ಭಂಡಾರ್‌ಕಾರ್ಸ್‌ ಕಾಲೇಜು: ಸುವರ್ಣ ಮಂದಿರ ಉದ್ಘಾಟನೆ

ಕುಂದಾಪುರ: ಶಿಕ್ಷಣ, ಅರೋಗ್ಯ ಹಾಗೂ ಬಡತನವನ್ನು ಭವಿಷ್ಯದ ಪ್ರಜೆಗಳು ಮೆಟ್ಟಿ ನಿಲ್ಲುವಂತಾಗಬೇಕು ಎನ್ನುವ ನಿಲುವಿನಿಂದ ಡಾ|ಟಿ.ಎಂ.ಎ ಪೈ ಅವರು ಸಮಾಜ ಚಿಂತನೆಯಿಂದ ಈ ಕ್ಷೇತ್ರಗಳ ಅಭಿವೃದ್ದಿಗಾಗಿ ದುಡಿದ ಕಾರಣದಿಂದ ಅವಿಭಜಿತ ದ.ಕ ಜಿಲ್ಲೆ ಶಿಕ್ಷಣ ಹಾಗೂ ಅರೋಗ್ಯ ಕ್ಷೇತ್ರದಲ್ಲಿ ತನ್ನ ಗೌರವವನ್ನು ಕಾಯ್ದುಕೊಂಡಿದೆ. ಅದೇ ರೀತಿ ಗುಣಮಟ್ಟದ ಶಿಕ್ಷಣದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಸಹಕುಲಪತಿ ಡಾ|ಎಚ್‌.ಎಸ್‌ ಬಲ್ಲಾಳ್‌ ಹೇಳಿದರು.

ಅವರು ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ನಿರ್ಮಿಸಿರುವ ಆಡಳಿತ ಕಟ್ಟಡ 'ಸುವರ್ಣ ಮಂದಿರ'ವನ್ನು ಉದ್ಘಾಟಿಸಿ ಮಾತನಾಡಿದರು.

ಯುವ ಸಮುದಾಯಕ್ಕೆ ಯೋಗ್ಯ ಶಿಕ್ಷಣಾವಕಾಶಗಳು ದೊರಕಿದಾಗ ದೇಶದ ಹಾಗೂ ಸಮಾಜದ ನಿರೀಕ್ಷಿತ ಅಭಿವೃದ್ದಿ ಸಾಧ್ಯವಾಗುತ್ತದೆ. ಸಮುದಾಯವನ್ನು ಬದಲಾಯಿಸುವ ಶಕ್ತಿ ಮಹಿಳೆಯರಲ್ಲಿ ಮಾತ್ರ ಇರುವುದರಿಂದ ಶಿಕ್ಷಣ ಸಂಸ್ಥೆಗಳು ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕಾಗಿದೆ. ಶಿಕ್ಷಣದಲ್ಲಿ ಹುಡುಕಾಟ ಹಾಗೂ ಸರಿಯಾದ್ದನ್ನು ಆಯ್ದುಕೊಳ್ಳುವುದು ಅಗತ್ಯ ಇದೆ. ವಿವಿಧ ಸ್ತರದ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಶಿಕ್ಷಣ ನೀಡುತ್ತಿರುವ ಮಣಿಪಾಲ ಅಕಾಡೆಮಿಯ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದಲ್ಲಿ ರಾಜಿಯನ್ನು ಮಾಡಿಕೊಂಡಿಲ್ಲ. ಯಾವುದೆ ಕ್ಷೇತ್ರದಲ್ಲಿ ಪರಿಪೂರ್ಣತೆ ಸಾಧಿಧಿಸಲು ಬದ್ದತೆ, ಗುಣಮಟ್ಟ, ವಿಶ್ವಾಸರ್ಹತೆ ಹಾಗೂ ನಿಯಮಿತ ಅಭ್ಯಾಸದ ಅವಶ್ಯಕತೆ ಇದೆ ಎಂದರು.

ಮಣಿಪಾಲ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ ಇದರ ಆಡಳಿತಾಧಿಕಾರಿ ಡಾ|ಎಚ್‌.ಶಾಂತಾರಾಮ್‌ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಟ್ರಸ್ಟಿಗಳಾದ ಕೆ.ದೇವದಾಸ ಕಾಮತ್‌, ಕೆ.ಶಾಂತಾರಾಮ ಪ್ರಭು, ವಿಶ್ವಸ್ಥ ಮಂಡಳಿಯ ಸದಸ್ಯ ಸೋಲಮನ್‌ ಸೋನ್ಸ್‌, ವೃತ್ತಿಪರ ಕೋರ್ಸಗಳ ಟ್ರಸ್ಟಿಗಳಾದ ರಾಜೇಂದ್ರ ತೋಳಾರ್‌ ಹಾಗೂ ಸದಾನಂದ ಚಾತ್ರ ಉಪಸ್ಥಿತರಿದ್ದರು.

ಇದೆ ಸಂದರ್ಭಲ್ಲಿ ಅಕಾಡೆಮಿಯ ಆಡಳಿತಾಧಿಕಾರಿ ಡಾ|ಎಚ್‌.ಶಾಂತಾರಾಮ್‌, ಕಾಲೇಜಿನಲ್ಲಿ 50 ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿದ ಕಚೇರಿ ಅಧೀಕ್ಷಕ ಕೆ.ವಿಠuಲ್‌, ಸುವರ್ಣ ಸೌಧ ನಿರ್ಮಾಣದ ಗುತ್ತಿಗೆದಾರ ಸತೀಶ್‌ ಆಚಾರ್‌, ದೇವಪ್ಪ ಮೇಸ್ತ್ರಿ, ಮಧುಕರ ಆಚಾರ್‌ ಹಾಗೂ ಗೋಪಾಲ್‌ ಅವರುಗಳನ್ನು ಸಮ್ಮಾನಿಸಲಾಯಿತು.

ಪದವಿ ಕಾಲೇಜಿನ ಪ್ರಾಂಶುಪಾಲ ಡಾ|ನಾರಾಯಣ ಶೆಟ್ಟಿ ಸ್ವಾಗತಿಸಿದರು, ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ|ರೇಖಾ ಬನ್ನಾಡಿ ಸಮ್ಮಾನಿತರ ವಿವರ ನೀಡಿದರು, ಪದವಿ ಪೂರ್ವ ಕಾಲೇಜಿನ . ಉಪನ್ಯಾಸಕಿ ಸವಿತಾ ಶಾಸ್ತ್ರಿ ನಿರೂಪಿಸಿದರು. ಪ್ರಾಂಶುಪಾಲ ಜಿ.ಎಂ ಗೊಂಡಾ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com