ದೇಶದಲ್ಲಿಯೇ ಅಪರೂಪವಾಗಿರುವ ಕಪ್ಪು ಚಿರತೆ ಪತ್ತೆ.

ಉಡುಪಿ: ದೇಶದಲ್ಲಿಯೇ ಬಲು ಅಪರೂಪವಾಗಿರುವ ಕಪ್ಪು ಚಿರತೆಯು ಕೊಕ್ಕರ್ಣೆ ಸಮೀಪದ ಕಾಡೂರು ಗ್ರಾಮದ ಕಮಲ ಶೆಡ್ತಿ ಅವರ ಮನೆಗೆ ಸೆ. 11ರ ಮುಂಜಾನೆಯ ಕತ್ತಲಲ್ಲಿ ನುಗ್ಗಿದೆ. ಸುದ್ದಿ ತಿಳಿದ ವಲಯ ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿದು ಬೋನಿನಲ್ಲಿ ಬಂಧಿಸಿದ್ದಾರೆ.

ಮನೆಯ ನಾಯಿಯು ಕೂಗುತ್ತಿರುವುದನ್ನು ಗಮನಿಸಿ ಮನೆಮಂದಿ ಹೊರಗಿನ ಸರಂಜಾಮುಗಳಿದ್ದ ಕೋಣೆಯತ್ತ ಹೋದಾಗ ಅಲ್ಲಿ ಕಪ್ಪಗಿನ ಪ್ರಾಣಿಯೊಂದು ಕಂಡುಬಂದಿತ್ತು. ಮೊದಲಿಗೆ ಅವರಿಗೂ ಅದೊಂದು ಚಿರತೆ ಎನ್ನುವುದು ಅರಿವಿಗೆ ಬಂದಿರಲಿಲ್ಲ. ಯಾವುದೋ ಕಾಡಿನ ಪ್ರಾಣಿಯೇ ಇರಬೇಕು ಎಂದುಕೊಂಡು ಕೋಣೆಯ ಬಾಗಿಲು ಮುಚ್ಚಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳ ತಂಡ ಆ ಪ್ರಾಣಿಯನ್ನು ಸೆರೆಹಿಡಿದು ಬೋನಿಗೆ ಹಾಕಿದಾಗ ಅದೊಂದು ಅಪರೂಪದ ಕರಿಚಿರತೆ ಎನ್ನುವುದು ಖಾತ್ರಿಯಾಗಿತ್ತು. ಮನೆಮಂದಿ ಕೋಣೆಯ ಬಾಗಿಲು ಹಾಕಿದ್ದರಿಂದ ಚಿರತೆ ದಾಳಿಗೆ ಯಾರೂ ಸಿಲುಕದೆ ಅಪಾಯದಿಂದ ಪಾರಾಗಿದ್ದಾರೆ.

ನಾಯಿಮರಿ ಸೇಫ್ !

ಕರಿ ಚಿರತೆ ಭಾರಿ ಡೇಂಜರ್‌. ಆದರೂ ಅದರೊಂದಿಗೆ ಕೋಣೆಯಲ್ಲಿ ಸುಮಾರು 8 ಗಂಟೆಗೂ ಅಧಿಕ ಗಂಟೆಗಳ ಕಾಲ ನಾಯಿ ಮರಿ ಇದ್ದರೂ ಚಿರತೆ ಅದಕ್ಕೆ ಏನೂ ಮಾಡಿಲ್ಲ. ಮುಂಜಾನೆಯ ಕತ್ತಲಲ್ಲಿ ನಾಯಿಮರಿಯನ್ನು ಕರಿಚಿರತೆ ಅಟ್ಯಾಕ್‌ ಮಾಡಿಕೊಂಡು ಬಂದಿದೆ. ಈ ವೇಳೆ ಬೊಬ್ಬೆ ಹಾಕಿಕೊಂಡು ಮರಿಯು ಮನೆಯ ಹೊರಗಿನ ತೆರೆದ ಕೋಣೆಗೆ ನುಗ್ಗಿದೆ. ಮನೆಮಂದಿ ಬಂದು ಕೋಣೆಯೊಳಗೆ ವನ್ಯಮೃಗವೊಂದು ಇರುವುದನ್ನು ಅರಿತು ಕೋಣೆಗೆ ಬಾಗಿಲು ಹಾಕಿದ್ದಾರೆ. ಸರಿಸುಮಾರು ಮುಂಜಾನೆ 3ರಿಂದ ಬೆಳಗ್ಗೆ 11.30 ಗಂಟೆಯ ಸುಮಾರಿಗೆ ಕಾರ್ಯಾಚರಣೆ ಮುಗಿಯುವವರೆಗೆ ನಾಯಿಮರಿ ಮತ್ತು ಚಿರತೆ ಒಂದೇ ಕೋಣೆಯಲ್ಲಿತ್ತು. ಹೀಗಿದ್ದರೂ ಮರಿ ಸೇಫ್ ಆಗಿತ್ತು. ಚಿರತೆಗೆ ಹೆದರಿಕೆ ಕಾಡಿದ್ದರಿಂದ ಕೋಣೆಯೊಳಗೆ ಹೊರಳಾಟ ನಡೆಸಿತ್ತೇ ಹೊರತು ನಾಯಿಮರಿಗೆ ಏನೂ ಮಾಡಿಲ್ಲ. ಹೊರಳಾಟದ ಸಂದರ್ಭ ಚಿರತೆ ಮುಖಕ್ಕೆ ತರಚಿದ ಗಾಯವಾಗಿದೆ. ವೆಟರ್ನರಿ ವೈದ್ಯರ ಮುಖೇನ ಅರಣ್ಯಾಧಿಕಾರಿಗಳು ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.

ಜಿಲ್ಲೆಯಲ್ಲಿ ಕಂಡ ಪ್ರಥಮ ಕಪ್ಪು ಚಿರತೆ!

ಬಲು ಅಪರೂಪದ ಈ ಚಿರತೆಯನ್ನು ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯಕ್ಕೆ ಬುಧವಾರವೇ ಬಿಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಕಪ್ಪು ಚಿರತೆ ಸಿಕ್ಕಿದ್ದಿಲ್ಲ. ಉತ್ತರ ಕರ್ನಾಟಕದ ಅನಸಿ ನ್ಯಾಶನಲ್‌ ಪಾರ್ಕಿನಲ್ಲಿ ಕರಿ ಚಿರತೆಯೊಂದು ಇದೆ ಎನ್ನುವುದು ಗೊತ್ತಿದೆ ಎಂದು ಉಡುಪಿ ವಲಯ ಅರಣ್ಯಾಧಿಕಾರಿ ಪ್ರಕಾಶ ಪೂಜಾರಿ ಹೇಳಿದ್ದಾರೆ.

ಜೆನೆಟಿಕ್‌ ವಿಸ್ಮಯ ?

ರಾಜ್ಯದ ಮೃಗಾಲಯಗಳಲ್ಲಿಯೂ ಕರಿ ಚಿರತೆ ಬಹಳ ವಿರಳ. ಶಿವಮೊಗ್ಗದ ತಾವರೆಕೊಪ್ಪ ಧಾಮದಲ್ಲಿ ಭಾರತೀಯ ಮೃಗಾಲಯದ ಇತಿಹಾಸದಲ್ಲಿಯೇ ಸಾಮಾನ್ಯ ಚಿರತೆಯೊಂದು ಕಪ್ಪು ಚಿರತೆಗೆ ಜನ್ಮ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ಸಾಮಾನ್ಯ ಚಿರತೆಗಳಿಗೆ ಕಪ್ಪು ಚಿರತೆ ಮರಿ ಜನಿಸುವ ಜೆನೆಟಿಕ್‌ ಅಂಶಗಳಿದ್ದರೆ ಈ ರೀತಿಯ ವಿಸ್ಮಯಗಳು ನಡೆಯಬಹುದು ಎಂದು ಹಿರಿಯ ಅರಣ್ಯ ಅಧಿಕಾರಿಗಳು ಹೇಳುತ್ತಾರೆ.

ಕುಂದಾಪುರ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಪಿ. ಮಂಜುನಾಥ ಶೆಟ್ಟಿ ಅವರ ಮಾರ್ಗದರ್ಶನ, ಉಪಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್‌ ಅವರ ನಿರ್ದೇಶನದಲ್ಲಿ ವಲಯ ಅರಣ್ಯಾಧಿಕಾರಿ ಪ್ರಕಾಶ ಪೂಜಾರಿ, ಬ್ರಹ್ಮಾವರ ವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ, ಅರಣ್ಯ ರಕ್ಷಕರಾದ ಶಿವಪ್ಪ, ದೇವರಾಜ ಪಾಣ, ವಾಹನ ಚಾಲಕ ಜೋಯ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸಂರಕ್ಷಣೆ ಮಾಡಿಲ್ಲ ಯಾಕೆ?

ಅಪರೂಪದ ಚಿರತೆಯಾದರೂ ಅದನ್ನು ಪಿಲಿಕುಳದಂತಹ ಸಂರಕ್ಷಿತ ತಾಣಕ್ಕೆ ಹಸ್ತಾಂತರಿಸಬಹುದಿತ್ತು. ಆದರೆ ಅದಕ್ಕೆ ಇಲಾಖೆಯ ಹಲವು ಮಾರ್ಗಸೂಚಿಗಳಿರುವ ಕಾರಣ ಅಭಯಾರಣ್ಯಕ್ಕೆ ಬಿಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com