ನಕ್ಸಲ್ ಚಟುವಟಿಕೆಯ ಆರೋಪ: ಸರೋಜಾ ದೋಷಮುಕ್ತಿ, ಬಿಡುಗಡೆ

ಉಡುಪಿ: ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಒಟ್ಟು 22 ನಕ್ಸಲ್ ಚಟುವಟಿಕೆ ಪ್ರಕರಣಗಳಲ್ಲಿ ವರಳೆ ಸರೋಜ ಮತ್ತು ದೇವೇಂದ್ರ ಸೊರಬ ಆರೋಪಿಗಳಾಗಿದ್ದರು.
     2008ರಲ್ಲಿ ಶಿವಮೊಗ್ಗದಲ್ಲಿ ಬಂಧಿತರಾಗಿದ್ದ ಇವರಿಬ್ಬರನ್ನು ವಿಚಾರಣೆಗಾಗಿ ಉಡುಪಿ ಜಿಲ್ಲಾ ಪೊಲೀಸರಿಗೆ ಒಪ್ಪಿಸಲಾಗಿತ್ತು, ನಂತರ ಅವರು ಕಳೆದ 5 ವರ್ಷಗಳಿಂದ ಮೈಸೂರು ಜೈಲಿನಲ್ಲಿದ್ದರು. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ 12 ಪ್ರಕರಣಗಳು ಮತ್ತು ಕಾರ್ಕಳ ಮತ್ತು ಕುಂದಾಪುರ ತಾಲೂಕು ನ್ಯಾಯಾಲಯ ವ್ಯಾಪ್ತಿಯಲ್ಲಿ 9 ಪ್ರಕರಣಗಳಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಕಳೆದ ವರ್ಷವೇ ಖುಲಾಸೆ ಮಾಡಲಾಗಿತ್ತು. 2006ರಲ್ಲಿ ಹೆಬ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಮುನಿಯಾಲು ಗ್ರಾಮದ ಮರದ ವ್ಯಾಪಾರಿ ಸದಾನಂದ ಶೆಟ್ಟಿ ಎಂಬವರ ಮನೆಗೆ ನುಗ್ಗಿ ಜೀವ ಬೆದರಿಕೆ ಒಡ್ಡಿ, ಅವರ ಬೈಕ್ ಸುಟ್ಟ ಪ್ರಕರಣದಲ್ಲಿ ಇವರಿಬ್ಬರೂ ಭಾಗಿಗಳಾಗಿದ್ದರು ಎಂದು ಆರೋಪಿಸಲಾಗಿದ್ದು, ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಬುಧವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಎಂ. ಅಂಗಡಿ, ಆರೋಪಕ್ಕೆ ಸಾಕ್ಷ್ಯಾಧಾರಗಳಿಲ್ಲ ಎಂದು ಇಬ್ಬರನ್ನೂ ದೋಷಮುಕ್ತಗೊಳಿಸಿದ್ದಾರೆ. ಅವರ ಪರವಾಗಿ ಉಡುಪಿಯ ಹಿರಿಯ ನ್ಯಾಯವಾದಿ ಶಾಂತರಾಮ್ ಶೆಟ್ಟಿ ವಾದಿಸಿದ್ದರು.
ಸರೋಜ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಒರಳೆ ಗ್ರಾಮದ ನಿವಾಸಿ. ದೇವೇಂದ್ರ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ನಿವಾಸಿ.
      ಹೆಬ್ರಿಯ ಬೈಕ್ ಸುಟ್ಟ ಪ್ರಕರಣದ ಜೊತೆಗೆ, ನಕ್ಸಲ್‌ವಾದ ಪ್ರಸಾರ ಮಾಡಿದ್ದು, ಭಿತ್ತಿಪತ್ರ ಹಚ್ಚಿದ್ದು, ಕೊಲ್ಲೂರಿನಲ್ಲಿ ಸೇತುವೆ ನಾಶ ಮಾಡಿದ್ದು ಇತ್ಯಾದಿ ಅನೇಕ ಪ್ರಕರಣಗಳಿದ್ದವು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com