ಗುಲ್ವಾಡಿ ನೆನಪು: ನಡುಮನೆ ಸಾಹಿತ್ಯ ಕಾರ್ಯಕ್ರಮ

ಕುಂದಾಪುರ: ಸಂತೋಷ್ ಕುಮಾರ್ ಗುಲ್ವಾಡಿ ನಾಡು ಕಂಡ ಗೌರವಾನ್ವಿತ ಪತ್ರಕರ್ತ. ಸಂಸ್ಕಾರವಂತ ಕುಟುಂಬದಿಂದ ಬಂದ ಅವರು ಎಲ್ಲ ವಿಷಯಗಳ ಬಗ್ಗೆ ಗಾಢವಾದ ಆಸಕ್ತಿ ಹೊಂದಿದ್ದವರು. ಬರವಣಿಗೆಯ ಹವ್ಯಾಸ ನವಭಾರತದ ಮೂಲಕ ಅವರನ್ನು ಪತ್ರಕರ್ತರಾಗಿ ನಾವು ಕಾಣುವಂತಾಯಿತು. ತದನಂತರದ ಅವರ ಬೆಳವಣಿಗೆ ಅಭೂತಪೂರ್ವ. ಆದರೂ ಅವರೊಬ್ಬ ವಂಚಿತ ಪ್ರತಿಭಾವಂತ ಎಂಬ ಅಳುಕು ಕಾಡುತ್ತಿದೆ ಎಂದು ಪತ್ರಿಕೋದ್ಯಮ ಉಪನ್ಯಾಸಕಿ ವೌಲ್ಯ ಜೀವನ್ ಸುಳ್ಯ ಹೇಳಿದರು. 

ಗುಲ್ವಾಡಿಯ ತೋಟದ ಮನೆಯಲ್ಲಿ ಭಾನುವಾರ ಜರುಗಿದ ಪತ್ರಕರ್ತ ದಿ. ಸಂತೋಷ ಕುಮಾರ ಗುಲ್ವಾಡಿ ಅವರ ನೆನಪು ಹಾಗೂ 79ನೇ ನಡುಮನೆ ಸಾಹಿತ್ಯ ಕಾರ್ಯಕ್ರಮದಲ್ಲಿ ಗುಲ್ವಾಡಿ ಸಂಸ್ಮರಣೆ ಮಾಡಿದರು. 

ನಾಲ್ಕು ದಶಕಗಳ ಪತ್ರಿಕಾ ಜೀವನದಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆ, ರಾಜಕೀಯ, ಸಾಮಾಜಿಕ ಹೀಗೆ ಪ್ರತಿಯೊಂದು ಬೆಳಕು ಚೆಲ್ಲಿದ ಅಪರೂಪದ ಪತ್ರಕರ್ತರು. ಅವರನ್ನು ನೆನೆಯುವುದು ಗೌರವದಾಯಕ ಎಂದು ಅಭಿಪ್ರಾಯಪಟ್ಟರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ದಿ. ಸಂತೋಷಕುಮಾರ ಗುಲ್ವಾಡಿಯವರ ಪತ್ರ ಸಂಕಲನ ಬಿಡುಗಡೆಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಪ್ರಾಚ್ಯ ವಸ್ತುಗಳ ಸಂಗ್ರಹಾಲಯ ಅಂಟಿಕ್ ಗ್ಯಾಲರಿ ಉದ್ಘಾಟಿಸಿ ಸಂತೋಷಕುಮಾರ ಗುಲ್ವಾಡಿಯವರೊಂದಿಗಿನ ಒಡನಾಟ ಸ್ಮರಿಸಿದರು. 

ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಾಹಿತಿ ಕು.ಗೋ.(ಎಚ್. ಗೋಪಾಲ ಭಟ್) ಹಾಗೂ ಹಾಜಿ ಕೆ.ಎ. ಮಹಮದ್ ಮುನೀರ್ ಅವರಿಗೆ ಸಂತೋಷಕುಮಾರ ಗುಲ್ವಾಡಿ ಗೌರವ ಪುರಸ್ಕಾರ ವಿತರಿಸಿ ಸನ್ಮಾನಿಸಲಾಯಿತು. 

ನಡುಮನೆ ಸಾಹಿತ್ಯ ಕಾರ್ಯಕ್ರಮ: ಬಳಿಕ ನಡುಮನೆ ಸಾಹಿತ್ಯ ಕಾರ್ಯಕ್ರಮ ಜರುಗಿತು. ನಡುಮನೆ ಸಂಚಾಲಕ ಶ್ರೀನಿವಾಸ ಉಪಾಧ್ಯ 9 ವರ್ಷಗಳ ಹಿಂದೆ ಆರಂಭಗೊಂಡ ನಡುಮನೆ ಸಾಹಿತ್ಯ ಕಾರ್ಯಕ್ರಮ ಗುಲ್ವಾಡಿಯ ತೋಟದ ಮನೆಯಲ್ಲಿ ಎರಡನೆ ಬಾರಿಗೆ ನಡೆಯುತ್ತಿರುವುದು ಸಂತೋಷ ತಂದಿದೆ ಎಂದರು. 

ಆರೂರು ಮಂಜುನಾಥ ರಾವ್ ಚಾಲನೆ ನೀಡಿ ಆರೋಗ್ಯದ ಕುರಿತು ಮಾತನಾಡಿದರು. ಹಿರಿಯ ಸಾಹಿತಿ ಡಾ. ಎಚ್.ವಿ. ನರಸಿಂಹಮೂರ್ತಿ, ಶಾಂತಾರಾಮ ಸೋಮಯಾಜಿ, ಸಂಧ್ಯಾ ಶೆಣೈ ಉಡುಪಿ, ಶಿವಾನಂದ ಶೆಟ್ಟಿ ನಮ್ಮ ಭೂಮಿ, ಪ್ರದೀಪ್‌ಕುಮಾರ ಶೆಟ್ಟಿ ಕೆಂಚನೂರು, ರಾಜ್ ಬಲ್ಲಾಳ್, ಯು.ಎಸ್. ಶೆಣೈ, ಬೈಲೂರು ಉದಯಕುಮಾರ ಶೆಟ್ಟಿ, ಕೋಡಿ ರಮಾನಂದ ಕಾಮತ್, ತಲ್ಲೂರು ಇಗರ್ಜಿ ಧರ್ಮಗುರು ಸುನಿಲ್ ವೇಗಸ್, ಪ್ರಕಾಶ್ ಪಡಿಯಾರ್, ಗಣಪತಿ ಎಂ.ಎಂ., ಪ್ರಶಾಂತ್ ತೋಳಾರ್ ಪಾಲ್ಗೊಂಡಿದ್ದರು. 

ಕಾರ್ಯಕ್ರಮ ಸಂಚಾಲಕ ಯಾಕೂಬ್ ಖಾದರ್ ಗುಲ್ವಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಜತೆ ಕಾರ್ಯದರ್ಶಿ ಪಳ್ಳಿ ಉಸ್ಮಾನ್ ವಂದಿಸಿದರು. 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com