19ಕ್ಕೆ ಬ್ರಹ್ಮಾವರ ಬಂದ್: ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಯ

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದಲ್ಲಿ ಆಕಾಶವಾಣಿ ವೃತ್ತದಿಂದ ಬಸ್ ನಿಲ್ದಾಣವರೆಗೆ ಮೇಲ್ಸೇತುವೆ ರಚನೆ ಮಾಡುವಂತೆ ಆಗ್ರಹಿಸಿ ಇದೇ 19ಕ್ಕೆ ಬ್ರಹ್ಮಾವರ ಬಂದ್‌ಗೆ ರಾಷ್ಟ್ರೀಯ ಹೆದ್ದಾರಿ ಉಳಿಸಿ ಹೋರಾಟ ಸಮಿತಿ ನಿರ್ಧರಿಸಿದೆ.

ಮೇಲ್ಸೆತುವೆ ರಚನೆಯ ಬಗ್ಗೆ ಜನಪ್ರತಿನಿಧಿಗಳಿಗೆ, ಹೆದ್ದಾರಿ ಪ್ರಾಧಿ ಕಾರದ ಅಧಿಕಾರಿಗಳಿಗೆ ಹೆದ್ದಾರಿ ಸಚಿವರಿಗೆ ಕಳೆದ ಫೆಬ್ರವರಿಯಿಂದ 50ಕ್ಕೂ ಹೆಚ್ಚು ಬಾರಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಶುಕ್ರವಾರ ನಡೆದ ಸಾರ್ವಜನಿಕ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸಂಚಾಲಕ ಬಿ.ಗೋವಿಂದರಾಜ್ ಹೆಗ್ಡೆ ತಿಳಿಸಿದರು.

ಬ್ರಹ್ಮಾವರ ಪರಿಸರದ ಹಾರಾಡಿ, ಚಾಂತಾರು, ವಾರಂಬಳ್ಳಿ ಮತ್ತು ಹಂದಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಂದ್ ನಡೆಸಲು ನಿರ್ಧರಿಸಲಾಗಿದೆ. ಅಂಗಡಿ ಮುಂಗಟ್ಟುಗಳು, ಶಾಲಾ ಕಾಲೇಜುಗಳು ಅಂದು ಬಂದ್ ನಡೆಸಿ ಬೆಂಬಲ ನೀಡಲಿವೆ. ಅಂದು ಬೆಳಿಗ್ಗೆ 10ಗಂಟೆಗೆ ಬಸ್ ನಿಲ್ದಾಣದ ಬಳಿ ಬೃಹತ್ ಸಾರ್ವಜನಿಕ ಸಭೆ, ಬ್ರಹ್ಮಾವರ ಪೇಟೆಯಲ್ಲಿ ಬೃಹತ್ ರ್‍ಯಾಲಿ, ಸುಮಾರು ಒಂದು ಗಂಟೆಗಳ ಕಾಲ ಹೆದ್ದಾರಿ ತಡೆ ಮತ್ತು ತಹಶೀಲ್ದಾರ್ ಅವರಿಗೆ ಮನವಿ ನೀಡಲಾಗುವುದು. ಹೋರಾಟದಲ್ಲಿ ಪರಿಸರದ ಎಲ್ಲಾ ಸಂಘಟನೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.

ಜನಪ್ರತಿನಿಧಿಗಳ ಮುಖಾಮುಖಿ 27ಕ್ಕೆ: ಬಂದ್‌ಗೆ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಲ್ಲಿ ಇದೇ 27ರಂದು ಬಸ್ ನಿಲ್ದಾಣದ ಬಳಿ ಜನಪ್ರತಿನಿಧಿಗಳೊಂದಿಗೆ ಮುಖಾಮುಖಿ ಚರ್ಚಿಸಲಾಗುವುದು. ಅಂದು ಆಶಾದಾಯಕ ಉತ್ತರ ಸಿಗದೇ ಇದ್ದಲ್ಲಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಡಾ.ಕೆ.ಪಿ ಶೆಟ್ಟಿ, ವಿಠಲ ಪೂಜಾರಿ, ಸದಾಶಿವ ಪೂಜಾರಿ, ರಾಜು ಪೂಜಾರಿ, ತಿಮ್ಮಪ್ಪ ಹೆಗ್ಡೆ, ಅಲೆವೂರು ಯೋಗೀಶ್ ಆಚಾರ್ಯ, ರತ್ನಾಕರ ಶೆಟ್ಟಿ, ಗೋಪಾಲ ಶೆಟ್ಟಿ ಮತ್ತಿತರರು ಹಾಜರಿದ್ದರು.

`ಮೇಲ್ಸೇತುವೆ ನಿರ್ಮಾಣದಿಂದ ಕಾಮಗಾರಿಯ ರಚನೆಯಲ್ಲಿ ಬದಲಾ ವಣೆ ಮಾಡಬೇಕು. ಈಗ ಮಾಡಿರುವ ಕಾಮಗಾರಿ ಒಡೆಯಲು ಸಮಯ ಮತ್ತು ಖರ್ಚು ಹೆಚ್ಚಾಗುವ ಬಗ್ಗೆ, ಬ್ರಹ್ಮಾವರದಲ್ಲಿ ಮೇಲ್ಸೇತುವೆ ರಚಿಸಲು ಒಪ್ಪಿದಲ್ಲಿ ಬೇರೆ ಕಡೆಗಳಲ್ಲಿ ಮೇಲ್ಸೇತುವೆ ರಚಿಸಲು ಒತ್ತಾಯ ಬರಬಹುದು ಎಂದು ಹೆದ್ದಾರಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ. ಇದರಿಂದ ಉತ್ತರದಿಂದ ಹೋರಾಟ ಸಮಿತಿ ತಮ್ಮ ಹೋರಾಟ ಮತ್ತಷ್ಟು ಬಲಗೊಳಿಸಲು ಕಾರಣವಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com