ಮಂಗಳೂರು ಸೇರಿದಂತೆ ರಾಜ್ಯ ಆರು ಕಡೆ ಸೈಬರ್‌ ಪೊಲೀಸ್‌ ಠಾಣೆಗಳು

ಬೆಂಗಳೂರು : ಹೆಚ್ಚುತ್ತಿರುವ ಸೈಬರ್‌ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ರಾಜ್ಯದ ಆರು ನಗರಗಳಲ್ಲಿ ಹೊಸದಾಗಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗಳ ಆರಂಭಕ್ಕೆ ಆದೇಶ ಹೊರಡಿಸಿದೆ.

ಅಪರಾಧ ತನಿಖಾ ದಳ (ಸಿಐಡಿ)ದ ಸೈಬರ್‌ ಕ್ರೈಂ ವಿಭಾಗದಡಿ ಗುಲ್ಬರ್ಗ, ಮಂಗಳೂರು, ದಾವಣಗೆರೆ, ಮೈಸೂರು, ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಲ್ಲಿ ಹೊಸ ಸೈಬರ್‌ ಕ್ರೈಂ ಠಾಣೆಗಳು ಆರಂಭವಾಗಲಿವೆ.

ಆರಂಭದಲ್ಲಿ ಈ ಹೊಸ ಠಾಣೆಗಳಿಗೆ ಸಿಐಡಿ ವಿಭಾಗದಿಂದಲೇ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಲಿದ್ದು, ಹಂತ ಹಂತವಾಗಿ ಅಧಿಕಾರಿ ಮತ್ತು ಸಿಬ್ಬಂದಿ ನೇಮಕ ಮಾಡುವ ಮೂಲಕ ಎರಡು ವರ್ಷಗಳೊಳಗೆ ಅವುಗಳನ್ನು ಸ್ವತಂತ್ರ ನಿರ್ವಹಣಾ ಠಾಣೆಗಳನ್ನಾಗಿಸಲು ತೀರ್ಮಾನಿಸಲಾಗಿದೆ.

ಏಕೆ ಸೈಬರ್‌ ಠಾಣೆಗಳು ?

ಟ್ವಿಟರ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇ-ಮೇಲ್‌, ಎಸ್‌ಎಂಎಸ್‌ಗಳ ಮೂಲಕ ವಂಚನೆ, ಕೊಲೆಯಂತಹ ಅಪರಾಧ ಕೃತ್ಯಗಳಲ್ಲಿ ಮೊಬೈಲ್‌ಗ‌ಳ ಬಳಕೆ ಸೇರಿದಂತೆ ಪಾತಕಿಗಳು ಅಪರಾಧ ಕೃತ್ಯಗಳಿಗೆ ಆಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ದಿನ ಕಳೆದಂತೆ ಈ ಮಾದರಿಯ ಅಪರಾಧ ಚಟುವಟಿಕೆಗಳು ಅಧಿಕವಾಗುತ್ತಿರುವುದರಿಂದ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.

ಈ ಸೈಬರ್‌ ಅಪರಾಧ ಕೃತ್ಯಗಳಿಗೆ ಅಂಕುಶ ಹಾಕುವ ಸಲುವಾಗಿ ಪೊಲೀಸರನ್ನು ಸಶಕ್ತಗೊಳಿಸಲು ಸರ್ಕಾರ ಮುಂದಾಗಿದೆ. ಅಲ್ಲದೆ, ಕೆಲ ತಿಂಗಳ ಹಿಂದೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದಿದ್ದ ಐಪಿಎಸ್‌ ಅಧಿಕಾರಿಗಳ ಸಭೆಯಲ್ಲಿ ಸೈಬರ್‌ ಕ್ರೈಂ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಕೆ.ಜೆ.ಜಾರ್ಜ್‌ ಅವರೇ ಪ್ರಸ್ತಾಪಿಸಿದ್ದರು. ಈ ಪ್ರಕರಣಗಳ ನಿಯಂತ್ರಣಕ್ಕೆ ಕಠಿಣ ಮಾರ್ಗೋಪಾಯಗಳನ್ನು ಅನುಸರಿಸುವಂತೆ ಕೂಡ ರಾಜ್ಯ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರು ಸೈಬರ್‌ ಕ್ರೈಂ ಠಾಣೆಗಳ ಆರಂಭಕ್ಕೆ ಸರ್ಕಾರ ಆದೇಶ ಹೊರಡಿಸಿದ್ದು, ಆಗತ್ಯ ಮೂಲಸೌಲಭ್ಯಗಳಿಗೆ ಅಗತ್ಯ ಅನುದಾನ ಮಂಜೂರು ಮಾಡಿದೆ.

ಸಿಐಡಿ ವಿಭಾಗದಿಂದಲೇ ಸಿಬ್ಬಂದಿ

ಸ್ಥಳೀಯವಾಗಿ ನಡೆಯುವ ಸೈಬರ್‌ ಅಪರಾಧ ಕೃತ್ಯಗಳ ಸಂಬಂಧ ಪ್ರಕರಣಗಳನ್ನು ದಾಖಲಿಸಿಕೊಂಡು ಸೈಬರ್‌ ಠಾಣೆಗಳು ಕಾರ್ಯನಿರ್ವಹಿಸಲಿವೆ ಎಂದು ಸಿಐಡಿ ಸೈಬರ್‌ ಕ್ರೈಂ ವಿಭಾಗದ ಪೊಲೀಸ್‌ ವರಿಷ್ಠಾಧಿಕಾರಿ ಡಿ.ರೂಪ ತಿಳಿಸಿದ್ದಾರೆ.

ಈ ಠಾಣೆಗಳಲ್ಲಿ ಡಿವೈಎಸ್ಪಿ, ಸಬ್‌ ಇನ್ಸ್‌ಪೆಕ್ಟರ್‌ ಹಾಗೂ ಇಬ್ಬರು ಕಾನ್‌ಸ್ಟೆàಬಲ್‌ಗ‌ಳು ಸೇರಿ 4-5 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಸಿಐಡಿ ವಿಭಾಗದಿಂದಲೇ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜನೆಗೆ ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಹೊಸ ಠಾಣೆಗಳಲ್ಲಿ ಕೆಲಸ ಮಾಡಲಿಚ್ಚಿಸುವರಿಗೆ ಅವಕಾಶ ಕಲ್ಪಿಸುವುದಾಗಿ ಪ್ರಸುತ್ತ ಸಿಐಡಿ ವಿಭಾಗದಲ್ಲಿರುವವರಿಗೆ ತಿಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಹೊಸ ಠಾಣೆಗೆ ವರ್ಗಾವಣೆಗೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಐಡಿಯ ಸೈಬರ್‌ ಕ್ರೈಂ ಬ್ರಾಂಚ್‌ನ ಪರಿಣಿತರು ತರಬೇತಿ ನೀಡಲಿದ್ದಾರೆ. ಕೆಲ ದಿನಗಳಲ್ಲಿ ಈ ನೂತನ ಠಾಣೆಗಳು ಕಾರ್ಯಾರಂಭಿಸಲಿವೆ. ಈಗಾಗಲೇ ಆಯಾ ವಲಯದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಠಾಣೆಗಳಿಗೆ ಸ್ಥಳಾವಕಾಶ ಗುರುತಿಸಲಾಗಿದ್ದು, ಸಿಐಡಿಯಿಂದ ಉಪಕರಣಗಳ ಖರೀದಿ ಕೂಡ ಆಗಿದೆ ಎಂದು ವಿವರಿಸಿದರು.

* ರಾಜ್ಯದ ಆರು ಜಿಲ್ಲೆಗಳಲ್ಲಿ ಹೊಸದಾಗಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗಳ ಆರಂಭಕ್ಕೆ ರಾಜ್ಯ ಸರ್ಕಾರ ಆದೇಶಿಸಿದೆ. ಈ ಠಾಣೆಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸಿಐಡಿಯಿಂದ ನಿಯೋಜಿಸಲಿದ್ದು, ಕೆಲ ದಿನಗಳಲ್ಲಿ ಹೊಸ ಠಾಣೆಗಳು ಕಾರ್ಯಾರಂಭಿಸಲಿವೆ.
-ಡಿ.ರೂಪ
ಪೊಲೀಸ್‌ ವರಿಷ್ಠಾಧಿಕಾರಿ, ಸೈಬರ್‌ ಕ್ರೈಂ ವಿಭಾಗ (ಸಿಐಡಿ)


ಕೃಪೆ: ಗಿರೀಶ್‌ಮಾದೇನಹಳ್ಳಿ | Sep 22, 2013

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com