ಮಡಗಾಂವ್‍ದಿಂದ ಮಂಗಳೂರಿಗೆ ಹೊಸ ಪ್ಯಾಸೆಂಜರ್ ರೈಲು ಕಾರಾವರ-ಯಶವಂತಪುರಕ್ಕೆ ಪ್ರತಿನಿತ್ಯ ರೈಲು

ಕುಂದಾಪುರ: ಹುಬ್ಬಳ್ಳಿಯಲ್ಲಿ ನಡೆದ ನೈಋತ್ಯ ರೈಲ್ವೆ ವಲಯ ಮಟ್ಟದ ಬಳಕೆದಾರರ ಸಭೆಯಲ್ಲಿ ವಾಸ್ಕೋದಿಂದ ಮಂಗಳೂರಿಗೆ ಹೊಸ ಪ್ಯಾಸೆಂಜರ್ ರೈಲು ಮತ್ತು ಕಾರಾವರ-ಯಶವಂತಪುರ(ಬೆಂಗಳೂರು) ಹಗಲು ರೈಲನ್ನು ಪ್ರತಿದಿನ ಓಡಿಸುವ ಕುರಿತು ಗಮನಾರ್ಹ ಚರ್ಚೆಗಳು ನಡೆಯಿತು.
      ರೈಲ್ವೆಯ ಹಿರಿಯ ವಲಯಾಧಿಕಾರಿ ಏ.ಕೆ. ಮಿತ್ತಲ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ಧ ಸಭೆಯಲ್ಲಿ ಕರಾವಳಿ ಭಾಗದ ವಲಯ ಸದಸ್ಯ ಕುಂದಾಪುರದ ರಾಧಾಕೃಷ್ಣ ಶೆಣೈ ಕರಾವಳಿ ಭಾಗದ ಹಲವು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.
         ಮನವಿಗೆ ಸ್ಪಂದಿಸಿದ ವಲಯ ಅಧಿಕಾರಿ ಏ.ಕೆ. ಮಿತ್ತಲ್ ವಾಸ್ಕೋದ ಬದಲಿಗೆ ಮಡಗಾಂವ್‍ದಿಂದ ಮಂಗಳೂರಿಗೆ ಹೊಸ ಪ್ಯಾಸೆಂಜರ್ ಅಥವಾ ಇಂಟರ್‍ಸಿಟಿ ರೈಲನ್ನು ಆರಂಭಿಸುವಂತೆ ಕೊಂಕಣರೈಲ್ವೆ ವಿಭಾಗಕ್ಕೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು. ಕಾರಾವರ-ಯಶವಂತಪುರ(ಬೆಂಗಳೂರು) ಹಗಲು ರೈಲನ್ನು ಈಗಿರುವ 5.30ರ ಬದಲಾಗಿ 6.30ಕ್ಕೆ ಆರಂಭಿಸಲು ಅದರ ಸಂಚಾರ ಅವಧಿಯನ್ನು ಕಡಿತಗೊಳಿಸಲು ಮತ್ತು ವಾರಕ್ಕೆ ಮೂರು ಬಾರಿಯ ಬದಲಾಗಿ ಪ್ರತಿನಿತ್ಯ ಓಡಿಸಲು ಶಿಫಾರಸ್ಸನ್ನು ರೈಲ್ವೆ ಮಂಡಳಿಗೆ ಕಳುಹಿಸಲು ತೀರ್ಮಾನಿಸಿರುವ ಜೊತೆಗೆ ರೈಲಿಗೆ ಅಂಕೋಲದಲ್ಲಿ ನಿಲುಗಡೆಗೊಳಿಸಲು ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಅಧಿಕಾರಿಗಳು ಭರವಸೆ ನೀಡಿದರು. ಕುಣಿಗಲ್‍ನಲ್ಲಿ ರೈಲ್ವೆ ಮಾರ್ಗದ ಕಾಮಗಾರಿ ಅಪೂರ್ಣಗೊಂಡಿದ್ದು, ಅದು ಪೂರ್ಣಗೊಂಡ ಬಳಿಕ ಕಾರಾವರ-ಯಶವಂತಪುರ ರಾತ್ರಿ ರೈಲಿನ ಪ್ರಯಾಣದ ಅವಧಿ 3ಗಂಟೆಯಷ್ಟು ಕಡಿಮೆಯಾಗುವುದು ಎಂಬ ವಿಚಾರವನ್ನು ಸಭೆಯ ಗಮನಕ್ಕೆ ತರಲಾಯಿತು. ಸುಬ್ರಹ್ಮಣ್ಯದಿಂದ ನಿಜಾಮುದ್ದಿನಿಗೆ ಕೊಂಕಣ ರೈಲ್ವೆ ಮಾರ್ಗದಲ್ಲಿ ಹೊಸ ರೈಲು ಓಡಿಸುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಅದರ ಸಾಧಕ ಭಾಧಕಗಳನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕೆ ಮುಂದಾಗುವುದಾಗಿ ಸಭೆಗೆ ಅಧಿಕಾರಿಗಳು ತಿಳಿಸಿದರು.
ಈ ವಲಯಮಟ್ಟದ ಸಭೆಯಲ್ಲಿ ಗೋವಾ ಮತ್ತು ಕರ್ನಾಟಕದ ನೈಋತ್ಯ ವಲಯದ ಶಾಸಕರು, ಚೆಂಬರ್ ಆಫ್ ಕಾಮರ್ಸ್ ಪ್ರತಿನಿಧಿಗಳು, ವಲಯಮಟ್ಟದ ನಾಮಾಂಕಿತ ಪ್ರತಿನಿಧಿಗಳು ಹಾಗೂ ರೈಲ್ವೆ ಹಿರಿಯ ಅಧೀಕಾರಿಗಳು ಪಾಲ್ಗೊಂಡಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com