ಸೆ.30ರಿಂದ ರಾಜ್ಯದಾದ್ಯಂತ ಎಲ್ಲಾ ಸ. ಪ್ರೌಢಶಾಲೆಗಳಲ್ಲಿ ಹೆಣ್ಮಕ್ಕಳಿಗೆ ಕರಾಟೆ ತರಬೇತಿ

ರಾಜ್ಯ: ಹೆಣ್ಣುಮಕ್ಕಳು ಪ್ರತಿಕೂಲ ಸನ್ನಿವೇಶಗಳಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಮರ್ಥರನ್ನಾಗಿ ಮಾಡುವ ದಿಶೆಯಲ್ಲಿ ರಾಜ್ಯದಾದ್ಯಂತ ಸರಕಾರಿ ಪ್ರೌಢಶಾಲೆಗಳಲ್ಲಿ ಸೆ. 30ರಿಂದ ಕರಾಟೆ ತರಬೇತಿ ಪ್ರಾರಂಭವಾಗಲಿದೆ. ರಾಜ್ಯದ 4,442 ಪ್ರೌಢಶಾಲೆಗಳಲ್ಲಿ ಇದು ಜಾರಿಗೆ ಬರಲಿದೆ.

ಪ್ರಸ್ತುತ ಹೆಣ್ಣು ಮಕ್ಕ‌Rಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅವರಲ್ಲಿ ಸ್ವಯಂರಕ್ಷಣೆ ಕೌಶಲವನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಕರಾಟೆ ತರಬೇತಿಯನ್ನು ಆಯೋಜಿಸಲಾಗಿದೆ. ಇದಕ್ಕಾಗಿ ಒಟ್ಟು 66.63 ಲಕ್ಷ ರೂ. ಅನುದಾನ ಮಂಜೂರಾಗಿದೆ.

ದೈಹಿಕ ಶಿಕ್ಷಣ ಶಿಕ್ಷಕರ ನಿಯೋಜನೆ

ಪ್ರತಿ ಶಾಲೆಗೆ ಹೋಗಿ ಕರಾಟೆ ಕಲಿಸುವಷ್ಟು ತರಬೇತಿದಾರರು ಲಭ್ಯವಿರದ ಹಾಗೂ ಕರಾಟೆಯನ್ನು ನಿಯಮಿತವಾಗಿ ಶಾಲಾ ಅವಧಿಯಲ್ಲಿ ಕಲಿಸುವ ಮೂಲಕ ದೈಹಿಕ ಶಿಕ್ಷಣದ ಒಂದು ಭಾಗವನ್ನಾಗಿ ಮಾಡುವ ನಿಟ್ಟಿನಲ್ಲಿ ಆಯಾಯ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರಿಗೆ ಕರಾಟೆ ತರಬೇತಿ ನೀಡಿ ಅವರ ಮೂಲಕ ವಿದ್ಯಾರ್ಥಿನಿಯರಿಗೆ ಈ ಕೌಶಲವನ್ನು ಕಲಿಸಲಾಗುತ್ತದೆ. ದೈಹಿಕ ಶಿ. ಶಿಕ್ಷಕರು ಇಲ್ಲದ ಶಾಲೆಗಳಲ್ಲಿ ಬೇರೆ ಉತ್ಸಾಹಿ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ. ಈಗಾಗಲೇ ಶಿಕ್ಷಕರ ಆಯ್ಕೆ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಕ್ಷೇತ್ರ ಶಿಕ್ಷಣಾಧಿಕಾರಿ ಬ್ಲಾಕ್‌ ಹಂತದಲ್ಲಿ ಸೆ.16ರಿಂದ ತರಬೇತಿ ಪ್ರಾರಂಭವಾಗಲಿದೆ. ಸೆ.28ರ ವರೆಗೆ ಒಟ್ಟು 12 ದಿನಗಳ ಕಾಲ ತರಬೇತಿ ನಡೆಯಲಿರುವುದು.

ಪ್ರತಿ ವಾರಕ್ಕೆ 2 ಅವಧಿ

ಪ್ರತಿ ವಾರಕ್ಕೆ 2 ಅವಧಿಗಳನ್ನು ಕರಾಟೆ ತರಬೇತಿಗೆ ಮೀಸಲಿಡಲಾಗುತ್ತದೆ. ದೈಹಿಕ ಶಿಕ್ಷಣಕ್ಕೆ ಮೀಸಲಾದ ಒಂದು ಅವಧಿ ಮತ್ತು ಸಂಗೀತ, ಕ್ರಾಫ್ಟ್ ಹಾಗೂ ಚಿತ್ರಕಲೆಯಲ್ಲಿ ಒಂದು ಅವಧಿ ಬಳಸಿ ಕಲಿ
ಸಲು ಶಾಲಾವೇಳಾಪಟ್ಟಿಯಲ್ಲಿ ಅವಕಾಶ ಕಲ್ಪಿಸಲು ಸೂಚಿಸಲಾಗಿದೆ. ತರಬೇತಿ ಪಡೆದ ಶಿಕ್ಷಕರು ಮೇಲೆ ವಿವರಿಸಿರುವ ಅವಧಿಗಳನ್ನು ಬಳಸಿ ಒಟ್ಟು 30 ಅವಧಿಗಳ ತರಬೇತಿ ಕೋರ್ಸ್‌ಗಳನ್ನು ನಡೆಸಬೇಕು. ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡುವಾಗ ಬಾಲಕರಿಗೆ ವೇಳಾಪಟ್ಟಿಯಲ್ಲಿರುವ ವಿಷಯಗಳ ಬೋಧನೆಗೆ ಭಂಗಬಾರದಂತೆ ಕಲಿಕೆ ಮುಂದುವರಿಸುವಂತೆ ಗಮನಹರಿಸಲು ಸೂಚನೆ ನೀಡಲಾಗಿದೆ.

ಕೌಶಲ ತಂತ್ರಗಳ ಆಯ್ಕೆ

ತರಬೇತಿಯ ಅವಧಿಯಲ್ಲಿ ಕಲಿಸಬೇಕಾದ ವಿಷಯಗಳ ಸೂಚಿ ಹಾಗೂ ಅಗತ್ಯ ಕೌಶಲತಂತ್ರಗಳ ಕುರಿತ ಯೋಜನೆಯನ್ನು ರಾಷ್ಟಿÅàಯ ಮಾಧ್ಯಮಿಕ ಶಿಕ್ಷಣ ಅಭಿಯಾನ ರಾಜ್ಯ ಯೋಜನಾ ನಿರ್ದೇಶಕರ ಕಚೇರಿ ಗುರುತಿಸಲ್ಪಟ್ಟ ಕರಾಟೆ ಸಂಘಟನೆಗಳು ರಚಿಸಿ ಸಲ್ಲಿಸಲಿವೆ.

ಪುನಶ್ಚೇತನ ತರಬೇತಿ

ಕರಾಟೆ ತರಬೇತಿ ಪಡೆದ ಶಿಕ್ಷಕರಿಗೆ ಡಿಸೆಂಬರ್‌ ಹಾಗೂ 2014ರ ಫೆಬ್ರವರಿಯಲ್ಲಿ ಪುನಶ್ಚೇತನ ತರಬೇತಿಯನ್ನು ಬ್ಲಾಕ್‌ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಯೋಜಿಸಬೇಕು.ಈ ತರಬೇತಿಯಲ್ಲಿ ಹಿಂದೆ ಪಡೆದ ತರಬೇತಿಯ ಕಲಿಕೆಯ ದೃಢೀಕರಣ, ಸಂಶಯಗಳ ನಿವಾರಣೆ, ಹೊಸ ಕೌಶಲಗಳ ಕಲಿಕೆ, ತರಬೇತಿ ಪಡೆದ ವಿದ್ಯಾರ್ಥಿನಿಯರಿಂದ ಕರಾಟೆ ಕೌಶಲಗಳ ಪ್ರದರ್ಶನ ಮುಂತಾದ ವಿಷಯಗಳು ಒಳಗೊಂಡಿರಬೇಕು ಎಂದು ಸೂಚಿಸಲಾಗಿದೆ.

ವಿದ್ಯಾರ್ಥಿನಿಯರಿಗೆ ಶಾಲೆಯ ಬಿಡುವಿನ ವೇಳೆಯಲ್ಲಿ ಮತ್ತು ಶಾಲಾವಧಿಯ ಅನಂತರ ಮನೆಯಲ್ಲಿ ಕರಾಟೆಯನ್ನು ನಿಯಮಿತವಾಗಿ ಅಭ್ಯಾಸ ಮಾಡುವಂತೆ ಸೂಚಿಸುವ ಮೂಲಕ ವಿದ್ಯಾರ್ಥಿನಿಯರು ಸ್ವಯಂ ರಕ್ಷಣ ಕೌಶಲವನ್ನು ಹೊಂದುವಂತೆ ಪ್ರೇರಣೆ ನೀಡಬೇಕು ಎಂದು ತಿಳಿಸಲಾಗಿದೆ.

ವರದಿ ಸಲ್ಲಿಕೆ

ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿನಿಯರಿಂದ ಕರಾಟೆ ಕಲಿಕೆ, ಕಲಿಕೆಯ ಪರಿಣಾಮ ಹಾಗೂ ಅನಿಸಿಕೆಗಳ ಕುರಿತ ಪೋಟೋ ಸಹಿತ ಸಂಕ್ಷಿಪ್ತ ವರದಿಯನ್ನು ರಾಜ್ಯ ಕಚೇರಿಗೆ 2014 ಮಾರ್ಚ್‌ನೊಳಗೆ ಸಲ್ಲಿಸಬೇಕಾಗಿದೆ.

ಕೃಪೆ: ಕೇಶವ ಕುಂದರ್‌ | Sep 13, 2013
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com