ಅಶ್ವಿನಿ ನಕ್ಷತ್ರ ಧಾರಾವಾಹಿಯ ಚಲುವೆ ಮಯೂರಿ ಕ್ಯಾತಾರಿ

ಬಾಲ್ಯದಿಂದಲೂ ಮಾತೆಂದರೆ ಇಷ್ಟ. ನಾನು ಹೀಗೆ ಆಗಬೇಕೆಂಬ ಯಾವುದೇ ಗುರಿಯಾಗಲೀ ಆಸೆಯಾಗಲಿ ಇರಲಿಲ್ಲ. ಕಾಲೇಜು ದಿನಗಳಲ್ಲಿ ಅಲ್ಲಲ್ಲಿ ಕೆಲ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿದ್ದು ಬಿಟ್ಟರೆ ಮುಂದೊಂದು ದಿನ ಬೆಳ್ಳಿಪರದೆ ಮೇಲೆ ನಟಿಯಾಗಿ ಕಾಣಿಸಿಕೊಳ್ಳುತ್ತೇನೆಂಬ ಸಣ್ಣ ಕಲ್ಪನೆಯೂ ಇರಲಿಲ್ಲ' ಎಂದು ಅರಳು ಹುರಿದಂತೆ ಮಾತಿಗಿಳಿಯುತ್ತಾಳೆ ಕಿರುತೆರೆಯ ಈಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಅಶ್ವಿನಿ ನಕ್ಷತ್ರ'ದ ಮಿನುಗುತಾರೆ 'ಮಯೂರಿ ಕ್ಯಾತಾರಿ'.
      ಮುದ್ದುಮುಖದ ಗುಂಗುರು ಕೂದಲಿನ, ನೋಡಿದರೆ ದೃಷ್ಟಿ ತಾಗುತ್ತೆಂಬಂತೆ ಗಲ್ಲದ ಮೇಲೊಂದು ಶಾಶ್ವತ ಮಚ್ಚೆ ಹೊಂದಿರುವ 20ರ ಆಸುಪಾಸಿನ ಈ ಪೋರಿಯ ತವರೂರು ಹುಬ್ಬಳ್ಳಿ. ಶೇ.90 ಅಂಕಗಳೊಂದಿಗೆ ಇಲ್ಲಿನ ಅಕ್ಸ್‌ಫರ್ಡ್ ಕಾಲೇಜಿನಲ್ಲಿ ಬಿಕಾಂ ಮುಗಿಸಿದ ಈ ಬೊಗಸೆ ಕಂಗಳ ಚೆಲುವೆ ನಟನೆಯ ಬಗ್ಗೆ ಕಿಂಚಿತ್ತೂ ಅನುಭವವಿಲ್ಲದೆ, ಯಾವ ಗಾಡ್‌ಫಾದರ್ ಕೂಡಾ ಇಲ್ಲದೆ, ಬಯಸಿ ಬಂದ ಅದೃಷ್ಟ ಕೈಬಿಡದೇ ಪ್ರಸ್ತುತ 'ಅಶ್ವಿನಿ ನಕ್ಷತ್ರ' ಧಾರಾವಾಹಿಯ ಪ್ರಮುಖ ಪಾತ್ರವಾದ ಸ್ವಾಭಿಮಾನಿ ಹೆಣ್ಣು ಅಶ್ವಿನಿಯ ಪಾತ್ರ ನಿರ್ವಹಿಸುತ್ತಿದ್ದಾಳೆ.
      ಉತ್ತರ ಕರ್ನಾಟಕ ಭಾಗದ ಕೆಲ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಈ ಪ್ರತಿಭೆಗೆ, ಒಮ್ಮೆ 'ಸೈ' ಎನ್ನುವ ಡ್ಯಾನ್ಸ್ ಪ್ರೋಗ್ರಾಮ್‌ನಲ್ಲಿ ಭಾಗವಹಿಸಿದಾಗ ಕಿರುತೆರೆ ನಟರೊಬ್ಬರು ಪೋಟೋಗಳನ್ನು ಪ್ರೊಡಕ್ಷನ್‌ರವರಿಗೆ ಕಳುಹಿಲು ತಿಳಿಸಿದ್ದರು. ಅದೇ ಅದೃಷ್ಟ ಖುಲಾಯಿಸಿತು.
         ಸಿಕ್ಕ ಅವಕಾಶ ಕಳೆದುಕೊಳ್ಳದೆ ಸೀದಾ ಅಡಿಷನ್‌ಗೆ ಹೋದೆ ನಾಯಕಿ ಪಾತ್ರಕ್ಕೆ ಆಯ್ಕೆಯಾದೆ ಎನ್ನುವ ಈ ಸುಂದರಿಯನ್ನು ಈಗ ಜನ 'ಅಶ್ವಿನಿ' ಎಂದೇ ಗುರುತಿಸುತ್ತಾರಂತೆ. ಈಕೆಯ ಕುಟುಂಬದಲ್ಲಿ ಯಾರಿಗೂ ನಟನೆಯ ಲವಲೇಶ ಇಲ್ಲ. ಹುಬ್ಬಳ್ಳಿಯ ವಿಆರ್‌ಎಲ್‌ನಲ್ಲಿ ಕೆಲಸ ಮಾಡುತ್ತಿರುವ ಮಯೂರಿಯ ತಂದೆ ಪ್ರಕಾಶ್ ಕ್ಯಾತಾರಿ ಮಗಳ ನಟನಾ ಅಭಿಯಾನಕ್ಕೆ ಸಾಥ್ ನೀಡುತ್ತಿದ್ದರೆ, ತಾಯಿ ಗೀತಾ ಮಗಳ ಸಾಧನೆಯ ಹಾದಿಗೆ ಬೆಂಗಾವಲು. ಮಾತಿನ ಮಲ್ಲಿ ತನ್ನ ಪಿಯುಸಿ ದಿನಗಳಿಂದಲೂ ತನಗೆ ಬೇಕಾದ ಹಣವನ್ನು ತಾನೇ ದುಡಿದುಕೊಳ್ಳುವ ಸ್ವಾಭಿಮಾನಿ. ಬೇರೊಬ್ಬ ಸೆಲೆಬ್ರಿಟಿಯಿಂದ ಆಟೋಗ್ರಾಫ್ ಪಡೆಯುವ ವಯಸ್ಸಿನಲ್ಲಿ ಮತ್ತೊಬ್ಬರು ತನ್ನಿಂದ ಆಟೋಗ್ರಾಫ್ ಹಾಕಿಸಿಕೊಳ್ಳುತ್ತಿರೋದು ಆಕೆಗೆ ತುಂಬಾ ಖುಷಿ. ವ್ಯಾಸಂಗವೆಲ್ಲಾ ಆಂಗ್ಲ ಮಾಧ್ಯಮದಲ್ಲಿ. ಆದ್ರೆ ಧಾರವಾಹಿಗಳಲ್ಲಿ ಸಂಪೂರ್ಣ ಕನ್ನಡ. 'ಅಯ್ಯೋ ಮೊದಮೊದಲು ನನ್ನ ಕಷ್ಟ ಆ ದೇವರಿಗೇ ಪ್ರೀತಿ. ಅನೇಕ ಡೈಲಾಗ್‌ಗಳನ್ನ ಒಂದೇ ಬಾರಿಗೆ ಹೇಳಬೇಕೆಂದಾಗ ಮಾತಾಡೋಕೆ ಬರ್ತಿರಲಿಲ್ಲ. ಅಲ್ಲಿದ್ದವರೆಲ್ಲ ನನ್ನ ತಪ್ಪುಗಳನ್ನು ತಿದ್ದಿತೀಡಿ ಪ್ರೋತ್ಸಾಹಿಸಿದ್ರು' ಎಂದು ಡೈಲಾಗ್ ಡೆಲಿವರಿ ಮಾಡುವ ಹುಬ್ಬಳ್ಳಿ ಹುಡುಗಿ ಈಗ ಹೆಚ್ಚೆಚ್ಚು ಕನ್ನಡ ಪುಸ್ತಕ, ಪತ್ರಿಕೆ ಓದೋಕೆ ಶುರುಮಾಡಿದ್ದಾಳೆ.
     'ಹಿರಿತೆರೆಯಲ್ಲಿ ಅವಕಾಶ ಸಿಕ್ರೆ ಖಂಡಿತಾ ಮಾಡ್ತಿನಿ' ಎನ್ನುವ ಈ ತಾರೆಗೆ ಕನ್ನಡ ಚಿತ್ರರಂಗದ ಎಲ್ಲ ನಟರೂ ಅಚ್ಚುಮೆಚ್ಚು. ಮುಂದೊಂದು ದಿನ ಅವರೊಂದಿಗೆ ನಟಿಸೋ ಸೌಭಾಗ್ಯ ಸಿಗಬಹುದೇ? ಎಂಬ ಒಳತುಡಿತ ಯಾವಾಗ್ಲೂ ಇದೆ. ಕನ್ನಡ ಚಿತ್ರರಂಗಕ್ಕೆ ಉತ್ತರ ಕರ್ನಾಟಕದ ಕಲಾವಿದರ ಕೊಡುಗೆ ಅಪಾರ. ಈ ಸಾಲಿಗೆ ಮತ್ತೊಂದು ಸೇರ್ಪಡೆ ಮಯೂರಿ. ಸದ್ಯಕ್ಕೆ ಓದಿಗೆ ತಾತ್ಕಾಲಿಕ ಬ್ರೇಕ್.
- ಗಣೇಶ್ ಕಮ್ಲಾಪುರ್

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

1 comments:

Anonymous said...

Cute :)

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com