ಉಳ್ತೂರು ಡಂಪಿಂಗ್ ಯಾರ್ಡ್ ಅವೈಜ್ಞಾನಿಕ: ಕೇಶವ ಕೋಟೇಶ್ವರ


ಕುಂದಾಪುರ: ಕೆದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಳ್ತೂರಿನಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯ್ತಿಯ ತ್ಯಾಜ್ಯ ವಿಲೇವಾರಿಗಾಗಿ ನಿರ್ಮಿಸಲು ಉದ್ದೇಶಿಸಿರುವ ಡಂಪಿಂಗ್ ಯಾರ್ಡ್ ಅವೈಜ್ಞಾನಿಕವಾಗಿದೆ. ಜನವಸತಿ ಪ್ರದೇಶದ ಸನಿಹದಲ್ಲಿ ಕೇವಲ 2 ಎಕ್ರೆ ಭೂಪ್ರದೇಶದಲ್ಲಿ ಈ ಡಂಪಿಂಗ್ ಯಾರ್ಡ್ ರಚಿಸಲು ಜಿಲ್ಲಾಡಳಿತ ಮುಂದಾಗಿರುವುದು ಸಮಂಜಸವಲ್ಲ. ಒಂದು ಪ್ರದೇಶದ ಕಸ ವಿಲೇವಾರಿಗೆ ಇನ್ನೊಂದು ಪ್ರದೇಶದ ಜನರ ಪ್ರಾಣವನ್ನೇ ಒತ್ತೆಯಿಡಬೇಕೆಂದರೆ ಇದು ಯಾವ ನ್ಯಾಯ. ಯಾವುದೇ ಕಾರಣಕ್ಕೂ ಉಳ್ತೂರಿನಲ್ಲಿ ಡಂಪಿಂಗ್ ಯಾರ್ಡ್ ನಿರ್ಮಿಸಲು ಅವಕಾಶ ನೀಡಕೂಡದು ಎಂದು ಸ್ಫೂರ್ತಿಧಾಮದ ಮುಖ್ಯಕಾರ್ಯನಿರ್ವಾಹಕ ಡಾ. ಕೇಶವ ಕೋಟೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
      ಕುಂದಾಪುರ ತ್ಯಾಜ್ಯ ವಿಲೇವಾರಿಗೆ ಕಂದಾವರದಲ್ಲಿ 25 ಎಕ್ರೆಗೂ ಅಧಿಕ ಭೂಮಿ ಮೀಸಲಿಟ್ಟು ಯಾರ್ಡ್ ನಿರ್ಮಿಸಿದರೂ ಅಲ್ಲಿಯ ಜನರ ಭವಣೆ ತೀರಿಲ್ಲ. ಕುಂದಾಪುರದ ತ್ಯಾಜ್ಯಕ್ಕೆ 25 ಎಕ್ರೆ ಭೂಮಿಯೂ ಸಾಲದಿರುವಾಗ ಸಾಲಿಗ್ರಾಮದ ತ್ಯಾಜ್ಯಕ್ಕೆ 2 ಎಕ್ರೆ ಭೂಮಿ ಹೇಗೆ ಸಾಲುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.
       ಸಾಲಿಗ್ರಾಮ ವ್ಯಾಪ್ತಿಯ ಕಾರ್ಕಡದಲ್ಲಿ ನೂರಾರು ಎಕ್ರೆ ಸರ್ಕಾರಿ ಭೂಮಿ ಇದ್ದಾಗ್ಯೂ ಉಳ್ತೂರಿನಲ್ಲಿ 2 ಎಕ್ರೆ ಖಾಸಗಿ ಭೂಮಿ ಖರೀದಿಸಿ ಯಾರ್ಡ್ ನಿರ್ಮಿಸುವುದರ ಹಿಂದಿನ ರಾಜಕೀಯ ಉದ್ದೇಶವೇನು? ಈಗ ಉಳ್ತೂರಿನಲ್ಲಿ ನಿರ್ಮಿಸಲು ಹೊರಟಿರುವ ಯಾರ್ಡ್‍ನ ಹತ್ತಿರದಲ್ಲಿ ಜನವಸತಿ ಇದೆ, ದೇವಸ್ಥಾನ ಇದೆ, ಸ್ಫೂರ್ತಿಧಾಮದಂತಹ ಪುನರ್ವಸತಿ ಕೇಂದ್ರದಲ್ಲಿ ನೂರಾರು ಜನ ವಾಸ್ತವ್ಯವಿದ್ದಾರೆ. ಇವೆಲ್ಲವೂ ಗಮನದಲ್ಲಿದ್ದು ಜಿಲ್ಲಾಡಳಿತ ಈ ಪರಿಸರವನ್ನೇ ಆಯ್ಕೆ ಮಾಡಿ ಜನಾಭಿಪ್ರಾಯವನ್ನೂ ಬದಿಗೊತ್ತಿ ಒತ್ತಾಯದಿಂದ ಯಾರ್ಡ್ ನಿರ್ಮಾಣಕ್ಕೆ ಮುಂದಾಗಿರುವುದೇಕೆ? ಎಂದು ಅವರು ಜಿಲ್ಲಾಡಳಿತವನ್ನು ಕೇಳಿದ್ದಾರೆ.  ತಕ್ಷಣಕ್ಕೆ ಯಾರ್ಡ್ ನಿರ್ಮಾಣದ ಯೋಜನೆಯಿಂದ ಹಿಂದೆ ಸರಿಯದಿದ್ದರೆ ಜಿಲ್ಲಾಡಳಿತ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದವರು ತಿಳಿಸಿದ್ದಾರೆ. 
      ಸಾಲಿಗ್ರಾಮ ಪಟ್ಟಣ ಪಂಚಾಯ್ತಿಯ ತ್ಯಾಜ್ಯ ವಿಲೇವಾರಿಗೆ ಉಳ್ತೂರಿನಲ್ಲೇ ಡಂಪಿಂಗ್ ಯಾರ್ಡ್ ನಿಮಿಸಬೇಕೆಂದಿದ್ದರೆ ಅದು ಕೇವಲ 2 ಎಕ್ರೆ ಭೂ ಪ್ರದೇಶದಲ್ಲಿ ಸಾಧ್ಯವಿಲ್ಲ. ಜೊತೆಗೆ ಈಗ ಪಟ್ಟಣ ಪಂಚಾಯತ್ ಖರೀದಿಸಿರುವ 2 ಎಕ್ರೆ ಭೂಮಿಯ ಹತ್ತಿರ ಅರಣ್ಯ ಇಲಾಖೆಗೆ ಸೇರಿದ ಗೇರು ಅಭಿವೃದ್ಧಿಪಡಿಸುತ್ತಿರುವ  12 ಎಕ್ರೆ ಸ್ಥಳವಿದೆ. ಅಲ್ಲೇ ತಾಗಿ ಖಾಸಗಿಯವರಿಗೆ ಸರ್ಕಾರ ನೀಡಿದ 4 ಎಕ್ರೆ ದರ್ಕಾಸ್ತು ಭೂಮಿ ಇದೆ. ಅದರಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಇವೆರಡನ್ನೂ ವಶಕ್ಕೆ ಪಡೆದು ಒಟ್ಟು 18 ಎಕ್ರೆ ಭೂಮಿಗೆ ಸುತ್ತಲೂ ಕನಿಷ್ಠ 10 ಅಡಿ ಎತ್ತರದ ತಡೆಗೋಡೆ (ಪಾಗಾರ) ನಿರ್ಮಿಸಿ ನಂತರ ವೈಜ್ಞಾನಿಕವಾಗಿ ತ್ಯಾಜ್ಯವನ್ನು ವಿಲೇವಾರಿ ಮಾಡುವುದಿದ್ದರೆ ಯಾರೂ ತಡೆಯುವಂತಿಲ್ಲ. ಅದು ಬಿಟ್ಟು ಯಾರೋ ಖಾಸಗಿಯವರಿಂದ 2 ಎಕ್ರೆ ಸ್ಥಳ ಖರೀದಿಸಿ ಅಲ್ಲಿಂದ ಇಲ್ಲಿಗೆ ತ್ಯಾಜ್ಯ ತಂದು ಸುರಿಯುವುದಕ್ಕೆ ಈ ಪರಿಸರದ ಜನ ಬಿಡಲಾರರು ಎಂದು ಡಾ. ಕೋಟೇಶ್ವರ ತಿಳಿಸಿದ್ದಾರೆ.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com