ಮೋದಿಯನ್ನು ಪ್ರಧಾನಿ ಮಾಡುವುದೊಂದೇ ದಾರಿ: ಸೂಲಿಬೆಲೆ


ಉಡುಪಿ: ದೇಶದಲ್ಲಿ ಕಾಂಗ್ರೆಸ್ ಆಡಳಿತದಿಂದ ಇಂದು ಭಾರತ ನಿರ್ಮಾಣವಾಗುತ್ತಿಲ್ಲ, ಭಾರತ ನಿರ್ನಾಮವಾಗುತ್ತಿದೆ. ದೇಶವನ್ನು ಕಾಂಗ್ರೆಸ್ ಕೈಯಿಂದ ಉಳಿಸಬೇಕಾದರೆ ಪರ್ಯಾಯವೊಂದು ಬೇಕಾಗಿದೆ. ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡುವುದೊಂದೇ ಈಗ ಉಳಿದಿರುವ ಪರ್ಯಾಯ ಎಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
    ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಮುಂಬಾಗ ಮೋದಿ ಅಭಿಮಾನಿ ಸಂಘಟನೆ 'ನಮೋ ಬ್ರಿಗೇಡ್‌'ನ ಉಡುಪಿ ಜಿಲ್ಲಾ ಘಟಕದ ಸಾರ್ವಜನಿಕ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
       ನಮ್ಮ ದೇಶದಲ್ಲೊಬ್ಬ ರೋಬೋಟ್ ಪ್ರಧಾನಿ ಇದ್ದಾರೆ, ಅದರ ರಿಮೋಟ್ ಸೋನಿಯಾ ಗಾಂಧಿ ಕೈಯಲ್ಲಿದೆ. ಅವರು ಗುಂಡಿಯೊತ್ತಿದರೆ ಮಾತ್ರ ಅದು ಚಟುವಟಿಕೆ ನಡೆಸುತ್ತದೆ ಎಂದು ಲೇವಡಿ ಮಾಡಿದ ಸೂಲಿಬೆಲೆ, ನರೇಂದ್ರ ಮೋದಿ ದೇಶಕ್ಕೆ ಕನಸು ಕೊಟ್ಟ ಅಪರೂಪದ ನಾಯಕ, ಸರ್ದಾರ್ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಅಟಲ್ ಬಿಹಾರಿ ವಾಜಪೇಯಿ ಅವರ ಗುಣಗಳನ್ನು ಮೋದಿ ಒಳಗೊಂಡಿರುವುದು ಮಾತ್ರವಲ್ಲ, ದೇಶಪ್ರೇಮದ ವಿಚಾರದಲ್ಲಿ ಅವರಿಗಿಂತಲು ಒಂದು ಹೆಜ್ಜೆ ಮುಂದಿದ್ದಾರೆ ಎಂದರು.
     ನಮೋ ಬ್ರಿಗೇಡ್‌ನ ನಿತ್ಯಾನಂದ ವಿವೇಕವಂಶಿ ಮಾತನಾಡಿ, ಮೋದಿ ಪ್ರಧಾನಿಯಾದರೆ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಯು. ಆರ್. ಅನಂತಮೂರ್ತಿ ದೇಶ ಬಿಡುವುದಿದ್ದರೆ ಒಳ್ಳೆಯದೇ ಆಯಿತು. ರಾಷ್ಟ್ರದ್ರೋಹಿಗಳು ದೇಶ ಬಿಡುವುದು ಉತ್ತಮ. ಬೇಕಿದ್ದರೆ ಯಾತ್ರಾ ಖರ್ಚು ನಾವೇ ಒದಗಿಸುತ್ತೇವೆ ಎಂದು ಟೀಕಿಸಿದರು.
    ನಮೋ ಬ್ರಿಗೇಡ್ ಜಿಲ್ಲಾ ಸಂಚಾಲಕ ಅಭಿನಂದನ್ ಅಡ್ಯಂತಾಯ ಇದ್ದರು. ಶ್ರೀಕಾಂತ್ ಶೆಟ್ಟಿ ನಿರೂಪಿಸಿದರು. ಇದಕ್ಕೆ ಮೊದಲು ಉಡುಪಿಯ ಜೋಡುಕಟ್ಟೆಯಿಂದ ಮಣಿಪಾಲವರೆಗೆ ನೂರಾರು ದ್ವಿಚಕ್ರ ವಾಹನಗಳ ಬೈಕ್ ರ್ಯಾಲಿ ನಡೆಯಿತು. ಹಿರಿಯ ಸಾರಿಗೆ ಉದ್ಯಮಿ ಪಾಂಗಾಳ ರಬೀಂದ್ರ ನಾಯಕ್ ರ್ಯಾಲಿಯನ್ನು ಉದ್ಘಾಟಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಉದಯಕುಮಾರ್ ಶೆಟ್ಟಿ, ಮಾಜಿ ಶಾಸಕ ಕೆ. ರಘುಪತಿ ಭಟ್, ಯುವಮೋರ್ಚಾ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಸಂತೋಷ್ ಕುಮಾರ್, ಅನಿಲ್ ಪಾಲನ್, ಶಿವರಾಮ ಶೆಟ್ಟಿ ಮೊದಲಾದವರು ರ್ಯಾಲಿಯ ನೇತತ್ವ ವಹಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com