ಕೆದೂರು ಗ್ರಾಮದಲ್ಲಿ ಡಂಪಿಂಗ್ ಯಾರ್ಡ್: ಗ್ರಾಮಸ್ಥರಿಂದ ವಿರೋಧ

ಕುಂದಾಪುರ: ಕೆದೂರು ಗ್ರಾಮದ ಜನವಸತಿ ಇರುವ 2 ಎಕರೆ ಪ್ರದೇಶದಲ್ಲಿ ಸಾಲಿಗ್ರಾಮ ಪ. ಪಂ. ಡಂಪಿಂಗ್ ಯಾರ್ಡ್ ಮಾಡಲು ಹೊರಟಿರುವ ಜಿಲ್ಲಾಡಳಿತ ಸರ್ವಾಧಿಕಾರಿ ನಿಲುವು ತೋರುತ್ತಿದೆ. ಕೊಳಚೆ ಎಸೆಯುವ ಮೊದಲು ಸ್ಥಳೀಯರು ಮತ್ತು ಸ್ಥಳೀಯಾಡಳಿತದೊಂದಿಗೆ ಸಮಾಲೋಚನೆ ನಡೆಸಬೇಕೆಂಬ ಕನಿಷ್ಠ ನಿಲುವು ಬದಿಗೆ ಸರಿಸಿ ಏಕಾಏಕಿ ಡಂಪಿಂಗ್‌ಯಾರ್ಡ್ ನಿರ್ಮಿಸುವಲ್ಲಿ ಮುಂದಾಗಿದೆ. ಕೆದೂರು, ಉಳ್ತೂರು, ಬೇಳೂರು ಗ್ರಾಮಸ್ಥರು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದಾರೆ. 

ಪಟ್ಟಾ ಭೂಮಿ ಹೊಂದಿರುವ, ಕೃಷಿ ಮನೆ ನಿವೇಶನ ಇರುವ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಸಲ್ಲ. ಬಹುಸಂಖ್ಯಾತ ಗ್ರಾಮಸ್ಥರ ಆಗ್ರಹಕ್ಕೆ ಮನ್ನಣೆ ನೀಡದೆ ಜಿಲ್ಲಾಡಳಿತ ಡಂಪಿಂಗ್‌ಯಾರ್ಡ್ ನಿರ್ಮಾಣಕ್ಕೆ ಮುಂದಾದಲ್ಲಿ ಅದು ಗ್ರಾಮಸ್ಥರ ಸಮಾಧಿ ಮೇಲೆ ಮಾಡಬೇಕಾದೀತು ಎಂದು ತಾಲೂಕು ಪಂಚಾಯಿತಿ ಸದಸ್ಯ ಕೆದೂರು ಸದಾನಂದ ಶೆಟ್ಟಿ ಎಚ್ಚರಿಸಿದ್ದಾರೆ. ಗುರುವಾರ ಬೆಳಗ್ಗೆ ಇಲ್ಲಿನ ತಾ.ಪಂ. ಸಭಾಭವನದಲ್ಲಿ ಜರುಗಿದ ತಾ.ಪಂ. ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಕೆದೂರಿನಲ್ಲಿ ಯಾವುದೇ ಕಾರಣಕ್ಕೂ ಡಂಪಿಂಗ್‌ಯಾರ್ಡ್ ನಿರ್ಮಿಸಲು ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. 

ಸದಸ್ಯ ಕಾಳಾವರ ದೀಪಕ್‌ಕುಮಾರ ಶೆಟ್ಟಿ ಮಾತನಾಡಿ, ಕುಂದಾಪುರ ಪುರಸಭೆ ಕೋಣಿ ಗ್ರಾಮದಲ್ಲಿ ಎಸೆಯುತ್ತಿರುವ ಉಂಟಾಗಿರುವ ತೊಂದರೆ ಕಂಡಾಗ ಯಾವ ಪ್ರದೇಶದಲ್ಲೂ ಡಂಪಿಂಗ್ ಯಾರ್ಡ್ ಸಹವಾಸ ಬೇಡ ಎಂಬಂತಾಗಿದೆ ಎಂದರು. 

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಭಾಸ್ಕರ ಬಿಲ್ಲವ ಮಾತನಾಡಿ ಕಂದಾವರ ಡಂಪಿಂಗ್‌ಯಾರ್ಡ್ ಸೃಷ್ಟಿಸಿದ ಬಳಿಕ ಸ್ಥಳೀಯ ಜನರ ಬದುಕು ದುರ್ಬರ ಆಗಿದೆ. ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತೇವೆ ಎಂದು ಭರವಸೆ ನೀಡಿ ವಂಚಿಸಲಾಗಿದೆ. ಕುಂದಾಪುರ ನಗರವಲ್ಲದೆ ಬೇರೆ ಬೇರೆ ಕಡೆಗಳಿಂದ ತ್ಯಾಜ್ಯ ತಂದು ಎಸೆಯಲಾಗುತ್ತಿದೆ. ಪರಿಸರದ ಜನರು ಊಟ ಮಾಡಲಾಗದ ಪರಿಸ್ಥಿತಿ ಎದುರಾಗಿದೆ ಎಂದು ವಿವರಿಸಿದರು. ಸದಸ್ಯರ ಅಹವಾಲು ಆಲಿಸಿದ ತಹಸೀಲ್ದಾರ ಗಾಯತ್ರಿ ಎನ್. ನಾಯಕ್ ಆಕ್ಷೇಪಣೆ ಇರುವ ಬಗ್ಗೆ ಜಿಲ್ಲಾಡಳಿತಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು. 

ಮೀನುಗಾರರಿಗೆ ಸೀಮೆಎಣ್ಣೆ ನೀಡಿ: ಸೆಪ್ಟಂಬರ್ ತಿಂಗಳಲ್ಲಿ ಮೀನುಗಾರರಿಗೆ ಸಬ್ಸಿಡಿ ಸೀಮೆಎಣ್ಣೆ ನೀಡಬೇಕಾಗಿದ್ದರೂ ಈತನಕ ವಿತರಣೆ ನಡೆದಿಲ್ಲ. ತಕ್ಷಣ ಮೀನುಗಾರರಿಗೆ ಸೀಮೆಎಣ್ಣೆ ವಿತರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯ ಮಂಜು ಬಿಲ್ಲವ ಒತ್ತಾಯಿಸಿದರು. ಸೀಮೆಎಣ್ಣೆ ರಹದಾರಿ ಪರಿಶೀಲನೆ ಕಾರ್ಯ ನಡೆದಿದೆ. ಏಕರೂಪ ವಿತರಣೆಗೆ ಸರಕಾರ ಕ್ರಮ ತೆಗೆದುಕೊಂಡಿದೆ. ಸರಕಾರಿ ನಿರ್ದೇಶನ ಬಂದ ಬಳಿಕ ವಿತರಣೆಗೆ ಕ್ರಮ ತೆಗೆದುಕೊಳ್ಳುವುದಾಗಿ ತಹಸೀಲ್ದಾರ್ ತಿಳಿಸಿದರು. 

ಗುಲ್ಲೆಬ್ಬಿಸಿದ ಗುಲ್ವಾಡಿ ಕಾಂಕ್ರೀಟ್ ರಸ್ತೆ ಕಾಮಗಾರಿ: ಕರ್ಕುಂಜೆ ಗ್ರಾಮದ ಗುಲ್ವಾಡಿ ಕಾಂಕ್ರೀಟ್ ರಸ್ತೆ ಕಾಮಗಾರಿ ಜರ್ಜರಿತ ವಿಷಯ ಸಭೆಯಲ್ಲಿ ಭಾರಿ ಗುಲ್ಲೆಬ್ಬಿಸಿತು. ಕಾಂಕ್ರೀಟ್ ರಸ್ತೆಯಲ್ಲಿ ಯೂ ಹೊಂಡ ಎಂಬ ಶೀರ್ಷಿಕೆಯಡಿ ವಿಕ ರಸ್ತೆ ಕಾಮಗಾರಿಯ ಕುರಿತು ಇತ್ತೀಚೆಗಷ್ಟೇ ಬೆಳಕು ಚೆಲ್ಲಿತ್ತು. ವಿಷಯ ಪ್ರಸ್ತಾಪಿಸಿದ ಹಿರಿಯ ಸದಸ್ಯರಾದ ಆಲೂರು ಮಂಜಯ್ಯ ಶೆಟ್ಟಿ, ಕೆದೂರು ಸದಾನಂದ ಶೆಟ್ಟಿ, ಪ್ರದೀಪ್‌ಕುಮಾರ ಶೆಟ್ಟಿ, ಪ್ರದೀಪಚಂದ್ರ ಶೆಟ್ಟಿ, ಶಶಿಕಲಾ, ರಾಜು ಪೂಜಾರಿ ಕಾಮಗಾರಿಯ ತನಿಖೆಗೆ ಆಗ್ರಹಿಸಿದರು. 

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಡೆದಿರುವ ಈ ಕಾಮಗಾರಿ ಸಂಪೂರ್ಣ ಹದಗೆಟ್ಟಿದೆ. ಎಂಜಿನಿಯರಿಂಗ್ ವಿಭಾಗದ ಹಿರಿಯ ಅಧಿಕಾರಿಗಳು ಆಗಮಿಸಿ ಸ್ಪಷ್ಟನೆ ನೀಡಬೇಕು ಎಂದು ಸದಸ್ಯರು ಪಟ್ಟು ಹಿಡಿದರು. ಮುಂದಿನ ಸಭೆಗೆ ಅವರು ಆಗಮಿಸಿ ಮಾಹಿತಿ ನೀಡುವ ನಿರ್ಣಯ ತೆಗೆದುಕೊಳ್ಳಲಾಯಿತು. 

ಜಲಾನಯನ ಬ್ರಹ್ಮಾಂಡ ಭ್ರಷ್ಟಾಚಾರ: ತಾಲೂಕಿನಲ್ಲಿ ಜಲಾನಯನ ಇಲಾಖೆ ವತಿಯಿಂದ ನಡೆದಿರುವ ಕಾಮಗಾರಿಗಳಲ್ಲಿ ಬ್ರಹ್ಮಾಂಡ ಭಷ್ಟಾಚಾರ ನಡೆದಿದೆ. ಇದಕ್ಕೆ ಫಲಾನುಭವಿಗಳೇ ಸಾಕ್ಷಿ. ಪ್ರತಿ ಗ್ರಾಮದಲ್ಲಿಯೂ ಜಲಾನಯನ ಇಲಾಖೆ ವಿರುದ್ಧ ಜನರು ದಂಗೆ ಏಳುತ್ತಿದ್ದಾರೆ. ಇನ್ನಾದರೂ ಇಲಾಖೆ ಎಚ್ಚೆತ್ತುಕೊಂಡು ನ್ಯಾಯಯುತ ಕೆಲಸ ಮಾಡಬೇಕು ಎಂದು ಸದಸ್ಯ ನವೀನ್‌ಚಂದ್ರ ಶೆಟ್ಟಿ ಎಚ್ಚರಿಸಿದರು. 

ಪ್ರಾಧಿಕಾರ ಸಂಕಷ್ಟ: ಭೂ ಪರಿವರ್ತನೆಗಾಗಿ ಪಂಚಾಯಿತಿ ಮಟ್ಟದಲ್ಲಿ ಪ್ರಾಧಿಕಾರದ ಮೂಲಕ ಕಾರ್ಯನಿರ್ವಹಿಸಬೇಕೆಂಬ ನಿಲುವಿನಿಂದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇ-ಸೊತ್ತು ಸಾಪ್ಟ್‌ವೇರ್‌ನಿಂದಲೂ ಸಮಸ್ಯೆ ಉದ್ಭವವಾಗಿದೆ. ಕಂದಾಯ ಇಲಾಖೆ ಗಮನಹರಿಸಬೇಕು ಎಂದು ಸದಸ್ಯ ರಾಮು ಶೇರೆಗಾರ್ ಆಗ್ರಹಿಸಿದರು. ತಾ.ಪಂ. ಅಧ್ಯಕ್ಷೆ ದೀಪಿಕಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಹೇಮಾವತಿ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮೊಗವೀರ, ತಹಸೀಲ್ದಾರ್ ಗಾಯತ್ರಿ ಎನ್. ನಾಯಕ್ ಉಪಸ್ಥಿತರಿದ್ದರು.

ವರದಿ ಕೃಪೆ: ವಿಕ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com