ಭಂಡಾರ್‌ಕಾರ್ಸ್‌ ಕಾಲೇಜು: ಡಾ| ಶಾಂತಾರಾಮ್‌ ಗಮಕ ಪ್ರಶಸ್ತಿ ಪ್ರದಾನ

ಕುಂದಾಪುರ: ಗಮಕ ಶ್ರೇಷ್ಠವಾದ ಕಲೆ. ಯುವ ಪೀಳಿಗೆ ಗಮಕದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅದನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಬೇಕಾಗಿದೆ ಎಂದು ಮಣಿಪಾಲ ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ನ ಆಡಳಿತಾಧಿಕಾರಿ ಡಾ| ಎಚ್‌.ಎಸ್‌. ಶಾಂತಾರಾಮ್‌ ಹೇಳಿದರು.

ಅವರು ಕುಂದಾಪುರ ಭಂಡಾರ್‌ಕಾರ್ಸ್‌ ಕಾಲೇಜಿನ ಆರ್‌.ಎನ್‌. ಶೆಟ್ಟಿ ಸಭಾಂಗಣದಲ್ಲಿ ಜರಗಿದ ಡಾ| ಎಚ್‌. ಶಾಂತಾರಾಮ್‌ ಗಮಕ ವಾಚನ ಮತ್ತು ವ್ಯಾಖ್ಯಾನ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿಂದೆ ಗಮಕವನ್ನು ಹಾಡುವ ಹವ್ಯಾಸ ಪ್ರತಿ ಮನೆಗಳಲ್ಲಿ ಇತ್ತು. ಅದರಿಂದಾಗಿಯೇ ಗಮಕ ಇಷ್ಟು ಶ್ರೇಷ್ಠವಾಗಿ ಬೆಳೆಯಲು ಸಹಾಯಕವಾಯಿತು. ಆದರೆ ಇಂದು ಆಧುನಿಕ ಮಾಧ್ಯಮಗಳ ಸಂಗೀತ ಕಾರ್ಯಕ್ರಮಗಳಿಂದ ದಿನಬೆಳಗಾಗುತ್ತದೆ. ಹಾಗಾಗಿ ಇಂದಿನ ದಿನಗಳಲ್ಲಿ ಇದನ್ನು ಉಳಿಸಿ, ಬೆಳೆಸುವ ಕೆಲಸವಾಗಬೇಕು ಎಂದರು.

ಬೆಂಗಳೂರಿನ ಗಮಕ ಕಲಾ ಪರಿಷತ್‌ನ ಅಧ್ಯಕ್ಷ ಎಂ.ಆರ್‌. ಸತ್ಯನಾರಾಯಣ ಅವರಿಗೆ ಡಾ| ಎಚ್‌. ಶಾಂತಾರಾಮ್‌ ಗಮಕ ವಾಚನ ಪ್ರಶಸ್ತಿ ಹಾಗೂ ಖ್ಯಾತ ವ್ಯಾಖ್ಯಾನಕಾರ ಹೊಸಹಳ್ಳಿಯ ಎಚ್‌.ಎಸ್‌. ಗೋಪಾಲ ಅವರಿಗೆ ಡಾ| ಎಚ್‌. ಶಾಂತಾರಾಮ್‌ ಗಮಕ ವ್ಯಾಖ್ಯಾನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗಮಕ ವಾಚನ ಪ್ರಶಸ್ತಿಗೆ ಭಾಜನರಾದ ಎಂ.ಆರ್‌. ಸತ್ಯನಾರಾಯಣ ಮಾತನಾಡಿ, ಬೇರೆ ಎಲ್ಲ ಪ್ರಶಸ್ತಿಗಿಂತ ಈ ಪ್ರಶಸ್ತಿ ಶಿಖರಪ್ರಾಯವಾಗಿದೆ ಎಂದರು. ಡಾ| ಎಚ್‌. ಶಾಂತಾರಾಮ್‌ ಗಮಕ ವ್ಯಾಖ್ಯಾನ ಪ್ರಶಸ್ತಿ ಪಡೆದ ಹೊಸಹಳ್ಳಿ ಗೋಪಾಲ್‌ ಮಾತನಾಡಿ, ಗಮಕದಲ್ಲಿ ಕಲಿಯಬೇಕಾದದ್ದು ಬಹಳಷ್ಟಿದೆ. ಪ್ರಶಸ್ತಿ ನೀಡುವ ಮೂಲಕ ಗಮಕವನ್ನು ಅಧ್ಯಯನ ಮಾಡುವುದಕ್ಕೆ ಎಚ್ಚರಿಕೆಯ ಗಂಟೆಯನ್ನು ಕೊಡುತ್ತಿದ್ದೀರಿ ಎಂದರು.

ಗಮಕ ಪ್ರಾತ್ಯಕ್ಷಿಕೆ

ಬೆಳಗ್ಗೆ ಬೆಂಗಳೂರಿನ ನಿವೃತ್ತ ಪ್ರಾಂಶುಪಾಲ ಪ್ರೊ| ಕೇಶವ ಮೂರ್ತಿ ಎಂ.ಆರ್‌. ಅವರು ಗಮಕ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಬೆಂಗಳೂರಿನ ಬಿ.ಎಂ. ಪ್ರತಿಷ್ಠಾನದ ಅಧ್ಯಕ್ಷ ಡಾ| ಪಿ.ವಿ. ನಾರಾಯಣ ಅವರಿಂದ ಕನ್ನಡ ಕಾವ್ಯ ಪರಂಪರೆ ಮತ್ತು ಗಮಕ ಈ ಬಗ್ಗೆ ಉಪನ್ಯಾಸ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ಡಾ| ಎನ್‌.ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿದರು. ಡಾ| ಎಚ್‌.ಶಾಂತಾರಾಮ್‌ ಗಮಕ ವಾಚನ-ವ್ಯಾಖ್ಯಾನ ಪ್ರಶಸ್ತಿಯ ಸಂಯೋಜಕ. ಪ್ರೊ| ಎಸ್‌. ನಾರಾಯಣ ರಾವ್‌ ಪ್ರಸ್ತಾವನೆಗೈದರು. ಡಾ| ಪಾರ್ವತಿ ಜಿ. ಐತಾಳ್‌ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ| ಗಣಪತಿ ಭಟ್‌ ಮತ್ತು ಪಾಂಡುರಂಗ ಅವರು ಪರಿಚಯಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com