ಫೋಟೋಗ್ರಫಿ ಇಸ್ಲಾಂ ಗೆ ವಿರುದ್ಧವಾದದ್ದಂತೆ!

ಸುದ್ದಿ: ಧಾರ್ಮಿಕ ನಂಬಿಕೆ, ಧರ್ಮ ಗ್ರಂಥದಲ್ಲಿನ ಪವಿತ್ರ ಸಂದೇಶಗಳನ್ನೆಲ್ಲಾ ತಮ್ಮ ಹಿತಾಸಕ್ತಿಗೆ ಬೇಕಾದಂತೆ ಅರ್ಥಮಾಡಿಕೊಳ್ಳುವುದು, ಅದನ್ನೇ ಊರಿಡೀ ಸಾರಿ ಸತ್ಯ ಎಂದು ಪ್ರತಿಪಾಧಿಸುವುದು, ಕೆಲವೊಮ್ಮೆ ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ಧರ್ಮದ ಸೆಂಟಿಮೆಂಟುಗಳನ್ನು ಬಳಸಿಕೊಂಡು ಕೆಲ ಕಿಡಿಗೇಡಿಗಳು ಕಾಂಜಿಪೀಂಜಿ ಜೀವನ ಸಾಗಿಸುತ್ತಿರುವ ನಡುವೆಯೇ, ಭಾರತದ ಪ್ರತಿಷ್ಟಿತ ಇಸ್ಲಾಂ ಬೋಧನಾ ಕೇಂದ್ರ ಎನ್ನಲಾದ ದರುಲ್ ಉಲುಮ್’ನ ಮುಖ್ಯಸ್ಥನೊಬ್ಬ ‘ಛಾಯಾಗ್ರಹಣ’ ಮಾಡುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾದುದು ಎಂದು ತಲೆಬಾಲ ಇಲ್ಲದ ಬೋದಾಳನಂತೆ ಮಾತನಾಡಿರುವುದು ಸ್ವತಃ ಇಸ್ಲಾಂ ಧಾರ್ಮಿಕ ಅನುಯಾಯಿಗಳನ್ನೇ ರೊಚ್ಚಿಗೆಬ್ಬಿಸಿದೆ.
ಇದು ಆಧುನಿಕ ಯುಗ ಸ್ವಾಮಿ: ಹಳೆಯ ಕಾಲದ ನಂಬಿಕೆಗಳನ್ನೆಲ್ಲಾ ತಾರ್ಕಿಕ ನಿಲುವುಗಳೊಂದಿಗೆ ಅಲೆದು ತೂಗಿಸಿ ಆಲೋಚಿಸಿ ಅನಗತ್ಯ ನಂಬಿಕೆ ಸಾರವನ್ನು ಕಸದ ಬುಟ್ಟಿಗೆ ಎಸೆದು ಕಾಲಕ್ಕೆ ತಕ್ಕಂತೆ ಧಾರ್ಮಿಕ ಸಾರವನ್ನು ಅನುಸರಿಸಿಕೊಂಡು ಹೋಗಲಾಗುತ್ತಿರುವ ಈ ವೈಜ್ಞಾನಿಕ ಯುಗದಲ್ಲೂ ಇಂತಹಾ ಹೇಳಿಕೆ ನೀಡುವ ಮೂಲಕ ಯುವ ಸಮುದಾಯವನ್ನು ಆಧುನಿಕ ಯುಗದ ಜೀವನ ಶೈಲಿಯಿಂದ ವಂಚಿಸಿ, ಪುಡುಗೋಷಿ ಪುರಾತನ ಅವೈಜ್ಞಾನಿಕ ಜೀವನದಲ್ಲಿ ಬಂಧಿಸಲು ನಡೆಸಲಾಗುತ್ತಿರುವ ವ್ಯವಸ್ಥಿತ ಸಂಚಿನ ವಿರುದ್ಧ ಪ್ರಜ್ಞಾವಂತ ನಾಗರೀಕರು ಕೆಂಗಣ್ಣು ಬೀರಿದ್ದಾರೆ.
ಹೀಗೆಲ್ಲಾ ಯಾವ ಧರ್ಮಗ್ರಂಥಗಳಲ್ಲಿ ಹೇಳಿದೆಯಣ್ಣಾ...ಛೇ!: ಮುಸಲ್ಮಾನರ ಪವಿತ್ರ ಧಾರ್ಮಿಕ ಕೇಂದ್ರವಾದ ಮೆಕ್ಕಾ ಮದೀನದಲ್ಲೇ ನಮಾಜ್ ಮಾಡುವುದರಿಂದ ಹಿಡಿದು ವಾಸ್ತುಶಿಲ್ಪಗಳ ವೈವಿಧ್ಯತೆಗಳನ್ನು ಟಿ.ವಿ.ನೇರಪ್ರಸಾರ, ಛಾಯಾಗ್ರಹಣಗಳ ಮೂಲಕ ಎಲ್ಲೆಡೆ ಪ್ರಚಾರ ಮಾಡುತ್ತಿರುವುದು ಜಗಜ್ಜಾಹೀರಾಗಿದ್ದರೂ, ಧರ್ಮದ ಹೆಸರಿನಲ್ಲಿ ಪೆದ್ದು ಪೆದ್ದು ಫತ್ವಾ ಹೊರಡಿಸಿರುವ ದರುಲ್ ಉಲುಮ್ ಧರ್ಮಶಾಲೆಯ ಧರ್ಮಾಂಧ ಧರ್ಮಗುರು ಮುಫ್ತಿ ಅಬ್ದುಲ್ ಖ್ವಾಸಿಮ್ ನಮೋನಿ, ಮತದಾರರ ಗುರುತಿನ ಚೀಟಿ ಮತ್ತು ಪಾಸ್’ಪೋರ್ಟ್ ಮಾಡಿಕೊಳ್ಳಲು ಮಾತ್ರ ಫೋಟೋ ತೆಗೆದುಕೊಳ್ಳಬೇಕೇ ಹೊರತು ಬೇರೆ ಯಾವುದೇ ಕಾರಣಕ್ಕೆ ಫೋಟೋ ತೆಗೆದುಕೊಂಡರೂ ಅದು ಪವಿತ್ರ ಇಸ್ಲಾಂ ಗೆ ವಿರುದ್ಧವಾದದೆಂದು ಉಪದೇಶ ನೀಡಿದ್ದಾರೆ.
ಇನ್ನೊಂದೆಜ್ಜೆ ಮುಂದೆ ಹೋಗಿ, ಮುಸಲ್ಮಾನರ ಮದುವೆ ಸಮಾರಂಭಗಳು ಹಾಗೂ ಅಲ್ಲಿನ ಧಾರ್ಮಿಕ ಆಚರಣೆಗಳಲ್ಲಿ ಕಂಡುಬರುವ ವೈಭವೋಪೇರಿತ ವಿಶಿಷ್ಟ ವಸ್ತ್ರಾಲಂಕಾರಗಳನ್ನು ಚಿರ ನೆನಪಿನಲ್ಲಿಡುವ ಸಲುವಾಗಿ ಮಾಡಿಟ್ಟುಕೊಳ್ಳುವ ವೀಡಿಯೋಗಳು ಅಥವಾ ಛಾಯಾಚಿತ್ರಗಳು ಕೂಡ ಇಸ್ಲಾಂ ಗೆ ವಿರುದ್ಧವಾದುದು ಎಂದಿದ್ದಾರೆ.
ಇಸ್ಲಾಂ ಧರ್ಮ ಹುಟ್ಟಿದ ನಾಡಲ್ಲೇ ಬಹುತೇಕರು ವಿಜ್ಞಾನಕ್ಕೆ ಹತ್ತಿರವಾದ ಜೀವನ ನಡೆಸುತ್ತಿರುವಾಗ ನಿಮಗೆಲ್ಲಿಂದ ಬಂತು ಈ ಬುದ್ಧಿಶಕ್ತಿ: ಇದೇ ವೇಳೆ, ಸೌದಿ ಅರೇಬಿಯಾದಂತಹಾ ಕಟ್ಟಾ ಇಸ್ಲಾಂ ರಾಷ್ಟ್ರಗಳಲ್ಲೇ ಅಂತಹಾ (ಫೋಟೋಗ್ರಫಿಗೆ ತಡೆ) ಆಚರಣೆಗಳಿಲ್ಲದಿದ್ದರೂ, ಇಂತಹಾ ಹುಸಿ ನಂಬಿಕೆಗಳನ್ನೇಕೆ ಅಮಾಯಕ ಜನರಲ್ಲಿ ಬಿತ್ತಲು ಯತ್ನಿಸುತ್ತೀರಿ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಮುಫ್ತಿ ಅಬ್ದುಲ್ ಖ್ವಾಸಿಮ್ ನಮೋನಿ, ಸೌದಿ ಅರೇಬಿಯಾ ರಾಷ್ಟ್ರ ಸ್ವತಃ ತನ್ನ ಅಗತ್ಯಗಳಿಗೆ ವೀಡಿಯೋ, ಛಾಯಾಗ್ರಹಣ ಮಾಡುತ್ತದೆಯಾದರೂ ಮತ್ತೊಬ್ಬರಿಗೆ ಅವಕಾಶ ನೀಡುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಅದಿರಲಿ, ಇಂಜಿನಿಯರಿಂಗ್ ಪದವಿ ಗಳಿಸಿದ ವಿದ್ಯಾರ್ಥಿಗೆ ಒಂಚೂರು ಸ್ವಂತ ಬುದ್ಧಿ ಬೆಳೆಸಲಾರದಷ್ಟು ಕಳಪೆಯಾಗಿದೆಯೇ ನಮ್ಮ ಶಿಕ್ಷಣ ವ್ಯವಸ್ಥೆ: ಇಂಜಿನಿಯರಿಂಗ್ ಪದವಿ ಮುಗಿಸಿದ್ದ ಹವ್ಯಾಸಿ ಛಾಯಾಗ್ರಾಹಕನೊಬ್ಬ ತನ್ನ ಆಸಕ್ತಿಗೆ ತಕ್ಕಂತೆ ಜೀವನ ರೂಪಿಸಿಕೊಳ್ಳಲು ಧರ್ಮ ತೊಡಕಾಗುತ್ತದೆಯೇ ಎಂಬ ಉದ್ದೇಶದಿಂದ ಮುಫ್ತಿ ಅಬ್ದುಲ್ ಖ್ವಾಸಿಮ್ ನಮೋನಿ ಬಳಿ ಹೋಗಿ ಉಪದೇಶ ಕೇಳಿದಕ್ಕೆ, ನೋಡಪ್ಪಾ ನೀನು ಇಂಜಿನಿಯರಿಂಗ್ ಪದವಿ ಮುಗುಸಿದ್ದೀಯ ಹಂಗಾಗಿ ಆ ಶೈಕ್ಷಣಿಕ ಅರ್ಹತೆಗೆ ತಕ್ಕ ಉದ್ಯೋಗವನ್ನೇ ಹುಡುಕಿ ಮಾಡು. ಅದನ್ನು ಬಿಟ್ಟು ಫೋಟೋಗ್ರಫಿ, ವೀಡಿಯೋಗ್ರಫಿ ಅಂತೆಲ್ಲಾ ಹೋಗಬೇಡ ಅದೆಲ್ಲಾ ಪವಿತ್ರ ಇಸ್ಲಾಂ ಧರ್ಮಕ್ಕೆ ವಿರೋಧವಾದುದು ಎಂದು ಕಿವಿಗೆ ಹೂವಿಡುವ ಯತ್ನ ನಡೆಸಿದ್ದಾರೆ.

ವಯಕ್ತಿಕ ಕಾನೂನು ಮಂಡಳಿಯಿಂದ ಬೆಂಬಲ: ಅಲ್ಲದೆ, ಮುಫ್ತಿ ಅಬ್ದುಲ್ ಖ್ವಾಸಿಮ್ ನಮೋನಿ ಅವರು ನೀಡಿರುವ ಫತ್ವಾವನ್ನು ಅಖಿಲ ಭಾರತ ಮುಸಲ್ಮಾನರ ವೈಯಕ್ತಿಕ ಕಾನೂನು ಮಂಡಳಿ ಕೂಡ ಬೆಂಬಲಿಸಿದ್ದು, ಯಾವುದೇ ಮನುಷ್ಯರ ಹಾಗೂ ಪ್ರಾಣಿಗಳ ಛಾಯಾಚಿತ್ರ ಅಥವಾ ವೀಡಿಯೋ ತೆಗೆಯುವುದನ್ನು ಇಸ್ಲಾಂ ಧರ್ಮ ವಿರೋಧಿಸುತ್ತದೆಯಲ್ಲದೆ, ಹಾಗೊಂದು ವೇಳೆ ತೆಗೆಯುವುದೇ ಆಗಿದ್ದಲ್ಲಿ, ಭಗವಂತನಿಗೆ ಉತ್ತರಿಸಬೇಕಾಗುತ್ತದೆ ಎಂದಿದ್ದಾರೆ ಮಂಡಳಿ ಮುಖ್ಯಸ್ಥ ಮುಫ್ತಿ ರಜಾಕಿ.

ಫೋಟೊ ತೆಗೆಯುವ ಮೊದಲು ದೇವರಲ್ಲಿ ಕ್ಷಮೆ ಕೇಳಲು ಮರೆಯಬಾರದು: ಇದೇ ರೀತಿಯ ಮೂಗು ತೂರಿಸುವ ಮತ್ತೊಂದು ಪ್ರಕರಣದಲ್ಲಿ ಮುಸಲ್ಮಾನ ವ್ಯಕ್ತಿಯೊಬ್ಬ ತನ್ನ ಸೇವೆಯ ಭಾಗವಾಗಿ (ರಾಜಕೀಯ ಅಂದುಕೊಂಡರೂ ಅಡ್ಡಿಯಿಲ್ಲಬಿಡಿ) ಕ್ಯಾಮರ ಮುಂದೆ ನಿಲ್ಲಬೇಕಾಗಿದ್ದು, ಅದು ಕೂಡ ಧರ್ಮಕ್ಕೆ ವಿರುದ್ಧವಾದುದೇ ಎಂದು ಸಲಹೆ ಕೇಳಿದ್ದಕ್ಕೆ, ಹೌದು ಅದು ಇಸ್ಲಾಮಿಗೆ ವಿರೋಧವೇ ಆಗಿದ್ದರೂ ನೀನು ಅಲ್ಲಾಹುವಿನ ಬಳಿ ಕ್ಷಮೆ ಕೇಳಿ ಆನಂತರ ನಿನ್ನ ಸೇವೆ, ಕರ್ತವ್ಯದಲ್ಲಿ ಮುಂದುವರೆಯಬಹುದು ಎಂದು ಉಪದೇಶ ನೀಡಿದ್ದಾರೆ.

ಇದೊಂದನ್ನು ಒಪ್ಪಬಹುದೇನೊ: ಇದೇ ವೇಳೆ ಸರ್ವಸಮ್ಮತವಾದ ಉಪದೇಶವೊಂದನ್ನು ನೀಡಿರುವ ಮುಫ್ತಿ ಅಬ್ದುಲ್ ಖ್ವಾಸಿಮ್ ನಮೋನಿ, ಅಕ್ರಮವಾಗಿ ಮಾಡುವ ಅಥವಾ ಮಾಡಲ್ಪಟ್ಟ ವೀಡಿಯೋಗಳಾಗಲೀ ಅಥವಾ ಲಿಖಿತ ಮಾಹಿತಿಗಳನ್ನಾಗಲೀ ವೀಕ್ಷಿಸುವುದು ಮತ್ತು ಓದುವುದು ಇಸ್ಲಾಮಿಗೆ ವಿರುದ್ಧವಾಗಿದ್ದು, ಹಾಗೊಂದು ವೇಳೆ ಅಂತಹಾ ವೀಡಿಯೋಗ್ರಫಿ, ಫೋಟೋಗ್ರಫಿಯಂತಹಾ ಸೃಜನಶೀಲ ಕ್ಷೇತ್ರಗಳು ತಮ್ಮ ಉದ್ಯೋಗದ ಭಾಗವಾಗಿದ್ದರೆ ಅದರಿಂದ ಬರುವ ಆದಾಯವನ್ನು ಅಕ್ರಮವಾದುದು ಎಂದು ಪರಿಗಣಿಸಲಾಗುವುದಿಲ್ಲ ಎಂದಿದ್ದಾರೆ.

ನಮ್ದರಲ್ಲಿ ಹಾಗೇನಿಲ್ಲ: ಫೋಟೋಗ್ರಫಿ ಇಸ್ಲಾಂ ಗೆ ವಿರುದ್ಧವಾದುದು ಎಂದು ಮುಫ್ತಿ ಅಬ್ದುಲ್ ಖ್ವಾಸಿಮ್ ನಮೋನಿ ಅವರು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಶಿಯಾ ಚಾಂದ್ ಸಮಿತಿ (ಶಿಯಾ ಪಂಗಡ) ಅಧ್ಯಕ್ಷ ಮುಫ್ತಿ ಸೈಫ್ ಅಬ್ಬಾಸ್, ನಮ್ಮ ಶಿಯಾ ಪಂಗಡದಲ್ಲಿ ಅಂಥದೇನೂ ಪಾಲನೆಗಳಿಲ್ಲ. ಜತೆಗೆ ಈ ಸಂಬಂಧ ತನ್ನ ಆತ್ಮೀಯನೂ ಆದ ಸುನ್ನಿ ಪಂಥದ ಅನುಯಾಯಿಯನ್ನ ವಿಚಾರಿಸಿದ್ದು, ಅವರು ಕೂಡ ಫೋಟೋಗ್ರಫಿ ಅಪರಾಧವಲ್ಲ ಎಂದು ಸ್ಪಷ್ಟವಾಗಿ ವಿವರಿಸಿರುವುದಾಗಿ ತಿಳಿಸಿದ್ದಾರೆ.

ಕಂಡಿದ್ದು ಕೇಳಿದ್ದನ್ನೆಲ್ಲಾ ಹಾಗೆಯೇ ನಂಬಲಿಕ್ಕಾ ನಿಮಗೆಲ್ಲಾ ಸರ್ಕಾರದಿಂದ ಶಿಕ್ಷಣ ಕೊಡಿಸಿದ್ದು...?: ಕೆಲವೊಂದು ಕುರುಡು ಧಾರ್ಮಿಕ ಸಂದೇಶಗಳನ್ನು ಅನುಸರಿಸಿಕೊಂಡು ಹೋಗಲು ಕೆಲವೊಮ್ಮೆ ಮಜಾವಾಗುತ್ತದೆಯಾದರೂ, ಅದೇ ಆಚರಣೆಗಳು ಕೆಲವರ ಜೀವನ, ಹೊಟ್ಟೆಪಾಡಿಗೆ ತೊಡಕಾಗಿ ಪರಿಣಮಿಸಿದಾಗ ಕನಿಷ್ಟ ಒಬ್ಬ ಪ್ರಜ್ಞಾವಂತ ನಾಗರೀಕನಾಗಿ ಅಂತಹಾ ಆಚರಣೆಗಳನ್ನು ಅಹಿಂಸಾತ್ಮಕವಾಗಿ ವಿರೋಧಿಸುವುದು ಅನಿವಾರ್ಯವಾಗಿರುತ್ತದೆ. ಇಲ್ಲದಿದ್ದರೆ, ಕಲಿತ ಶಿಕ್ಷಣ, ಅದಕ್ಕಾಗಿ ವಿನಿಯೋಗಿಸಿದ ಅಮೂಲ್ಯ ಸಮಯ, ಆ ಗುರುವಿನ ಬೋಧನೆಗಳೆಲ್ಲವನ್ನೂ ನಿರ್ಲಕ್ಷಿಸಿದಂತಾಗುತ್ತದೆ. ಹಂಗಾಗಿ, ಮೇಲಿನ ಈ ವಿದ್ಯಮಾನವನ್ನು ಗಮನಿಸಿ ನಿಮಗನಿಸಿದ್ದನ್ನು ಮುಕ್ತವಾಗಿ ಚರ್ಚಿಸಿ....ನೋಡುವ....
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com