ ವತಿಯಿಂದ ರೂ. 3.50ಲಕ್ಷ ವಿದ್ಯಾರ್ಥಿ ವೇತನ ವಿತರಣೆ

ಕುಂದಾಪುರ: ಮೀನುಗಾರರ ಬೇಡಿಕೆಗಳಿಗೆ ಹೆಚ್ಚಿನ ಒತ್ತುಕೊಟ್ಟು ಅನುದಾನ ಬಿಡುಗಡೆಗೊಳಿಸುವುದಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಮೂಲ ಸೌಕರ್ಯ ಒದಗಿಸುವುದರಲ್ಲಿ ಈಗಾಗಲೇ ವಿವಿಧ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ ಸೊರಕೆ ಹೇಳಿದರು.

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ - ಮುಂಬೈ, ಕುಂದಾಪುರ ಶಾಖೆ ಆಶ್ರಯದಲ್ಲಿ ಬಗ್ವಾಡಿಯ ಶ್ರೀ ಮಹಿಷಾಸುರ ಮರ್ಧಿನಿ ಸಭಾಭವನದಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸಮ್ಮಾನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

100 ಕೋ. ರೂ. ಅನುದಾನ

ಗಂಗೊಳ್ಳಿ, ಮಲ್ಪೆ ಹಾಗೂ ಹೆಜಮಾಡಿ ಬಂದರು ಅಭಿವೃದ್ಧಿಗೆ ರೂ. 100 ಕೋಟಿ ಅನುದಾನ ಬಿಡುಗಡೆಗೊಳಿಸಲಾಗುವುದು. ತಲಾ ರೂ. 1.20 ಲಕ್ಷ ಅನುದಾನದಡಿ 7 ಸಾವಿರ ಮೀನುಗಾರಿಕಾ ಮನೆ ಕಟ್ಟಲು ಮಂಜೂರಾತಿ, ಮಹಿಳಾ ಮೀನುಗಾರರಿಗೆ ಶೇ. 3ರ ಬಡ್ಡಿದರದಲ್ಲಿ ರೂ. 2 ಲಕ್ಷದಷ್ಟು ಸಾಲ ನೀಡಲಾಗುವುದು ಎಂದು ಅವರು ತಿಳಿಸಿದರು.
ಡಾ| ಜಿ. ಶಂಕರ್‌ ಅವರ ಕ್ರಿಯಾಶೀಲತೆ ಹಾಗೂ ಕಾರ್ಯತತ್ಪರತೆ ಇತರರಿಗೆ ಮಾದರಿ ಎಂದು ಸಚಿವರು ಹೇಳಿದರು.

ವಿದ್ಯಾರ್ಥಿ ವೇತನ ವಿತರಣೆ

ಉಡುಪಿಯ ಜಿ. ಶಂಕರ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ ಅವರು ಪದವಿ, ಪ. ಪೂ. ಹಾಗೂ ವೃತ್ತಿಪರ ಶಿಕ್ಷಣದ 180 ವಿದ್ಯಾರ್ಥಿಗಳಿಗೆ ರೂ. 3.50 ಲಕ್ಷ ವಿದ್ಯಾರ್ಥಿ ವೇತನ ವಿತರಣೆ ಮಾಡಿ ಶುಭಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮುಂಬೈ ಮೊಗವೀರ ಮಹಾಜನ ಸೇವಾ ಸಂಘದ ಅಧ್ಯಕ್ಷ ಸುರೇಶ್‌ ಆರ್‌. ಕಾಂಚನ್‌ ವಹಿಸಿದ್ದರು. ಈ ಸಂದರ್ಭ ಸಚಿವ ಸೊರಕೆ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಉದ್ಯಮಿ ಆನಂದ ಸಿ. ಕುಂದರ್‌, ಮುಂಬೈ ಮೊಗವೀರ ಮಹಾಜನ ಸೇವಾ ಸಂಘದ ಮಾಜಿ ಅಧ್ಯಕ್ಷ ಗೋಪಾಲ ಎಸ್‌. ಪುತ್ರನ್‌, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಕೇಶವ ಕುಂದರ್‌, ದ.ಕ. ಹಾಗೂ ಉಡುಪಿ ಜಿಲ್ಲಾ ಮೀನುಗಾರಿಕಾ ಫೆಡರೇಶನ್‌ ಅಧ್ಯಕ್ಷ ಯಶಪಾಲ್‌ ಸುವರ್ಣ, ಮೊಗವೀರ ಯುವ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಜಯ ಸಿ. ಕೋಟ್ಯಾನ್‌, ಕುಂದಾಪುರ ಮೊಗವೀರ ಯುವಶಕ್ತಿ ಸ್ಥಾಪಕಾಧ್ಯಕ್ಷ ಕೆ.ಕೆ. ಕಾಂಚನ್‌, ಕುಂದಾಪುರ ಮೊಗವೀರ ಸೇವಾ ಸಂಘದ ಶಾಖಾಧ್ಯಕ್ಷ ಎಂ.ಎಂ. ಸುವರ್ಣ, ಮಾಜಿ ಶಾಖಾಧ್ಯಕ್ಷ ಬಿ. ಹಿರಿಯಣ್ಣ, ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಉಮೇಶ್‌ ಪುತ್ರನ್‌, ಉದ್ಯಮಿ ಎನ್‌.ಡಿ. ಚಂದನ್‌ ಮೊದಲಾದವರು ಉಪಸ್ಥಿತರಿದ್ದರು.

ಉದಯ ಕುಮಾರ್‌ ಹಟ್ಟಿಯಂಗಡಿ ಸ್ವಾಗತಿಸಿದರು, ಎಂ.ಎಂ. ಸುವರ್ಣ ಪ್ರಾಸ್ತಾವಿಕ ಮಾತನಾಡಿದರು. ಮುಂಬೈ ಶಾಖೆಯ ಕಾರ್ಯದರ್ಶಿ ಮಂಜುನಾಥ ಮೊಗವೀರ ವಂದಿಸಿದರು. ಮಂಜುನಾಥ ನೆಂಪು ಕಾರ್ಯಕ್ರಮ ನಿರೂಪಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com