ಡಿ.19 - 22: ಆಳ್ವಾಸ್‌ ವಿಶ್ವ ನುಡಿಸಿರಿ ವಿರಾಸತ್‌

ಮಂಗಳೂರು: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂಡಬಿದಿರೆ ವಿದ್ಯಾಗಿರಿಯಲ್ಲಿ ಡಿ. 19ರಿಂದ 22ರ ವರೆಗೆ ನಡೆಯಲಿರುವ ಆಳ್ವಾಸ್‌ ವಿಶ್ವ ನುಡಿಸಿರಿ ವಿರಾಸತ್‌ - 2013 ವಿಶ್ವ ಸಮ್ಮೇಳನದಲ್ಲಿ ದೇಶ ವಿದೇಶಗಳ 40,000 ಪ್ರತಿನಿಧಿಗಳು ಹಾಗೂ 10 ಲಕ್ಷ ಸಾಹಿತ್ಯಾಸಕ್ತರು ಭಾಗವಹಿಸುವ ನಿರೀಕ್ಷೆ ಇದೆ.
      ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‌ನ ಲಾಂಛನ ಹಾಗೂ ವೆಬ್‌ಸೈಟ್ ಬಿಡುಗಡೆ ನಗರದಲ್ಲಿ ಗುರುವಾರ ನಡೆಯಿತು. ಶಾಸಕ ಜೆ.ಆರ್.ಲೋಬೊ ಬಿಡುಗಡೆ ನೆರವೇರಿಸಿ, ಡಾ.ಮೋಹನ್ ಆಳ್ವ ನಡೆಸುತ್ತಿರುವ ಆಳ್ವಾಸ್ ವಿರಾಸತ್‌ನಿಂದ ಜಿಲ್ಲೆಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಮನ್ನಣೆ ಸಿಕ್ಕಿದೆ. ಇದಕ್ಕಾಗಿ ಅವರ ಬದ್ಧತೆ, ಕಳಕಳಿಗೆ ನಾವೆಲ್ಲಾ ಋಣಿಯಾಗಿರಬೇಕು ಎಂದರು. 
     ಲಾಂಭನವನ್ನು ಆಳ್ವಾಸ್‌ ಕಾಲೇಜಿನ ದೃಶ್ಯಕಲಾ ವಿಭಾಗದ ವಿದ್ಯಾರ್ಥಿ ಪುಷ್ಪರಾಜ್‌ ಆರ್‌.ಎಸ್‌. ರಚಿಸಿದ್ದಾರೆ. ವೆಬ್‌ಸೈಟ್‌ ನ್ನು ಮೂಡಬಿದಿರೆಯ ಅಭಿಜಿತ್‌ ಎಂ. ವಿನ್ಯಾಸಗೊಳಿಸಿದ್ದಾರೆ.
      ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಆಳ್ವಾಸ್ ಪ್ರಯತ್ನಕ್ಕೆ ತಲೆದೂಗಲೇ ಬೇಕು. ರಾಷ್ಟ್ರದಲ್ಲಿ ಶೇ.70ರಷ್ಟಿರುವ ಯುಜನತೆಯನ್ನು ಸದ್ಬಳಕೆ ಮಾಡಿದರೆ ದೇಶಕ್ಕೆ ಉತ್ತಮ ಭವಿಷ್ಯ ನಿರೀಕ್ಷಿಸಬಹುದು. ಈ ನಿಟ್ಟಿನಲ್ಲಿ ನಾಡಿನ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಆಳ್ವಾಸ್ ಮಾದರಿ ಎಂದು ಲೋಬೊ ಹೇಳಿದರು. 

ವಿಶ್ವ ಸಮ್ಮೇಳನ: ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್- ಕನ್ನಡ ನಾಡು ನುಡಿಯ ವಿಶ್ವ ಸಮ್ಮೇಳನ ಡಿ.19ರಿಂದ 22ರ ತನಕ 'ಕನ್ನಡ ಮನಸ್ಸು ಅಂದು-ಇಂದು- ಮುಂದು' ಎಂಬ ಮುಖ್ಯ ಪರಿಕಲ್ಪನೆಯಲ್ಲಿ ಆಯೋಜಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸಮ್ಮೇಳನದಲ್ಲಿ ರಾಜ್ಯ, ದೇಶ, ವಿದೇಶಗಳ ಸುಮಾರು 40 ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದು, ಪ್ರತೀದಿನ ಎರಡು ಲಕ್ಷ ಜನ ಸೇರಿಕೊಂಡು ಒಟ್ಟು 10 ಲಕ್ಷ ಸಾಹಿತ್ಯಾಸಕ್ತರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. 

ಆಳ್ವಾಸ್ ನುಡಿಸಿರಿ ಕನ್ನಡ ನಾಡು ನುಡಿಯ ಸಮ್ಮೇಳನಕ್ಕೆ 10ರ ಸಂಭ್ರಮ ಮತ್ತು ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ 20 ತುಂಬುತ್ತಿರುವ ಸಂಭ್ರಮವನ್ನು ವಿಶ್ವ ಸಮ್ಮೇಳನ ರೂಪುದಲ್ಲಿ ಒಟ್ಟಿಗೆ ಆಚರಿಸಲಾಗುತ್ತಿದೆ. ಮುಂದೆ ಎಂದಿನಂತೆ ಆಳ್ವಾಸ್ ನುಡಿಸಿರಿ, ವಿರಾಸತ್ ಪ್ರತ್ಯೇಕ ನಡೆಯಲಿದೆ ಎಂದು ಅವರು ಹೇಳಿದರು. 

ಕನ್ನಡ ನಾಡು, ನುಡಿಗಾಗಿ ದುಡಿದಿರುವ 90 ದಾಟಿರುವ ಹಿರಿಯ ಚೇತನಗಳಿಗೆ ವಿಶೇಷ ಗೌರವಧನ ಸಹಿತ ಗೌರವಾರ್ಪಣೆ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸಾಧಕರಿಗೆ ಸನ್ಮಾನ ಹಾಗೂ ಮೂರು ವಿಭಾಗದಲ್ಲಿ ಶಾಸ್ತ್ರೀಯ, ಜಾನಪದ ಹಾಗೂ ಕಲಾ ಸಾಧಕರಿಗೆ ವಿರಾಸತ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 5-6 ಅಂತಾರಾಷ್ಟ್ರೀಯ ಮಟ್ಟದ ತಂಡಗಳು ಭಾಗವಹಿಸಲಿವೆ ಎಂದರು. 

ಮುಖ್ಯ ವೇದಿಕೆ ಹೊರತಾಗಿ ಮೂರು ಪರ್ಯಾಯ ವೇದಿಕೆಗಳಲ್ಲಿ ಕೃಷಿ, ಜಾನಪದ ಮತ್ತು ವಿದ್ಯಾರ್ಥಿ ಚಿಂತನ ಕಾರ್ಯಕ್ರಮ ನಡೆಯಲಿದೆ. ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಭಾಗವಹಿಸುವ ವಿರಾಸತ್ ಮುಖ್ಯ ವೇದಿಕೆಯಲ್ಲದೆ, ಇತರ 10 ವೇದಿಕೆಗಳಲ್ಲಿ ಸಾಂಸ್ಕೃತಿಕ ವೈಭವ ನಡೆಯಲಿದೆ. ಯಕ್ಷಗಾನ, ನಾಟಕ, ಜಾನಪದ, ನೃತ್ಯ, ಸಂಗೀತ, ಬಾಲ ಪ್ರತಿಭೆ ಮೊದಲಾದ ಕಲಾ ಪ್ರಕಾರಗಳು ಪ್ರದರ್ಶನಗೊಳ್ಳಲಿವೆ. ವಿಶ್ವ ನುಡಿಸಿರಿ ಅಂಗವಾಗಿ ಡಿ.18ರಿಂದ 25ರ ವರೆಗೆ ಕನ್ನಡ ಸಂಸ್ಕೃತಿ ಗ್ರಾಮ, ಸಾವಿರಕ್ಕೂ ಅಧಿಕ ಚಿತ್ರ ಕಲಾವಿದರು ಭಾಗವಹಿಸುವ ಚಿತ್ರಸಿರಿ, ಅಮೂಲ್ಯ ಪುಸ್ತಕಗಳ ಸಂಗ್ರಹ ಸಹಿತ ಪುಸ್ತಕ ಪ್ರದರ್ಶನ, ವಸ್ತುಪ್ರದರ್ಶನ, ಫುಲಪುಷ್ಪ ಪ್ರದರ್ಶನ, ಆಹಾರೋತ್ಸವ, ಬೃಹತ್ ಪುಸ್ತಕ ಮಾರಾಟ ವ್ಯವಸ್ಥೆ ವಿಶೇಷ ಆಕರ್ಷಣೆಯಾಗಲಿದೆ ಎಂದವರು ನುಡಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com