ಹಾಲು ಇಂದಿನಿಂದ ದುಬಾರಿ: ಲೀಟರ್‌ಗೆ 2 ರೂ. ಏರಿಕೆ

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿಯು ನಿರೀಕ್ಷೆಯಂತೆ ಬುಧವಾರದಿಂದ ಪ್ರತಿ ಲೀ. ಹಾಲಿನ ದರದಲ್ಲಿ ಎರಡು ರೂ. ಏರಿಕೆ ಮಾಡಿದ್ದು, ಮೂಲಸೌಕರ್ಯಗಳ ಅಭಿವೃದ್ಧಿ ಭಾರವನ್ನು ಗ್ರಾಹಕರ ತಲೆ ಮೇಲೆ ಹೇರಿದೆ.

ಹಾಲು ಸಂಗ್ರಹ ಹೆಚ್ಚುತ್ತಿರುವುದರಿಂದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಏರಿಕೆಯಾಗುತ್ತಿರುವ ನಿರ್ವಹಣೆ ವೆಚ್ಚದಿಂದ ಪ್ರತಿ ಲೀ. ಹಾಲಿನ ಬೆಲೆಯಲ್ಲಿ 2 ರೂ. ಏರಿಕೆ ಮಾಡುವುದು ಅನಿವಾರ್ಯ. ನೂತನ ದರ ಸೆ.11ರಿಂದಲೇ ಜಾರಿಯಾಗುತ್ತದೆ ಎಂದು ಕೆಎಂಎಫ್ ಮಾರುಕಟ್ಟೆ ನಿರ್ದೇಶಕ ರವಿಕುಮಾರ್ ಕಾಕಡೆ ಹೇಳಿದ್ದಾರೆ.

ಬುಧವಾರದಿಂದ ನಂದಿನಿ ಟೋನ್ಡ್ (ಸಾಮಾನ್ಯ) ಹಾಲಿನ ಬೆಲೆ 27ರಿಂದ 29 ರೂ., ಡಬಲ್ ಟೋನ್ಡ್ ಮಿಲ್ಕ್ 26ರಿಂದ 28 ರೂ., ಹೊಮೊಜಿನೈಜ್ಡ್ ಹಾಲಿನ ಬೆಲೆ 28ರಿಂದ 30 ರೂ., ಹೊಮಿಜಿನೈಜ್ಡ್ ಕೌ ಮಿಲ್ಕ್ 31ರಿಂದ 33 ರೂ., ಶುಭಂ (ಸ್ಟ್ಯಾಂಡರ್ಡೈಜ್ಡ್ ಮಿಲ್ಕ್) 33ರಿಂದ 35 ರೂ., ಶುಭಂ (ಸ್ಟ್ಯಾಂಡರ್ಡೈಜ್ಡ್ ಹೊಮೊಜಿನೈಜ್ಡ್ ಮಿಲ್ಕ್) 34ರಿಂದ 36 ರೂ., ಸಮೃದ್ಧಿ (ಎಫ್‌ಸಿಎಂ) 36ರಿಂದ 38 ರೂ. ಹಾಗೂ ಅರ್ಧ ಲೀ. ಮೊಸರಿನ ಬೆಲೆ 17ರಿಂದ 18 ರೂ. ಆಗುತ್ತದೆ. 50 ಪೈಸೆ ಚಿಲ್ಲರೆ ಸಮಸ್ಯೆ ತಪ್ಪಿಸಲು ಅರ್ಧ ಲೀ. ಹಾಲಿನ ಬೆಲೆಗಳಲ್ಲಿ 15-20 ಎಂ.ಎಲ್ ಪ್ರಮಾಣ ಹೆಚ್ಚಿಸಿ ರೂ.ಗೆ ಸಮನಾಗಿಸುವ ಪದ್ಧತಿಯನ್ನು ಮುಂದುವರಿಸಲಾಗಿದೆ.

ದರ ಏರಿಕೆಗೆ ಏನು ಕಾರಣ?

ಪ್ರಸಕ್ತ ವರ್ಷದಲ್ಲಿ ಆರು ಬಾರಿಗೂ ಹೆಚ್ಚು ಡೀಸೆಲ್ ಮತ್ತು ಪೆಟ್ರೋಲಿಯಂ ದರಗಳು ಏರಿಕೆಯಾಗಿವೆ. ಈ ಹಿನ್ನೆಲೆಯಲ್ಲಿ ಕೆಎಂಎಫ್, ಒಕ್ಕೂಟಗಳು ದಿನಕ್ಕೆರಡು ಬಾರಿ ಸಂಗ್ರಹಿಸುವ ಹಾಲಿನ ಸಾಗಣಿಕೆ ವೆಚ್ಚವೂ ಹೆಚ್ಚಳವಾಗಿದೆ. ಪ್ರತಿದಿನ ಒಟ್ಟಾರೆ 2.55 ಲಕ್ಷ ಕಿ.ಮೀ ಕ್ರಮಿಸಲಾಗುತ್ತಿದ್ದು, 41.54 ಲಕ್ಷ ರೂ. ವೆಚ್ಚವಾಗುತ್ತಿದೆ. ಇದಲ್ಲದೆ, ಪ್ಯಾಕಿಂಗ್ ಫಿಲಂ, ಕುಲುಮೆ ಎಣ್ಣೆ ಇನ್ನಿತರೆ ವಸ್ತುಗಳ ಬೆಲೆ ತೀವ್ರವಾಗಿ ಏರಿಕೆಯಾಗಿವೆ.

ಹಾಲಿನ ಸಂಗ್ರಹ ಪ್ರತಿದಿನ 55 ಲಕ್ಷ ಲೀ. ತಲುಪಿದ್ದು, 20-25 ಲಕ್ಷ ಲೀ. ಹೆಚ್ಚುವರಿಯಾಗಿ ಉಳಿಯುತ್ತಿದೆ. ಆದ್ದರಿಂದ 10 ಲಕ್ಷ ಲೀ. ಹಾಲನ್ನು ಪುಡಿಯನ್ನಾಗಿ ಪರಿವರ್ತನೆ ಮಾಡಬಲ್ಲ 3 ಹಾಲಿನ ಪುಡಿ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ 200 ಕೋಟಿ ರೂ. ಬಂಡವಾಳ ಅಗತ್ಯವಿದೆ. 'ಕ್ಷೀರಭಾಗ್ಯ' ಯೋಜನೆಯಡಿ ಶಾಲಾ ಮಕ್ಕಳಿಗೆ ಸದ್ಯ ಪುಡಿ ನೀಡಲಾಗುತ್ತಿದೆ. ಫ್ಲೆಕ್ಸಿ ಪ್ಯಾಕ್‌ಗಳಲ್ಲಿ ಹಾಲು ನೀಡಲು ರಾಜ್ಯದ ನಾಲ್ಕು ಕಡೆ ಫ್ಲೆಕ್ಸಿ ಪ್ಯಾಕ್ ಘಟಕಗಳನ್ನು ಸ್ಥಾಪಿಸಲು 160 ಕೋಟಿ ರೂ. ಬಂಡವಾಳ ಬೇಕು. ಪಶು ಆಹಾರದ ಕಚ್ಚಾ ಸಾಮಗ್ರಿಗಳ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಾಲು ಉತ್ಪಾದಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಪಶು ಆಹಾರದಿಂದ ಪ್ರತಿ ತಿಂಗಳು 5 ಕೋಟಿ ರೂ. ನಷ್ಟ ಉಂಟಾಗುತ್ತಿದೆ ಎಂದು ವಿವರಣೆ ನೀಡಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com